ಮುಡಾ : ಸಿಎಂ ವಿರುದ್ಧ ತನಿಖೆಗೆ ಅನುಮತಿ - ರಾಜ್ಯಪಾಲರ ವಿರುದ್ಧ ಕಾಂಗ್ರೆಸ್ ಆಕ್ರೋಶ

| Published : Aug 20 2024, 12:50 AM IST / Updated: Aug 20 2024, 04:27 AM IST

ಸಾರಾಂಶ

ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ವಿರುದ್ಧ ತನಿಖೆಗೆ ರಾಜ್ಯಪಾಲರು ಅನುಮತಿ ನೀಡಿರುವುದನ್ನು ಖಂಡಿಸಿ ಕಾಂಗ್ರೆಸ್ ಹಾಗೂ ಕುರುಬರ ಸಂಘದಿಂದ ಪ್ರತಿಭಟನೆ ನಡೆಯಿತು. ರಾಜ್ಯಪಾಲರು ಕೇಂದ್ರ ಸರ್ಕಾರದ ಏಜೆಂಟರಂತೆ ವರ್ತಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

 ಬಂಗಾರಪೇಟೆ :  ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ವಿರುದ್ಧ ತನಿಖೆಗೆ ರಾಜ್ಯಪಾಲರು ಅನುಮತಿ ನೀಡಿರುವುದನ್ನು ಖಂಡಿಸಿ ಕಾಂಗ್ರೆಸ್ ಹಾಗೂ ಕುರುಬರ ಸಂಘದಿಂದ ಪಟ್ಟಣದಲ್ಲಿ ಪ್ರತಿಭಟನಾ ರ‍್ಯಾಲಿ ನಡೆಸಿ, ರಾಜ್ಯಪಾಲರನ್ನು ವಾಪಸ್ ಕರೆಸಿಕೊಳ್ಳಬೇಕೆಂದು ಒತ್ತಾಯಿಸಲಾಯಿತು. ಪಟ್ಟಣದ ಕಾಂಗ್ರೆಸ್ ಭವನದಿಂದ ಆರಂಭಗೊಂಡ ಪ್ರತಿಭಟನಾ ರ‍್ಯಾಲಿ ತಾಲೂಕು ಕಚೇರಿ ತಲುಪಿ ತಹಸೀಲ್ದಾರ್ ವೆಂಕಟೇಶಪ್ಪರಿಗೆ ಮನವಿ ಪತ್ರ ಸಲ್ಲಿಸಿತು.

ಗೌರ್ನರ್‌ ಕೇಂದ್ರದ ಏಜೆಂಟ್‌

ಸಾರ್ವಜನಿಕ ಆಸ್ಪತ್ರೆ ವೃತ್ತದಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಎಸ್.ಎನ್.ನಾರಾಯಣಸ್ವಾಮಿ, ಸಂವಿಧಾನ ರಕ್ಷಣೆಗೆ ಇರುವ ರಾಜ್ಯಪಾಲರು ಕೇಂದ್ರ ಸರ್ಕಾರದ ಏಜೆಂಟರಂತೆ ವರ್ತಿಸಿ ಅವರ ಕೈಗೊಂಬೆಯಾಗಿದಾರೆ,ಇಂತಹ ರಾಜ್ಯಪಾಲರು ರಾಜ್ಯಕ್ಕೆ ಅನಗತ್ಯವಾಗಿದ್ದು ಕೂಡಲೇ ರಾಷ್ಟಪತಿಗಳು ಅವರನ್ನು ವಾಪಸ್ ಕರೆಸಿಕೊಳ್ಳಬೇಕೆಂದು ಆಗ್ರಹಿಸಿದರು. ಕಾಂಗ್ರೆಸ್‌ ಹೆದರುವುದಿಲ್ಲ

ರಾಜ್ಯಪಾಲರ ವಿರುದ್ಧ ಗೋಬ್ಯಾಕ್ ಅಭಿಯಾನ ಹೆಸರಿನ ಫಲಕಗಳನ್ನು ಹಿಡಿದು ಆಕ್ರೋಶ ಹೊರಹಾಕಿದರು. ಬಿಜೆಪಿ ನಾಯಕರ ಅನೇಕರ ಮೇಲೆ ಸಹ ಗಂಭೀರ ಆರೋಪಗಳಿದ್ದರೂ ಅದಕೆ ದೂರು ನೀಡಿದರೂ ರಾಜ್ಯಪಾಲರು ತನಿಖೆಗೆ ಕ್ಯಾರೆ ಎನ್ನದೆ ಪ್ರಧಾನಿ ಮೋದಿ ಸೂಚನೆಯಂತೆ ಸಿದ್ದರಾಮಯ್ಯ ವಿರುದ್ದ ತನಿಖೆಗೆ ಸೂಚನೆ ನೀಡಿರುವುದಕ್ಕೆ ಕಾಂಗ್ರೆಸ್ ನಾಯಕರು ಹೆದರುವುದಿಲ್ಲ. ನಮ್ಮ ರಕ್ತ ಕೊಟ್ಟು ಅವರನ್ನು ರಕ್ಷಣೆ ಮಾಡುತ್ತೇವೆ ಎಂದರು.

ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಗೋಪಾಲಗೌಡ,ಕೆ.ವಿ.ನಾಗರಾಜ್,ಚಂದ್ರುಕುಮಾರ್,ಡಿಸಿಸಿ ಬ್ಯಾಂಕಿನ ನಿರ್ದೇಶಕ ಗೋವಿಂದರಾಜು,ಕೆಡಿಎ ಅಧ್ಯಕ್ಷ ಗೋಪಾಲರೆಡ್ಡಿ,ಪುರಸಭೆ ಸದಸ್ಯರಾದ ಶಂಷುದ್ದಿನ್ ಬಾಬು,ಸಾದಿಕ್ ಪಾಷ,ರಾಜನ್,ಪ್ರಭಾಕರ್,ಮಣಿ,ಸುಹೇಲ್,ಮುಖಂಡರಾದ ಹಿಂದುಳಿದ ವರ್ಗಗಳ ಅಧ್ಯಕ್ಷ ಕುಂಬಾರಪಾಳ್ಯ ಮಂಜುನಾಥ್,ಕುರುಬರ ಸಂಘದ  ಅಧ್ಯಕ್ಷ  ಎಲ್.ರಾಮ ಕೃಷ್ಣ.ಎಸ್.ಕೆ.ಜಯಣ್ಣ, ಕುಪೇಂದ್ರ, ವಿಜಯೇಂದ್ರ, ಅಣ್ಣಾದೊರೆ, ಜೀವನ್ ಇತರರು ಇದ್ದರು.