ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದು ಖಚಿತವಾಗುತ್ತಲೇ ಮುಂದಿನ ಸಿಎಂ ಯಾರೆಂಬ ಚರ್ಚೆ ಆರಂಭವಾಗಿದೆ. ಪಕ್ಷದ ಹಿರಿಯ ನಾಯಕರಾದ ರಮೇಶ್‌ ಚೆನ್ನಿತ್ತಲ, ಸತೀಶನ್‌ ಮುಖ್ಯಮಂತ್ರಿ ಹುದ್ದೆ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ.

 ಸಿಎಂ ಗಾದಿಗೆ ಚೆನ್ನಿತ್ತಲ, ವೇಣು, ಸತೀಶ್‌ ಸೆಣಸು

ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದು ಖಚಿತವಾಗುತ್ತಲೇ ಮುಂದಿನ ಸಿಎಂ ಯಾರೆಂಬ ಚರ್ಚೆ ಆರಂಭವಾಗಿದೆ. ಪಕ್ಷದ ಹಿರಿಯ ನಾಯಕರಾದ ರಮೇಶ್‌ ಚೆನ್ನಿತ್ತಲ, ಸತೀಶನ್‌ ಮುಖ್ಯಮಂತ್ರಿ ಹುದ್ದೆ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ. ಮತ್ತೊಂದೆಡೆ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್‌ ಕೂಡಾ ಕುರ್ಚಿ ಮೇಲೆ ಟವಲ್‌ ಹಾಕಿದ್ದಾರೆ ಎಂಬ ವರದಿಗಳಿವೆ. ಹೀಗಾಗಿ ಮುಂದಿನ ಬೆಳವಣಿಗೆ ಸಾಕಷ್ಟು ಕುತೂಹಲ ಕೆರಳಿಸಿದೆ.

ಕೇರಳ

ಸತತ 10 ವರ್ಷಗಳ ಆಡಳಿತ ವಿರೋಧಿ ಅಲೆಯ ಬಿಸಿಯನ್ನು ಎಲ್‌ಡಿಎಫ್‌ ಎದುರಿಸಬೇಕಾಯ್ತು

ಶಬರಿಮಲೆ ಪ್ರಕರಣವನ್ನು ಸಿಪಿಎಂ ಸರ್ಕಾರ ನಿರ್ವಹಿಸಿದ ರೀತಿ ಸರ್ಕಾರಕ್ಕೆ ಹಿನ್ನಡೆ ತಂದಿತು

ಹೆಚ್ಚು ಶಿಕ್ಷಿತರ ನಾಡಿನಲ್ಲಿ, ಅಗತ್ಯ ಉದ್ಯೋಗ ಸೃಷ್ಟಿಯಲ್ಲಿ ವೈಫಲ್ಯ ಸರ್ಕಾರಕ್ಕೆ ಮುಳುವಾಯಿತು

ಸಿಪಿಎಂ ತಳಮಟ್ಟದ ಕಾರ್ಯಕರ್ತರ ಪ್ರಮಾಣ ಕುಸಿತ. ಮತದಾರರ ಮತಗಟ್ಟೆಗೆ ತರುವಲ್ಲಿ ವಿಫಲ

ಧಾರ್ಮಿಕ ನಂಬಿಕೆಗೆ ಧಕ್ಕೆ ತರುವ ಕುರಿತ ಸಿಪಿಎಂ ನಾಯಕರ ಹೇಳಿಕೆಯಿಂದ ಸರ್ಕಾರಕ್ಕೆ ಧಕ್ಕೆ

ಎಲ್‌ಡಿಎಫ್‌ ವಿರುದ್ಧ ಕಾಂಗ್ರೆಸ್‌ ಸೇರಿದಂತೆ ಯುಡಿಎಫ್‌ ನಾಯಕರ ಯೋಜಿತ ಪ್ರಚಾರದಿಂದ ಫಲ

ಎಲ್‌ಡಿಎಫ ಸರ್ಕಾರದ ವೈಫಲ್ಯ ಜನರಿಗೆ ಮುಟ್ಟಿಸುವಲ್ಲಿ ಯಶಸ್ವಿಯಾದ ಯುಡಿಎಫ್ ನಾಯಕರು

ಪ್ರಣಾಳಿಕೆಯಲ್ಲಿ ಹಲವು ಗ್ಯಾರಂಟಿ, ಕಲ್ಯಾಣ, ಅಭಿವೃದ್ಧಿ ಕೆಲಸಗಳ ಬಗ್ಗೆ ಕಾಂಗ್ರೆಸ್‌ನಿಂದ ಪ್ರಸ್ತಾಪ

---

ತಿರುವನಂತಪುರ: ಸತತ 10 ವರ್ಷಗಳಿಂದ ಆಡಳಿತ ನಡೆಸುತ್ತಿದ್ದ ಸಿಪಿಎಂ ನೇತೃತ್ವದ ಎಲ್‌ಡಿಎಫ್‌ ಮೈತ್ರಿಕೂಟಕ್ಕೆ ಈ ಸಲ ಕೇರಳದಲ್ಲಿ ಸೋಲಾಗಿದೆ. ರಾಜ್ಯ ವಿಧಾನಸಭೆಯ 140 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ನೇತೃತ್ವದ ಯುನೈಟೆಡ್‌ ಡೆಮಾಕ್ರೆಟಿಕ್‌ ಫ್ರಂಟ್‌ (ಯುಡಿಎಫ್‌) ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರುವಲ್ಲಿ ಯಶಸ್ವಿಯಾಗಿದೆ. ಇನ್ನೊಂದೆಡೆ ಬಿಜೆಪಿ ಕೂಡಾ ತನ್ನ ಖಾತೆ ತೆರೆಯುವಲ್ಲಿ ಯಶಸ್ವಿಯಾಗಿದೆ.

ಕೇರಳದಲ್ಲೂ ಸೋಲಿನ ಪರಿಣಾಮ ಇದೀಗ ದೇಶದ ಯಾವುದೇ ರಾಜ್ಯದಲ್ಲೂ ಎಡಪಕ್ಷಗಳ ಆಡಳಿತ ಇಲ್ಲದಂತಾಗಿದೆ. ಈ ಹಿಂದೆ ಪಶ್ಚಿಮ ಬಂಗಾಳ, ಕೇರಳ, ತ್ರಿಪುರಾದಲ್ಲಿ ಭಾರೀ ಪ್ರಾಬಲ್ಯ ಹೊಂದಿದ್ದ ಎಡಪಕ್ಷಗಳು ಕಳೆದೊಂದು ದಶಕದಿಂದ ಕೇರಳದಲ್ಲಿ ಮಾತ್ರ ಅಸ್ತಿತ್ವ ಉಳಿಸಿಕೊಂಡಿತ್ತು. ಇದೀಗ ಅದು ಕೂಡಾ ಪಕ್ಷದ ಕೈತಪ್ಪಿದೆ.

ಆಡಳಿತ ವಿರೋಧಿ ಅಲೆ:

ಸತತ 10 ವರ್ಷಗಳ ಆಡಳಿತ ವಿರೋಧಿ ಅಲೆ, ಪಕ್ಷದ ನಾಯಕರ ಧರ್ಮ ವಿರೋಧಿ ಹೇಳಿಕೆಗಳು, ಸಚಿವರ ವಿರುದ್ಧದ ಭ್ರಷ್ಟಾಚಾರದ ಆರೋಪ, ಯುವ ಸಮೂಹಕ್ಕೆ ಅಗತ್ಯ ಉದ್ಯೋಗ ಸೃಷ್ಟಿಯಲ್ಲಿ ವೈಫಲ್ಯ, ಭಾರೀ ಸಾಲದ ಹೊರೆ, ಕುಟುಂಬ ರಾಜಕಾರಣ, ಶಬರಿಮಲೆಗೆ ಮಹಿಳೆಯರ ಪ್ರವೇಶ ವಿವಾದದಲ್ಲಿ ಸರ್ಕಾರದ ಜನವಿರೋಧಿ ನಿಲುವು ಎಡಪಕ್ಷಗಳಿಗೆ ಮುಳುವಾದರೆ, ಇದರ ಲಾಭ ಪಡೆದು ಒಗ್ಗಟ್ಟಿನಿಂದ ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ ಕೂಟ ಹೋರಾಡಿದ ಕಾರಣ ಜಯ ಒಲಿದುಬಂದಿದೆ. ಜೊತೆಗೆ ಕಾಂಗ್ರೆಸ್‌ ಘೋಷಿಸಿದ್ದ ಕರ್ನಾಟಕದ ಮಾದರಿ ಹಲವು ಗ್ಯಾರಂಟಿ ಯೋಜನೆಗಳು ಕೂಡಾ ಪಕ್ಷಕ್ಕೆ ನೆರವಾಗಿವೆ.

ಇನ್ನು ಬಿಜೆಪಿ ಅಧ್ಯಕ್ಷ ರಾಜೀವ್‌ ಚಂದ್ರಶೇಖರ್‌ ನೇತೃತ್ವದ ಪ್ರಚಾರ ರಾಜ್ಯದೆಲ್ಲೆಡೆ ಪಕ್ಷದ ಮತಗಳಿಗೆ ಹೆಚ್ಚಿಸುವಲ್ಲಿ ಮತ್ತು ವಿಧಾನಸಭೆಯಲ್ಲಿ ಖಾತೆ ತೆರೆಸುವಲ್ಲಿ ಪಕ್ಷಕ್ಕೆ ನೆರವಾಗಿದೆ.