ಇಡೀ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ತೀವ್ರ ಹಣಾಹಣಿಗೆ ಸಾಕ್ಷಿಯಾಗಿದ್ದ ಭವಾನಿಪುರ ಕ್ಷೇತ್ರದಲ್ಲಿ ಬಿಜೆಪಿಯ ಸುವೇಂದು ಅಧಿಕಾರಿ ಎದುರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ 15,105 ಮತಗಳಿಂದ ಪರಾಭವ ಕಂಡಿದ್ದಾರೆ.

 ಕೋಲ್ಕತಾ: ಇಡೀ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ತೀವ್ರ ಹಣಾಹಣಿಗೆ ಸಾಕ್ಷಿಯಾಗಿದ್ದ ಭವಾನಿಪುರ ಕ್ಷೇತ್ರದಲ್ಲಿ ಬಿಜೆಪಿಯ ಸುವೇಂದು ಅಧಿಕಾರಿ ಎದುರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ 15,105 ಮತಗಳಿಂದ ಪರಾಭವ ಕಂಡಿದ್ದಾರೆ. ಈ ಮೂಲಕ ಸತತ 3 ಅವಧಿಗೆ ಬಂಗಾಳದ ಗದ್ದುಗೆಯೇರಿ ಅನಭಿಷಿಕ್ತ ಸಾಮ್ರಾಜ್ಞಿಯಾಗಿ ಮೆರೆದಿದ್ದ ದೀದಿ ಯುಗ ಸದ್ಯದ ಮಟ್ಟಿಗೆ ಅಂತ್ಯವಾಗಿದೆ.

ಭವಾನಿಪುರ ತೀವ್ರ ಕುತೂಹಲಕ್ಕೆ ಕಾರಣವಾಗಿತ್ತು

ಈ ಬಾರಿ ಮಮತಾ ಬ್ಯಾನರ್ಜಿಯವರ ತವರು ಕ್ಷೇತ್ರವಾದ ಭವಾನಿಪುರ ತೀವ್ರ ಕುತೂಹಲಕ್ಕೆ ಕಾರಣವಾಗಿತ್ತು. 2021ರ ಚುನಾವಣೆಯಲ್ಲಿ ನಂದಿಗ್ರಾಮದಲ್ಲಿ ಸುವೇಂದು ಎದುರು ಸೋತಿದ್ದ ಮಮತಾ, ಆ ಬಳಿಕ ಭವಾನಿಪುರದಿಂದ ಸ್ಪರ್ಧಿಸಿ, ಗೆಲುವು ಸಾಧಿಸಿ ಮುಖ್ಯಮಂತ್ರಿ ಕುರ್ಚಿಯನ್ನು ಉಳಿಸಿಕೊಂಡಿದ್ದರು. ಈ ಬಾರಿಯೂ ಅದೇ ಕ್ಷೇತ್ರದಿಂದ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದರು. ಆದರೆ ರಾಜ್ಯದಲ್ಲಿ ಅವರ ಇಡೀ ಪಕ್ಷ ಧೂಳಿಪಟವಾಗಿದ್ದಲ್ಲದೆ, ಕನಿಷ್ಟ ಶಾಸಕ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿಯೂ ಅವರು ವಿಫಲರಾಗಿದ್ದಾರೆ.

ಮತ ಎಣಿಕೆ ಹಾವು ಏಣಿ ಆಟದಂತಿತ್ತು

ಮತ ಎಣಿಕೆ ಹಾವು ಏಣಿ ಆಟದಂತಿತ್ತು. ಒಮ್ಮೆ ಸುವೇಂದು ಮುನ್ನಡೆ ಸಾಧಿಸಿದರೆ ಮತ್ತೊಮ್ಮೆ ದೀದಿ ಮುನ್ನಡೆ ಸಾಧಿಸುತ್ತಿದ್ದರು. ಕೊನೆಗೆ ದೀದಿ ಮಾಜಿ ಆಪ್ತನಾದ ಅಧಿಕಾರಿ ಕೈ ಮೇಲಾಯಿತು.