ಸಾರಾಂಶ
ರಾಜ್ಯದಲ್ಲಿ ಆಪರೇಷನ್ ಕಮಲಕ್ಕೆ ಸಂಬಂಧಿಸಿ ಮಂಡ್ಯ ಶಾಸಕ ಪಿ.ರವಿಕುಮಾರ್(ಗಣಿಗ ರವಿ) ಮತ್ತೆ ‘ಬಾಂಬ್’ ಸಿಡಿಸಿದ್ದಾರೆ. ಯಾವ್ಯಾವ ಹೋಟೆಲ್, ಏರ್‌ಪೋರ್ಟ್, ಗೆಸ್ಟ್ ಹೌಸ್‌ನಲ್ಲಿ ಸಂಪರ್ಕಿಸಿದ್ದಾರೆ ಎಂಬೆಲ್ಲ ಮಾಹಿತಿ ಇದೆ ಎಂದು ಹೇಳಿದ್ದಾರೆ.
ಮಂಡ್ಯ : ರಾಜ್ಯದಲ್ಲಿ ಆಪರೇಷನ್ ಕಮಲಕ್ಕೆ ಸಂಬಂಧಿಸಿ ಮಂಡ್ಯ ಶಾಸಕ ಪಿ.ರವಿಕುಮಾರ್(ಗಣಿಗ ರವಿ) ಮತ್ತೆ ‘ಬಾಂಬ್’ ಸಿಡಿಸಿದ್ದಾರೆ. ರಾಜ್ಯ ಸರ್ಕಾರ ಕೆಡವಲು ಬಿಜೆಪಿಯವರು ಕಾಂಗ್ರೆಸ್ ಶಾಸಕರಿಗೆ ಆಮಿಷ ಒಡ್ಡುತ್ತಿರುವುದು 50 ಕೋಟಿ ಅಲ್ಲ, ತಲಾ 100 ಕೋಟಿ ರು. ಎಂದು ಆರೋಪಿಸಿರುವ ಅವರು, ಕಿತ್ತೂರು ಶಾಸಕ ಬಾಬಾ ಸಾಹೇಬ್ ಪಾಟೀಲ್, ಚಿಕ್ಕಮಗಳೂರು ಶಾಸಕ ಎಚ್.ಡಿ.ತಮ್ಮಣ್ಣ ಅವರನ್ನು ಪ್ರತಿಪಕ್ಷದವರು ಸಂಪರ್ಕಿಸಿದ್ದಾರೆ. ಯಾವ್ಯಾವ ಹೋಟೆಲ್, ಏರ್‌ಪೋರ್ಟ್, ಗೆಸ್ಟ್ ಹೌಸ್‌ನಲ್ಲಿ ಸಂಪರ್ಕಿಸಿದ್ದಾರೆ ಎಂಬೆಲ್ಲ ಮಾಹಿತಿ ಇದೆ ಎಂದು ಹೇಳಿದ್ದಾರೆ.
ಶಾಸಕರಿಗೆ ಆಮಿಷ ನೀಡಿರುವ ಕುರಿತ ಆಡಿಯೋ, ವಿಡಿಯೋ ಸೇರಿ ಹಲವು ದಾಖಲೆಗಳು ನಮ್ಮ ಬಳಿ ಇವೆ. ಅವುಗಳನ್ನು ಶೀಘ್ರ ಮಾಧ್ಯಮದ ಮೂಲಕ ಬಿಡುಗಡೆ ಮಾಡಲಾಗುವುದು ಎಂದೂ ಘೋಷಿಸಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಬಿಜೆಪಿ-ಜೆಡಿಎಸ್‌ನವರು ರಾಜ್ಯ ಸರ್ಕಾರ ಬೀಳಿಸುವ ತವಕದಲ್ಲಿದ್ದಾರೆ. ಒಟ್ಟು 50 ಕಾಂಗ್ರೆಸ್ ಶಾಸಕರಿಗೆ ಆಮಿಷ ಒಡ್ಡಲಾಗಿದೆ. ಶಾಸಕರಿಗೆ ತಲಾ 100 ಕೋಟಿ ರು. ಆಫರ್ ನೀಡಿದ್ದಾರೆ. ಕಳೆದ ಸರ್ಕಾರದಲ್ಲಿ ಲೂಟಿ ಮಾಡಿದ ಹಣದಿಂದ ಇದೀಗ ನಮ್ಮ ಸರ್ಕಾರ ಕೆಡವಲು ಪ್ಲ್ಯಾನ್ ಮಾಡಿದ್ದಾರೆ ಎಂದು ಕಿಡಿಕಾರಿದರು.
ಕೆಲವರು ಪೆನ್‌ಡ್ರೈವ್ ತೋರಿಸಿ ಸುಮ್ಮನಾದರು ಅಷ್ಟೆ. ಆದರೆ ನಾವು ಏನಾದರೂ ಆ ರೀತಿ ತೋರಿಸಿದರೆ ಖಂಡಿತಾ ಅದನ್ನು ಬಹಿರಂಗಪಡಿಸುತ್ತೇವೆ. ನಮ್ಮ ಬಳಿ ಆಪರೇಷನ್ ಕಮಲಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳಿವೆ. ಶಾಸಕರಾದ ಬಾಬು, ತಮ್ಮಣ್ಣ ಅವರನ್ನು ಏಕೆ ಸಂಪರ್ಕಿಸಿದ್ದರು? ಯಾವ್ಯಾವ ಹೋಟೆಲ್, ಏರ್‌ಪೋರ್ಟ್, ಗೆಸ್ಟ್ ಹೌಸ್‌ನಲ್ಲಿ ಸಂಪರ್ಕಿಸಿದ್ದಾರೆ ಎಂಬೆಲ್ಲ ಮಾಹಿತಿ ಇದೆ. ಈ ಕುರಿತ ಆಡಿಯೋ, ವಿಡಿಯೋ, ಸಿ.ಡಿ., ಪೆನ್‌ಡ್ರೈವ್, ಐ ಕ್ಲೌಡ್ ದಾಖಲೆಗಳು ಕೂಡ ನಮ್ಮ ಬಳಿ ಇವೆ. ನಮ್ಮ ಶಾಸಕರಿಗೆ ಏನೇನು ಆಫರ್ ನೀಡಿದ್ದಾರೆ ಎಂಬುದಕ್ಕೂ ದಾಖಲೆಗಳಿವೆ. ಅವುಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದರು.
ನಮ್ಮ ಶಾಸಕರು ಬಿಜೆಪಿಯ ಯಾವುದೇ ಆಮಿಷಗಳಿಗೆ ಬಲಿಯಾಗುವುದಿಲ್ಲ. ನಾವೆಲ್ಲ ಒಗ್ಗಟ್ಟಾಗಿದ್ದೇವೆ, ಸರ್ಕಾರವೂ ಸ್ಥಿರವಾಗಿದೆ ಎಂದು ಇದೇ ವೇಳೆ ಗಣಿಗ ರವಿ ಹೇಳಿದರು.
ವರ್ಷದ ಹಿಂದೆ ಆಮಿಷ ಬಂದಿತ್ತು, ಈಗ ಅಲ್ಲ
ಗಣಿಗ ರವಿ ಯಾಕೆ ಆ ರೀತಿ ಹೇಳಿದ್ದಾರೋ ಗೊತ್ತಿಲ್ಲ. ಸದ್ಯ ನನ್ನನ್ನಂತೂ ಬಿಜೆಪಿಯ ಯಾವ ನಾಯಕರೂ ಸಂಪರ್ಕಿಸಿಲ್ಲ. ವರ್ಷದ ಹಿಂದೆ ಬಿಜೆಪಿಯ ಕೆಲ ರಾಜ್ಯ ನಾಯಕರು ಸಂಪರ್ಕಿಸಿದ್ದು ನಿಜ. ಅದನ್ನು ವರಿಷ್ಠರ ಗಮನಕ್ಕೂ ತಂದಿದ್ದೆ. ನಾನು ಆಮಿಷಗಳಿಗೆ ಬಲಿಯಾಗುವುದಿಲ್ಲ.
- ಶಾಸಕ ಬಾಬಾಸಾಹೇಬ ಪಾಟೀಲ, ಕಿತ್ತೂರು ಶಾಸಕ
ನನ್ನನ್ನು ಯಾರೂ ಸಂಪರ್ಕ ಮಾಡಿಲ್ಲ
ಬಿಜೆಪಿಯಿಂದ 100 ಕೋಟಿ ರು. ಆಫರ್ ಬಂದಿದೆ ಎಂಬುದರ ಬಗ್ಗೆ ನನಗೆ ಮಾಹಿತಿ ಇಲ್ಲ. ನನ್ನನ್ನು ಯಾರೂ ಸಂಪರ್ಕಿಸಿಲ್ಲ. ಈ ಬಗ್ಗೆ ಯಾರು ಹೇಳಿದ್ದಾರೋ ಅವರನ್ನೇ ಕೇಳಿ. ವಿಚಾರವನ್ನು ಚರ್ಚಿಸುವಷ್ಟು ನಾನು ದೊಡ್ಡ ವ್ಯಕ್ತಿಯಲ್ಲ. ನಾನು ಕಾಂಗ್ರೆಸ್ ನಿಷ್ಠಾವಂತ ಕಾರ್ಯಕರ್ತ.
ಎಚ್.ಡಿ. ತಮ್ಮಯ್ಯ, ಚಿಕ್ಕಮಗಳೂರು ಶಾಸಕ
ದಾಖಲೆ ಏಕೆ ಕೊಡ್ತಿಲ್ಲ?
ಯಾವ ಬಿಜೆಪಿ ನಾಯಕರು ಆಫರ್ ಕೊಟ್ಟಿದ್ದಾರೆ ಎಂಬುದನ್ನು ಬಹಿರಂಗಪಡಿಸಲಿ. ರವಿ ಗಣಿಗ ಹಿಂದಿನಿಂದಲೂ ಇದನ್ನು ಹೇಳುತ್ತಲೇ ಇದ್ದಾರೆ. ಆದರೆ, ಏಕೆ ದಾಖಲೆ ಬಿಡುಗಡೆ ಮಾಡುತ್ತಿಲ್ಲ?
ಪ್ರಹ್ಲಾದ್ ಜೋಶಿ, ಕೇಂದ್ರ ಸಚಿವ