ಸಾರಾಂಶ
ಜಿಲ್ಲಾಡಳಿತ, ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಅಂತರರಾಷ್ಟ್ರೀಯ ಮಟ್ಟದ ಪ್ರತಿಷ್ಟಿತ ಕ್ರಿಕೆಟ್ ಕ್ರೀಡಾಂಗಣ ಕಾಮಗಾರಿಗೆ ಗುದ್ದಲಿ ಪೂಜೆ ನಡೆಸಲು ಕೆಲವರು ಮುಂದಾಗಿ ಅನಾವಶ್ಯಕ ಗೊಂದಲಗಳ ಸೃಷ್ಟಿಗೆ ಕಾರಣರಾಗಿದ್ದಾರೆ.
ಕೋಲಾರ : ಜಿಲ್ಲಾಡಳಿತ, ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಅಂತರರಾಷ್ಟ್ರೀಯ ಮಟ್ಟದ ಪ್ರತಿಷ್ಟಿತ ಕ್ರಿಕೆಟ್ ಕ್ರೀಡಾಂಗಣ ಕಾಮಗಾರಿಗೆ ಗುದ್ದಲಿ ಪೂಜೆ ನಡೆಸಲು ಕೆಲವರು ಮುಂದಾಗಿ ಅನಾವಶ್ಯಕ ಗೊಂದಲಗಳ ಸೃಷ್ಟಿಗೆ ಕಾರಣರಾಗಿದ್ದಾರೆ.
ಇದರಲ್ಲಿ ಜಿಲ್ಲಾಡಳಿತದ ವೈಫಲ್ಯವೂ ಎದ್ದು ಕಾಣುತ್ತಿದೆ.ಹಿಂದೆ ಡಿ.ಕೆ.ರವಿ ಜಿಲ್ಲಾಧಿಕಾರಿಯಾಗಿದ್ದಾಗ ಕೋಲಾರದ ಅಂತರಗಂಗೆ ಬೆಟ್ಟದಲ್ಲಿ ಸ್ಟೇಡಿಯಂ ನಿರ್ಮಿಸುವ ಪ್ರಯತ್ನವಾಯಿತಾದರೂ ಕ್ರೀಡಾಂಗಣಕ್ಕೆ ಇದು ಸೂಕ್ತ ಸ್ಥಳವಲ್ಲ ಎಂದು ಮನಗಂಡು ಕೈಬಿಡಲಾಗಿತ್ತು. ಈ ನಡುವೆ ಕೋಲಾರ ಸುತ್ತಮುತ್ತ ಸರ್ಕಾರಿ ಜಮೀನು ಲಭ್ಯತೆ ಕುರಿತು ಪರಿಶೀಲಿಸಿ ಅಂತಿಮವಾಗಿ ಹೋಳಲಿ ಸಮೀಪ ಈಗ ಮಂಜೂರಾಗಿರುವ ಜಮೀನು ಗುರುತಿಸಲಾಗಿತ್ತು.
ಸಚಿವರ ಬಳಿ ನಿಯೋಗ
ಕೆಎಸ್‌ಸಿಎ ಅಧ್ಯಕ್ಷರಾಗಿದ್ದ ಬ್ರಿಜೇಷ್ ಪಟೇಲ್ ಹಾಗೂ ಅಂದಿನ ಕಾರ್ಯದರ್ಶಿಗಳಾಗಿದ್ದ ಆರ್.ಸುಧಾಕರ್ ರಾವ್‌ರೊಂದಿಗೆ ಆತ್ಮೀಯರಾಗಿದ್ದ ಮಾಜಿ ಸಭಾಪತಿ ವಿ.ಆರ್.ಸುದರ್ಶನ್, 2016ರಲ್ಲಿ ಜಮೀನು ಮಂಜೂರು ಮಾಡಿಸಿಕೊಡಲು ಕೆಎಸ್‌ಸಿಎ ನಿಯೋಗ ಅಂದಿನ ಕಂದಾಯ ಸಚಿವರಾಗಿದ್ದ ಕಾಗೋಡು ತಿಮ್ಮಪ್ಪರಲ್ಲಿಗೆ ಕರೆದೊಯ್ದು ಮಾತುಕತೆ ನಡೆಸಿದ್ದರು.ಇದಾದ ನಂತರ ಸಿಎಂ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ರಮೇಶ್‌ಕುಮಾರ್ ಜತೆಗೂ ಮಾತನಾಡಿ, ಕೆಎಸ್‌ಸಿಎಗೆ ಜಮೀನು ಮಂಜೂರು ಮಾಡಿಸುವಲ್ಲಿ ಮುಖ್ಯಪಾತ್ರ ವಹಿಸಿದ್ದರು. ಈ ಹಿನ್ನಲೆಯಲ್ಲಿ 25-6-2018 ರಂದು ಸರ್ಕಾರ ಆದೇಶ ಹೊರಡಿಸಿ, ಕೋಲಾರ ತಾಲ್ಲೂಕಿನ ಹುತ್ತೂರು ಹೋಬಳಿ, ಹೊಳಲಿಯಲ್ಲಿ 16 ಎಕರೆ ಸರ್ಕಾರಿ ಗೋಮಾಳ ಜಮೀನನನ್ನು ಮಂಜೂರು ಮಾಡಿತ್ತು. ಜಿಲ್ಲಾಡಳಿತದ ನಿರಾಸಕ್ತಿ
2018 ರಿಂದ 2023ರ ನಡುವೆ ಬದಲಾದ ಸರ್ಕಾರಗಳು ಆಸಕ್ತಿ ತೆಗೆದುಕೊಳ್ಳದ ಕಾರಣ ಕ್ರೀಡಾಂಗಣ ನಿರ್ಮಾಣ ನನೆಗುದಿಗೆ ಬಿದ್ದಿತ್ತು. ಈ ನಡುವೆ ಕಳೆದ ಒಂದೂವರೆ ವರ್ಷದ ಹಿಂದೆಯೇ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಡಿಸಿಯವರಿಗೆ 17-6-2023 ರಂದೇ ಪತ್ರ ಬರೆದು ಸ್ಟೇಡಿಯಂ ನಿರ್ಮಾಣಕ್ಕೆ ಕ್ರಮವಹಿಸಲು ತಿಳಿಸಿದ್ದರು. ಆದರೆ ಈ ಬಗ್ಗೆ ಅದೇಕೋ ಜಿಲ್ಲಾಧಿಕಾರಿಗಳು ಆಸಕ್ತಿ ವಹಿಸಲಿಲ್ಲ.
ಶಂಕುಸ್ಥಾಪನೆಗೆ ಯತ್ನ
ಈ ನಡುವೆ ಜಿಲ್ಲಾಡಳಿತ, ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ತರಾತುರಿಯಲ್ಲಿ ಕೆಲವರು ಶಂಕುಸ್ಥಾಪನೆಗೆ ಮುಂದಾಗುವ ಮೂಲಕ ವಿನಾಕಾರಣ ಗೊಂದಲ ಸೃಷ್ಟಿಗೆ ಕಾರಣರಾಗಿದ್ದಾರೆ. ಇನ್ನಾದರೂ, ಜಮೀನು ಇರುವ ಸ್ಥಳೀಯ ಗ್ರಾಪಂ, ನಗರಾಭಿವೃದ್ದಿ ಪ್ರಾಧಿಕಾರ, ಜಿಲ್ಲಾಧಿಕಾರಿ ಅನುಮತಿ ಪಡೆದು, ಶಿಷ್ಟಾಚಾರದಡಿ ಜನಪ್ರತಿನಿಧಿಗಳಿಗೂ ಆಹ್ವಾನ ನೀಡಿ ಶೀಘ್ರ ಸ್ಟೇಡಿಯಂ ನಿರ್ಮಾಣ ಕಾಮಗಾರಿಗೆ ಮುಂದಾಗಲಿ ಎಂದು ಜಿಲ್ಲೆಯ ಕ್ರೀಡಾಪ್ರೇಮಿಗಳು ಒತ್ತಾಯಿಸಿದ್ದಾರೆ.