ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರಕೋಲಾರ- ಚಿಕ್ಕಬಳ್ಳಾಪುರ ಅವಿಭಜಿತ ಜಿಲ್ಲೆಯ ಸಹಕಾರ ಕೇಂದ್ರ ಬ್ಯಾಂಕ್ (ಡಿಸಿಸಿ) ಆಡಳಿತ ಮಂಡಳಿ ಚುನಾವಣೆ ನಡೆಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಎರಡೂ ಜಿಲ್ಲೆಯ ಬ್ಯಾಂಕ್ ನಿರ್ದೇಶಕರು ಮಾಜಿ ಸಚಿವ ಕೆ.ಶ್ರೀನಿವಾಸಗೌಡ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಅಕ್ರಂ ಪಾಷರನ್ನು ಭೇಟಿ ಮಾಡಿ ಒತ್ತಾಯಿಸಿದರು. ನಗರದ ಜಿಲ್ಲಾ ಆಡಳಿತ ಕಚೇರಿಯ ಸಭಾಂಗಣದಲ್ಲಿ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿದ ನಿಯೋಗ ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿ ಅವಧಿ ೨೦೨೩ರ ನ.೧೧ಕ್ಕೆ ಪೂರ್ಣಗೊಂಡಿದ್ದು, ಮಂಡಳಿಗೆ ಚುನಾವಣೆ ನಡೆಸಬೇಕೆಂದು ಒತ್ತಾಯಿಸಿದರು.
ಕೋರ್ಟ್ ಸೂಚನೆ ಉಲ್ಲಂಘನೆಚುನಾವಣೆಯ ವಿಚಾರವು ನ್ಯಾಯಾಲಯ ಮೆಟ್ಟಿಲೇರಿ ವಿಚಾರಣೆಯು ಮುಗಿದಿದ್ದು, ಮೂರು ತಿಂಗಳಲ್ಲಿ ಚುನಾವಣೆ ನಡೆಸಬೇಕೆಂದು ಕೋರ್ಟ್ ಸೂಚಿಸಿತ್ತು. ಈ ಸಂಬಂಧವಾಗಿ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲೂ ಚುನಾವಣೆ ನಡೆಸಲು ಸರ್ವಾನುಮತದಿಂದ ತೀರ್ಮಾನಿಸಲಾಗಿತ್ತು. ಆದರೆ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮಾಜಿ ಸಚಿವ ಕೆ.ಶ್ರೀನಿವಾಸಗೌಡ ಮಾತನಾಡಿ, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಎರಡು ಜಿಲ್ಲೆಯ ರೈತರ ಜೀವನಾಡಿಯಾಗಿದೆ. ಮಹಿಳಾ ಸಂಘಟನೆಗಳ ಶಕ್ತಿಯಾಗಿದೆ, ಸ್ವಾವಲಂಬನೆಯ ಬದುಕು ರೂಪಿಸಿಕೊಟ್ಟಿತ್ತು. ಆಡಳಿತ ಮಂಡಳಿಯ ಅಧಿಕಾರವಧಿ ಮುಗಿದ ನಂತರ ರೈತರಿಗೆ ಮಹಿಳಾ ಸ್ವಸಹಾಯ ಸಂಘಗಳಿಗೆ ಯಾವುದೇ ಸೌಲಭ್ಯಗಳು ದೊರೆಯುತ್ತಿಲ್ಲ. ಕೂಡಲೇ ಚುನಾವಣೆ ನಡೆಸುವ ಮೂಲಕ ಆರ್ಹ ಫಲಾನುಭವಿಗಳಿಗೆ ಸೌಲಭ್ಯಗಳು ಲಭಿಸುವಂತಾಗಬೇಕೆಂದು ಹೇಳಿದರು.ಗೋವಿಂದಗೌಡರ ಸಾಧನೆ
ಕೋಲಾರ ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಈ ಹಿಂದೆ ಬಾಗಿಲು ಮುಚ್ಚುವ ಪರಿಸ್ಥಿತಿ ಉಂಟಾಗಿತ್ತು. ಆಗ ಬ್ಯಾಲಹಳ್ಳಿ ಗೋವಿಂದಗೌಡ ನೇತೃತ್ವದ ಆಡಳಿತ ಮಂಡಳಿ ಹಗಲು ರಾತ್ರಿ ಶ್ರಮಿಸಿ ಬ್ಯಾಂಕ್‌ನ್ನು ಉನ್ನತ ಮಟ್ಟಕ್ಕೆ ಅಭಿವೃದ್ಧಿಪಡಿಸಿದರು. ರೈತರಿಗೆ ಹಾಗೂ ಮಹಿಳಾ ಸ್ವಸಹಾಯ ಸಂಘಗಳಿಗೆ ಸುಲಭವಾಗಿ ಸಾಲ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಸ್ವಾವಲಭಿಗಳಾಗಿ ಬದುಕು ರೂಪಿಸಿಕೊಳ್ಳುವಂತೆ ಮಾಡಿದ್ದರು ಎಂದು ನೆನಪಿಸಿದರು.ಮಾಜಿ ನಿರ್ದೇಶಕ ಹನುಮಂತರೆಡ್ಡಿ ಮಾತನಾಡಿ, ವಿನಾಕಾರಣ ಚುನಾವಣೆ ವಿಳಂಬ ಮಾಡಿದರೆ ರೈತರು ಮತ್ತು ಮಹಿಳೆಯರು ಸಂಕಷ್ಟಕ್ಕೆ ತುತ್ತಾಗುವ ಸಂಭವ ಇದೆ, ಜಿಲ್ಲಾಡಳಿತ ಇತ್ತ ಗಮನ ಹರಿಸಿ ರೈತರಿಗೆ ಮತ್ತು ಮಹಿಳೆಯರಿಗೆ ವರದಾನವಾಗಿದ್ದ ಡಿ.ಸಿ.ಸಿ. ಬ್ಯಾಂಕ್ ದೇಗುಲವನ್ನು ಉಳಿಸುವ ಕೆಲಸ ಮಾಡ ಬೇಕೆಂದು ಎಂದು ಕೋರಿದರು. ಹಿತಶತ್ರುಗಳನ್ನು ದೂರವಿಡಿಚುನಾವಣೆಗಳು ಬರುವುದು ಹೋಗುವುದು ಸಹ ಆದರೆ ಕೆಲವರು ದುರುದ್ದೇಶ ಪೂರಕವಾಗಿ ಬ್ಯಾಂಕಿನ ಅಭಿವೃದ್ದಿ ಸಹಿಸದೆ ಅಡ್ಡಿಪಡಿಸುವುದು ಕೆಲವರ ದುರಾಭ್ಯಾಸವಾಗಿದೆ. ಅಂತಹ ಹಿತಶತ್ರುಗಳ ಮಾತಿಗೆ ಯಾವುದೇ ರೀತಿ ಮಾನ್ಯತೆ ನೀಡದೆ ಬಡವರ ಹಿತದೃಷ್ಠಿಯಿಂದ ಬ್ಯಾಂಕಿನ ಆಡಳಿತ ಮಂಡಳಿ ಚುನಾವಣೆಗೆ ಅಧಿಸೂಚನೆ ಪ್ರಕಟಿಸುವ ಮೂಲಕ ಸಹಕಾರ ಕ್ಷೇತ್ರವನ್ನು ಅಭಿವೃದ್ದಿ ಪಥದತ್ತ ಸಾಗಲು ಕೈಜೋಡಿಸಬೇಕೆಂದು ಮನವಿ ಮಾಡಿದರು.ಬ್ಯಾಂಕಿನಲ್ಲಿ ಆಡಳಿತ ಮಂಡಳಿ ಇಲ್ಲದ ಕಾರಣ ಬ್ಯಾಂಕಿನ ಅಧಿಕಾರಿಗಳು ಯಾರಿಗೂ ಸಾಲ ನೀಡಲು ಮುಂದಾಗುತ್ತಿಲ್ಲ. ಸೊಸೈಟಿಗಳು ಸಾಲ ಮಂಜೂರಾತಿಗೆ ಕಡತಗಳನ್ನು ತಂದರೆ ಅವುಗಳನ್ನು ಪಡೆದು ಮೂಲೆಗೆ ಎಸೆಯುತ್ತಿದ್ದಾರೆ. ಯಾವುದೇ ರೀತಿಯ ಸಾಲಗಳಿಗೆ ಅನುಮೋದನೆ ನೀಡುತ್ತಿಲ್ಲ. ಅಧಿಕಾರಿಗಳು ಸಾಲ ನೀಡುವಲ್ಲಿ ನಿರಾಸಕ್ತಿ ತೋರುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.ಕ್ರಮ ಕೈಗೊಳ್ಳುವ ಭರವಸೆ
ಜಿಲ್ಲಾಧಿಕಾರಿ ಅಕ್ರಂ ಪಾಷ ನಿಯೋಗದ ಮನವಿಗೆ ಸ್ಪಂದಿಸಿ ಮಾತನಾಡಿ, ಬ್ಯಾಂಕಿನ ಚುನಾವಣೆ ಸಂಬಂಧವಾಗಿ ಸಹಕಾರ ಇಲಾಖೆಯ ಮುಖ್ಯ ಕಾರ್ಯದರ್ಶಿಗಳೊಂದಿಗೆ ಚರ್ಚಿಸಿ ಕ್ರಮವಹಿಸುವುದಾಗಿ ಭರವಸೆ ನೀಡಿದರು. ನಿಯೋಗದಲ್ಲಿ ಮಾಜಿ ನಿರ್ದೇಶಕರಾದ ಕೆ.ವಿ.ದಯಾನಂದ್, ಕೃಷ್ಟೇಗೌಡ, ಶಂಕರ ನಾರಾಯಣಗೌಡ, ಹೊಳಲಿ ಪ್ರಕಾಶ್, ತಾ.ಪಂ ಮಾಜಿ ಸದಸ್ಯ ಗೋಪಾಲಗೌಡ, ರೈತಸಂಘದ ಮುಖಂಡರಾದ ಅಬ್ಬಣಿ ಶಿವಪ್ಪ, ಪ್ರಭಾಕರ್ ಗೌಡ, ಆನಂದ್ ಇದ್ದರು.