ಸಂಸದ ಸುರೇಶ್‌ ನಿವಾಸಕ್ಕೆ ಬಿಜೆಪಿ ಮುತ್ತಿಗೆ ಯತ್ನ

| Published : Feb 05 2024, 01:45 AM IST / Updated: Feb 05 2024, 02:11 PM IST

DK Suresh
ಸಂಸದ ಸುರೇಶ್‌ ನಿವಾಸಕ್ಕೆ ಬಿಜೆಪಿ ಮುತ್ತಿಗೆ ಯತ್ನ
Share this Article
  • FB
  • TW
  • Linkdin
  • Email

ಸಾರಾಂಶ

ಕಾಂಗ್ರೆಸ್‌ ಸಂಸದ ಡಿ.ಕೆ.ಸುರೇಶ್‌ ಅವರ ದಕ್ಷಿಣ ಭಾರತ ಪ್ರತ್ಯೇಕ ರಾಷ್ಟ್ರದ ಬಗ್ಗೆ ಹೇಳಿಕೆ ಖಂಡಿಸಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಭಾನುವಾರ ಡಿ.ಕೆ.ಸುರೇಶ್‌ ನಿವಾಸಕ್ಕೆ ಮುತ್ತಿಗೆಗೆ ಯತ್ನಿಸಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕಾಂಗ್ರೆಸ್‌ ಸಂಸದ ಡಿ.ಕೆ.ಸುರೇಶ್‌ ಅವರ ದಕ್ಷಿಣ ಭಾರತ ಪ್ರತ್ಯೇಕ ರಾಷ್ಟ್ರದ ಬಗ್ಗೆ ಹೇಳಿಕೆ ಖಂಡಿಸಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಭಾನುವಾರ ಡಿ.ಕೆ.ಸುರೇಶ್‌ ನಿವಾಸಕ್ಕೆ ಮುತ್ತಿಗೆಗೆ ಯತ್ನಿಸಿದರು.

ಯುವ ಮೋರ್ಚಾ ಕಾರ್ಯಕರ್ತರು ಮೂರು ತಂಡಗಳಾಗಿ ಸದಾಶಿವನಗರದಲ್ಲಿರುವ ಸಂಸದ ಸುರೇಶ್‌ ಅವರ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು. 

ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಕೆಲ ಕಾಲ ವಾಗ್ವಾದ ನಡೆದು ನೂಕಾಟ ತಳ್ಳಾಟ ನಡೆಯಿತು. ಮುನ್ನೆಚ್ಚರಿಕಾ ಕ್ರಮವಾಗಿ ಸದಾಶಿವನಗರ ಠಾಣೆ ಪೊಲೀಸರು ಬಿಜೆಪಿ ಯುವ ಮೋರ್ಚಾ ಮುಖಂಡರಾದ ಅನಿಲ್‌ ಶೆಟ್ಟಿ, ಪ್ರದೀಪ್‌, ಪ್ರಶಾಂತ್‌, ಸಂದೀಪ್‌ ಸೇರಿದಂತೆ ಸುಮಾರು 40 ಮಂದಿಯನ್ನು ವಶಕ್ಕೆ ಪಡೆದು ಕರೆದೊಯ್ದರು. ಬಳಿಕ ಪ್ರಕರಣ ದಾಖಲಿಸಿ ಎಚ್ಚರಿಕೆ ನೀಡಿ ಬಿಟ್ಟು ಕಳುಹಿಸಿದ್ದಾರೆ.

ಮೂರು ತಂಡಗಳಾಗಿ ಪ್ರತಿಭಟನೆ: ಇದಕ್ಕೂ ಮುನ್ನ ಯುವ ಮೋರ್ಚಾ ಕಾರ್ಯಕರ್ತರು ಮೂರು ಕಡೆ ಪ್ರತಿಭಟನೆ ನಡೆಸಿದರು. ಅರಮನೆ ರಸ್ತೆಯ ಗಾಯತ್ರಿ ವಿಹಾರ ದ್ವಾರ, ಬಳ್ಳಾರಿ ರಸ್ತೆ ಹಾಗೂ ಡಿ.ಕೆ.ಸುರೇಶ್‌ ನಿವಾಸದ ಬಳಿ ವಿವಿಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಅರಮನೆ ರಸ್ತೆ ದಾಟಿಕೊಂಡು ಡಿ.ಕೆ.ಸುರೇಶ್‌ ಅವರ ಮನೆಯತ್ತ ದೌಡಾಯಿಸಲು ಮುಂದಾದ ಪ್ರತಿಭಟನಾಕಾರರ ಎರಡು ತಂಡಗಳನ್ನು ಪೊಲೀಸರು ಮಾರ್ಗ ಮಧ್ಯೆಯೇ ತಡೆದರು. 

ಇದೇ ವೇಳೆ ಸುರೇಶ್‌ ಅವರ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಮತ್ತೊಂದು ತಂಡವನ್ನು ಪೊಲೀಸರು ವಶಕ್ಕೆ ಪಡೆದರು. ಪ್ರತಿಭಟನಾಕಾರರು ಜೈ ಶ್ರೀರಾಮ್‌ ಘೋಷಣೆ ಕೂಗಿದ್ದು, ಈ ವೇಳೆ ಕೆಲ ಪೊಲೀಸರು ಮತ್ತು ಪ್ರತಿಭಟನಾಕರರ ನಡುವೆ ಹೈಡ್ರಾಮವೇ ನಡೆಯಿತು.

ಟ್ರಾಫಿಕ್‌ ಜಾಮ್‌: ಯುವ ಮೋರ್ಚಾ ಕಾರ್ಯಕರ್ತರು ಅರಮನೆ ರಸ್ತೆಯಲ್ಲಿ ಪ್ರತಿಭಟನೆ ಮಾಡಿದ ಪರಿಣಾಮ ವಾಹನ ಸಂಚಾರಕ್ಕೆ ಕೆಲ ಕಾಲ ಅಡಚಣೆಯಾಗಿ ಸಂಚಾರ ದಟ್ಟಣೆ ಉಂಟಾಯಿತು. 

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವವರು ಹಾಗೂ ವಿಮಾನ ನಿಲ್ದಾಣ ಕಡೆಯಿಂದ ಬರುವ ವಾಹನ ಸವಾರರು ಸಂಚಾರ ದಟ್ಟಣೆಯಲ್ಲಿ ಸಿಲುಕಿ ಪರದಾಡಿದರು. 

ಪರಿಸ್ಥಿತಿ ವಿಕೋಪಕ್ಕೆ ತಿರುಗುವುದನ್ನು ಅರಿತ ಪೊಲೀಸರು, ಪ್ರತಿಭಟನಾಕಾರರನ್ನು ಎಳೆದು ಬಿಎಂಟಸಿ ಬಸ್‌ಗೆ ಹತ್ತಿಸಿಕೊಂಡು ಕರೆದೊಯ್ದರು.

ಕಾರ್ಯಕರ್ತನ ಮೇಲೆ ಹಲ್ಲೆ ಆರೋಪ: ಸಂಸದ ಡಿ.ಕೆ. ಸುರೇಶ್‌ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದ ಯುವ ಮೋರ್ಚಾ ಕಾರ್ಯಕರ್ತ ಪ್ರಶಾಂತ್‌ ಮೇಲೆ ಪೊಲೀಸರು ಹಲ್ಲೆ ಮಾಡಿದ ಆರೋಪ ಕೇಳಿ ಬಂದಿದೆ. 

ಜೈ ಶ್ರೀರಾಮ್‌ ಘೋಷಣೆ ಕೂಗುತ್ತಾ ಸುರೇಶ್‌ ನಿವಾಸಕ್ಕೆ ಮುತ್ತಿಗೆ ಹಾಕಲು ಓಡಾಡುತ್ತಿದ್ದ ಪ್ರಶಾಂತ್‌ನನ್ನು ಪೊಲೀಸರು ವಶಕ್ಕೆ ಪಡೆದರು. 

ಈ ವೇಳೆ ಪ್ರತಿಭಟನಾಕಾರರು ಮತ್ತು ಪೊಲೀಸರು ನಡುವೆ ತಳ್ಳಾಟ-ನೂಕಾಟ ನಡೆದಿದ್ದು, ಪೊಲೀಸರು ಕಾರ್ಯಕರ್ತ ಪ್ರಶಾಂತ್‌ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.