ಸಾರಾಂಶ
ಮಂಡ್ಯ : ಆಪರೇಷನ್ ಕಮಲದ ಉದ್ದೇಶದಿಂದಲೇ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಬಿಜೆಪಿ, ಜೆಡಿಎಸ್ ನಾಯಕರು ಪದೇ ಪದೇ ಈ ಸರ್ಕಾರ ಉಳಿಯಲ್ಲ ಎನ್ನುತ್ತಿದ್ದಾರೆ ಎಂದು ಸಚಿವ ಚಲುವರಾಯಸ್ವಾಮಿ ಕಿಡಿಕಾರಿದರು.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಪರೇಷನ್ ಕಮಲ ಮಾಡಿ ಬಹುಮತ ಹೊಂದಿರುವ ಕಾಂಗ್ರೆಸ್ ಸರ್ಕಾರ ಬೀಳಿಸಲು ನಮ್ಮ ಶಾಸಕರಿಗೆ 100 ಕೋಟಿ ರು. ಆಫರ್ ನೀಡಿರುವುದು ಇದೇನು ಹೊಸದೇನಲ್ಲ. ಈ ಹಿಂದೆಯೂ ಸರ್ಕಾರ ಬೀಳಿಸಲು 50 ಕೋಟಿ ರು. ಆಫರ್ ನೀಡಿದ್ದರು. ಈಗ ಅದು ಡಬ್ಬಲ್ ಆಗಿದೆ ಅಷ್ಟೆ ಎಂದು ಆರೋಪಿಸಿದರು.
ಈ ಹಿಂದೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಬಿ.ಎಸ್.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಲು ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರನ್ನು ಆಪರೇಷನ್ ಮಾಡಿದ್ದರು. ಈ ವೇಳೆ ಎಷ್ಟು ಹಣ ನೀಡಿದರು ಎಂಬುವ ಮಾಹಿತಿ ನನಗಿಲ್ಲ ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ ಬಹುಮತದೊಂದಿಗೆ ಸರ್ಕಾರ ರಚಿಸಿದೆ. ಆದರೂ ವಿಪಕ್ಷ ನಾಯಕರು ಉಪ ಚುನಾವಣೆಯಲ್ಲಿಯೂ ಕಾಂಗ್ರೆಸ್ ಸರ್ಕಾರ ಉರುಳಿಸುವ ಮಾತನ್ನು ಹೇಳಿದ್ದಾರೆ ಎಂದ ಮೇಲೆ ಇಲ್ಲಿ ಆಪರೇಷನ್ ಕಮಲ ನಡೆಯುತ್ತಿದೆ ಎಂಬುದೇ ಆಗಿದೆ ಎಂದರು.
ನಾವು ಹಗರಣಗಳನ್ನು ಮಾಡಿಲ್ಲ. ನಮ್ಮದು ಯಾವುದಾದರೂ ಸಾಬೀತು ಮಾಡಿದ್ದಾರಾ. ಸಿಎಂ ಸೇರಿದಂತೆ ಹಲವರ ಮೇಲೆ ಆರೋಪ ಮಾಡಿದ್ದಾರೆ. ಅವರು ಒಂದನ್ನೂ ನಿರೂಪಿಸಿಲ್ಲ. ಆಪರೇಷನ್ ಕಮಲದ ಮೂಲಕ ನಮ್ಮ ಸರ್ಕಾರ ತೆಗೆಯಲು ಮುಂದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಂಪನಿಗಳಿಂದ ಎಚ್ಡಿಕೆ ರೋಲ್ ಕಾಲ್:
ನಮ್ಮ ಶಾಸಕರನ್ನು ಸಂಪರ್ಕ ಮಾಡಿರೋದು ಸತ್ಯ. ಆಡಿಯೋ ವಿಡಿಯೋ ಯಾರ ಬಳಿ ಇದೆಯೋ ಅವರು ಬಿಡುಗಡೆ ಮಾಡುತ್ತಾರೆ. ಮಗನ ಚುನಾವಣೆಗಾಗಿ ನೂರಾರು ಕಂಪನಿಗಳಿಂದ ಎಚ್.ಡಿ.ಕುಮರಸ್ವಾಮಿ ಅವರು ರೋಲ್ ಕಾಲ್ ಮಾಡಿ ಸಾವಿರಾರು ಕೋಟಿ ಹಣ ಪಡೆದಿದ್ದಾರೆ ಎಂದು ದೂರಿದರು.
ಬಿಜೆಪಿ 40% ಕಮಿಷನ್ ಆರೋಪಕ್ಕೆ ತಪ್ಪಿತಸ್ಥರ ತಲೆ ದಂಡವಾಗಿದೆ. ಚನ್ನಪಟ್ಟಣ, ಶಿಗ್ಗಾವಿ ಚುನಾವಣೆಯಲ್ಲಿ ಎಷ್ಟು ಖರ್ಚು ಆಗಿದೆ ಗೊತ್ತಾ?, ಜೆಡಿಎಸ್-ಬಿಜೆಪಿ ಅವರ ಜೊತೆ ನಾವು ಓಡೋಕೆ ನಮಗೆ ಆಗಿಲ್ಲ. ಬದಲಿಗೆ ಗ್ಯಾರಂಟಿ ಮುಂದಿಟ್ಟುಕೊಂಡು ಮತಕ್ಕಾಗಿ ಬೇಡಿದ್ದೇವೆ ಎಂದು ವ್ಯಂಗ್ಯವಾಡಿದರು.
ಪಾಪ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ತಾಕತ್ ಜಾಸ್ತಿ ಇದೆ. ನಮಗೆ ತಾಕತ್ ಸ್ವಲ್ಪ ಕಡಿಮೆ ಇದೆ. ಮೊದಲು ದಾಖಲೆ ಬಿಡುಗಡೆ ಮಾಡಲಿ. ತಾಕತ್ ಕಡಿಮೆ ಇರೋ ನಾವು ಆ ಮೇಲೆ ದಾಖಲೆ ಬಿಡುಗಡೆ ಮಾಡುತ್ತೇವೆ ಎಂದು ತಿರುಗೇಟು ನೀಡಿದರು.