ಫೆ.10ರಂದು ರಾಜ್ಯಕ್ಕೆ ಅಮಿತ್‌ ಶಾ ಭೇಟಿ

| Published : Feb 05 2024, 01:45 AM IST / Updated: Feb 05 2024, 11:13 AM IST

BSY Amith Shah

ಸಾರಾಂಶ

ಮುಂಬರುವ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿಯಲ್ಲಿ ನಿರ್ಣಾಯಕ ಪಾತ್ರ ವಹಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಈ ತಿಂಗಳ 9 ಮತ್ತು 10ರಂದು ಎರಡು ದಿನಗಳ ಕಾಲ ರಾಜ್ಯಕ್ಕೆ ಭೇಟಿ ನೀಡಲಿದ್ದು, ಪಕ್ಷದ ಹಿರಿಯ ನಾಯಕರೊಂದಿಗೆ ಸಭೆ ನಡೆಸುವ ಸಾಧ್ಯತೆಯಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮುಂಬರುವ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿಯಲ್ಲಿ ನಿರ್ಣಾಯಕ ಪಾತ್ರ ವಹಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಈ ತಿಂಗಳ 9 ಮತ್ತು 10ರಂದು ಎರಡು ದಿನಗಳ ಕಾಲ ರಾಜ್ಯಕ್ಕೆ ಭೇಟಿ ನೀಡಲಿದ್ದು, ಪಕ್ಷದ ಹಿರಿಯ ನಾಯಕರೊಂದಿಗೆ ಸಭೆ ನಡೆಸುವ ಸಾಧ್ಯತೆಯಿದೆ.

ಲೋಕಸಭಾ ಚುನಾವಣೆಯ ಸಿದ್ಧತೆ ಸೇರಿದಂತೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ, ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಹಿನ್ನೆಲೆಯಲ್ಲಿ ಸ್ಥಾನಗಳ ಹಂಚಿಕೆ ಹಾಗೂ ಕೆಲವು ಹಿರಿಯ ನಾಯಕರ ಅಹವಾಲುಗಳ ಬಗ್ಗೆ ಅಮಿತ್ ಶಾ ಅವರು ರಾಜ್ಯ ನಾಯಕರೊಂದಿಗೆ ಸಮಾಲೋಚನೆ ನಡೆಸುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ.

ಮೈಸೂರಿನ ಸುತ್ತೂರು ಜಾತ್ರಾ ಮಹೋತ್ಸವ ಮತ್ತು ಅದೇ ವೇಳೆ ಕಾಂಗ್ರೆಸ್ ನಾಯಕ ಶಾಮನೂರು ಶಿವಶಂಕರಪ್ಪ ಅವರ ಹೆಸರಿನ ಅತಿಥಿಗೃಹದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಲುವಾಗಿ ಅಮಿತ್ ಶಾ ಅವರು ಆಗಮಿಸುತ್ತಿದ್ದು, ಇದೇ ವೇಳೆ ಬೆಂಗಳೂರಿನಲ್ಲಿ ರಾಜ್ಯ ನಾಯಕರೊಂದಿಗೆ ಕೋರ್ ಕಮಿಟಿ ಸಭೆ ನಡೆಸುವ ಸಂಭ‍ವವಿದೆ ಎನ್ನಲಾಗಿದೆ.

ಇತ್ತೀಚೆಗೆ ರಾಜ್ಯ ಬಿಜೆಪಿಯ ನಾಯಕರಾದ ವಿ.ಸೋಮಣ್ಣ, ಬಸನಗೌಡ ಪಾಟೀಲ್ ಯತ್ನಾಳ ಅವರು ಅಹವಾಲು ಹೊತ್ತು ದೆಹಲಿಗೆ ತೆರಳಿದ್ದ ವೇಳೆ ಅಮಿತ್ ಶಾ ಅವರು ಫೆಬ್ರವರಿಯಲ್ಲಿ ಕರ್ನಾಟಕಕ್ಕೆ ಭೇಟಿ ನೀಡಿದ ವೇಳೆ ರಾಜ್ಯ ನಾಯಕರೊಂದಿಗೆ ಸಭೆ ನಡೆಸುತ್ತೇನೆ ಎಂಬ ಮಾಹಿತಿ ನೀಡಿದ್ದರು. ಹೀಗಾಗಿ, ಆ ಭೇಟಿ ಇದೇ ಆಗಬಹುದು ಎಂಬ ಮಾತು ಬಿಜೆಪಿ ಪಾಳೆಯದಿಂದ ಕೇಳಿಬರುತ್ತಿದೆ.