ಕೇಂದ್ರ ಸಚಿವ ಎಚ್‌ಡಿಕೆಯಿಂದ ಕಾಂಗ್ರೆಸ್ ಮೇಲೆ ಗೂಬೆ: ಶಿವನಂಜು ಆರೋಪ

| Published : Oct 23 2024, 12:49 AM IST

ಸಾರಾಂಶ

ಮೇಕೆದಾಟು ಯೋಜನೆಗೆ ಅನುಮತಿ ಕೊಡಿಸುವುದಾಗಿ ಭರವಸೆ ನೀಡಿ ಈಗ ತಮಿಳುನಾಡು ಸರ್ಕಾರವನ್ನು ಒಪ್ಪಿಸಿ ನಂತರ ಪ್ರಧಾನಿಗಳಿಂದ ೫ ನಿಮಿಷದಲ್ಲಿ ಒಪ್ಪಿಗೆ ಕೊಡಿಸುತೇನೆಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮೇಕೆದಾಟು ಯೋಜನೆಗೆ ಅನುಮತಿ ಕೊಡಿಸುವುದಾಗಿ ಭರವಸೆ ನೀಡಿ ಈಗ ತಮಿಳುನಾಡು ಸರ್ಕಾರವನ್ನು ಒಪ್ಪಿಸಿ ನಂತರ ಪ್ರಧಾನಿಗಳಿಂದ ೫ ನಿಮಿಷದಲ್ಲಿ ಒಪ್ಪಿಗೆ ಕೊಡಿಸುತೇನೆಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಶಿವನಂಜು ಆರೋಪಿಸಿದರು.

ಸದ್ಯ ಕೇಂದ್ರದಲ್ಲಿ ಪ್ರಭಾವಿ ಮಂತ್ರಿಯಾಗಿರುವ ಕುಮಾರಸ್ವಾಮಿ ಅವರು ಪ್ರಧಾನಿಗಳಿಂದ ಮೇಕೆದಾಟು ಯೋಜನೆಗೆ ಅನುಮತಿ ಕೊಡಿಸಿದಲ್ಲಿ ರಾಜ್ಯದ ರೈತರಿಗೆ ಬಹಳಷ್ಟು ಅನುಕೂಲವಾಗುತ್ತದೆ. ಕೇಂದ್ರ ಜಲಸಂಪನ್ಮೂಲ ಇಲಾಖೆ ಯೋಜನೆಗೆ ಒಪ್ಪಿಗೆ ಕೊಟ್ಟಿದೆ. ಹಾಗೆಯೇ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಡಿಪಿಆರ್ ಸಲ್ಲಿಸುವಂತೆ ತಿಳಿಸಿದ್ದಾರೆ. ಶೇ. ೬೩ರಷ್ಟು ಅರಣ್ಯ ಪ್ರದೇಶವಾಗಿರುವ ಕಾರಣ ಕೇಂದ್ರ ಪರಿಸರ ಮತ್ತು ಅರಣ್ಯ, ಹವಾಮಾನ ಬದಲಾವಣೆ ಇಲಾಖೆಯ ಒಪ್ಪಿಗೆ ಅಗತ್ಯವಿದ್ದು, ಕುಮಾರಸ್ವಾಮಿಯವರು ಮೊದಲು ಅನುಮತಿ ಕೊಡಿಸಲಿ ಎಂದು ಸವಾಲು ಹಾಕಿದರು.

ಕುಮಾರಸ್ವಾಮಿ ಅವರು ಮಂತ್ರಿಯಾದ ತಕ್ಷಣ ದೇವಧಾರಿ ಅರಣ್ಯ ಗಣಿಗಾರಿಕೆಗೆ ಮೊದಲ ಸಹಿ ಹಾಕುವ ಮೂಲಕ ಒಪ್ಪಿಗೆ ಕೊಡಬಹುದಾದರೆ, ತಮಿಳುನಾಡು-ಕರ್ನಾಟಕ ಎರಡೂ ರಾಜ್ಯಗಳ ನೀರಿನ ಜಟಿಲ ಸಮಸ್ಯೆಗೆ ಏಕೈಕ ಶಾಶ್ವತ ಪರಿಹಾರವಾಗಿರುವ ಮೇಕೆದಾಟು ಯೋಜನೆಗೆ ಏಕೆ ಅನುಮತಿ ಕೊಡಿಸಬಾರದು ಎಂದು ಪ್ರಶ್ನಿಸಿದರು.

ನಗರಸಭಾ ಸದಸ್ಯ ಶ್ರೀಧರ್, ಮುಖಂಡರಾದ ಕೀಲಾರ ಶಿವಲಿಂಗು, ಕೆ.ಎಲ್.ನಾಗೇಂದ್ರ, ವೆಂಕಟೇಶ್, ಕೀಲಾರ ಚನ್ನಪ್ಪ ಇತರರಿದ್ದರು.