17 ಕಾಂಗ್ರೆಸ್‌ ಅಭ್ಯರ್ಥಿ ಫೈನಲ್‌: ಖರ್ಗೆ ಸ್ಪರ್ಧೆ ಇಲ್ಲ, ಅಳಿಯಗೆ ಟಿಕೆಟ್!‌

| Published : Mar 20 2024, 01:17 AM IST / Updated: Mar 20 2024, 08:12 AM IST

17 ಕಾಂಗ್ರೆಸ್‌ ಅಭ್ಯರ್ಥಿ ಫೈನಲ್‌: ಖರ್ಗೆ ಸ್ಪರ್ಧೆ ಇಲ್ಲ, ಅಳಿಯಗೆ ಟಿಕೆಟ್!‌
Share this Article
  • FB
  • TW
  • Linkdin
  • Email

ಸಾರಾಂಶ

ಲೋಕಸಭಾ ಚುನಾವಣೆ ಅಭ್ಯರ್ಥಿಗಳ ಆಯ್ಕೆಗೆ ದೆಹಲಿಯಲ್ಲಿ ಸಭೆ ಸೇರಿದ್ದ ಕಾಂಗ್ರೆಸ್‌ ಚುನಾವಣಾ ಸಮಿತಿಯು ಬಾಕಿಯಿದ್ದ 21 ಕ್ಷೇತ್ರಗಳ ಪೈಕಿ 17 ಕ್ಷೇತ್ರಗಳಿಗೆ ಅಭ್ಯರ್ಥಿ ಹೆಸರು ಅಖೈರುಗೊಳಿಸುವಲ್ಲಿ ಯಶಸ್ವಿಯಾಗಿದೆ.

ಕನ್ನಡಪ್ರಭ ವಾರ್ತೆ, ಬೆಂಗಳೂರು

ಲೋಕಸಭಾ ಚುನಾವಣೆ ಅಭ್ಯರ್ಥಿಗಳ ಆಯ್ಕೆಗೆ ದೆಹಲಿಯಲ್ಲಿ ಸಭೆ ಸೇರಿದ್ದ ಕಾಂಗ್ರೆಸ್‌ ಚುನಾವಣಾ ಸಮಿತಿಯು ಬಾಕಿಯಿದ್ದ 21 ಕ್ಷೇತ್ರಗಳ ಪೈಕಿ 17 ಕ್ಷೇತ್ರಗಳಿಗೆ ಅಭ್ಯರ್ಥಿ ಹೆಸರು ಅಖೈರುಗೊಳಿಸುವಲ್ಲಿ ಯಶಸ್ವಿಯಾಗಿದೆ. 

ಈ ಪೈಕಿ 6 ಮಂದಿ ಹಾಲಿ ಸಚಿವರ ಕುಟುಂಬಸ್ಥರಿಗೆ ಟಿಕೆಟ್‌ ದಯಪಾಲಿಸಿದೆ. ಅಲ್ಲದೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಳಿಯ ರಾಧಾಕೃಷ್ಣ ದೊಡ್ಡಮನಿ ಅವರು ಕಲಬುರಗಿ ಟಿಕೆಟ್‌ ಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಾಂಗ್ರೆಸ್‌ ಪಕ್ಷವು ಈಗಾಗಲೇ ಏಳು ಕ್ಷೇತ್ರಗಳಿಗೆ ಅಭ್ಯರ್ಥಿ ಹೆಸರು ಪ್ರಕಟಿಸಿದೆ. ಇದೀಗ 17 ಕ್ಷೇತ್ರಗಳಿಗೆ ಹೆಸರು ಅಂತಿಮಗೊಳಿಸುವ ಮೂಲಕ ರಾಜ್ಯದಲ್ಲಿರುವ 28 ಲೋಕಸಭಾ ಕ್ಷೇತ್ರಗಳ ಪೈಕಿ 24 ಕ್ಷೇತ್ರಗಳಿಗೆ ಹೆಸರು ಅಂತಿಮಗೊಳಿಸಿದಂತಾಗಿದೆ. 

ತೀವ್ರ ಪೈಪೋಟಿಯಿರುವ ನಾಲ್ಕು ಕ್ಷೇತ್ರಗಳಿಗೆ ಹೆಸರು ಅಂತಿಮಗೊಳಿಸುವುದು ಬಾಕಿಯಿದೆ. ಮೂಲಗಳ ಪ್ರಕಾರ ಈ ನಾಲ್ಕು ಕ್ಷೇತ್ರಗಳಿಗೂ ಅಭ್ಯರ್ಥಿ ಅಂತಿಮಗೊಳಿಸಲು ಬುಧವಾರ ಮತ್ತೆ ಸಭೆ ನಡೆಯಲಿದ್ದು, ಇದಾದ ಕೂಡಲೇ ಎರಡನೇ ಪಟ್ಟಿ ಪ್ರಕಟವಾಗುವ ಸಾಧ್ಯತೆಯಿದೆ.

ಯಾವ ಸಚಿವರೂ ಇಲ್ಲ: ಕುತೂಹಲಕಾರಿ ಸಂಗತಿಯೆಂದರೆ, ಸಚಿವರನ್ನು ಈ ಬಾರಿ ಸ್ಪರ್ಧೆಗೆ ಇಳಿಸಲಾಗುವುದು ಎಂದು ಕಾಂಗ್ರೆಸ್‌ ಹೇಳಿತ್ತಾದರೂ, ಬಹುತೇಕ ಘೋಷಣೆಯ ಹಂತದಲ್ಲಿರುವ 24 ಕ್ಷೇತ್ರಗಳ ಪೈಕಿ ಒಬ್ಬ ಸಚಿವರ ಹೆಸರೂ ಇಲ್ಲ.

ಆದರೆ, ಹೆಸರು ಅಖೈರುಗೊಳ್ಳಲು ಬಾಕಿ ಉಳಿದಿರುವ ನಾಲ್ಕು ಕ್ಷೇತ್ರಗಳಾದ ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರ ಹಾಗೂ ಬಳ್ಳಾರಿ ಕ್ಷೇತ್ರಗಳ ಪೈಕಿ ಎರಡು ಕ್ಷೇತ್ರಗಳಲ್ಲಿ ಎರಡು ಕ್ಷೇತ್ರಗಳಾದ ಕೋಲಾರ (ಕೆ.ಎಚ್. ಮುನಿಯಪ್ಪ) ಹಾಗೂ ಚಾಮರಾಜನಗರ (ಡಾ. ಎಚ್.ಸಿ. ಮಹದೇವಪ್ಪ) ಅವರ ಹೆಸರನ್ನು ತೇಲಿ ಬಿಡಲಾಗಿತ್ತು. ಮೂಲಗಳ ಪ್ರಕಾರ ಈ ಇಬ್ಬರು ಸಚಿವರು ಸ್ಪರ್ಧೆ ಒಪ್ಪುವ ಸಾಧ್ಯತೆಗಳು ಇಲ್ಲ.

6 ಕ್ಷೇತ್ರಗಳು ಸಚಿವರ ಕುಟುಂಬಕ್ಕೆ: ಇನ್ನು ಹೆಸರು ಅಖೈರುಗೊಂಡಿರುವ 17 ಕ್ಷೇತ್ರಗಳಲ್ಲಿ ಆರು ಕ್ಷೇತ್ರಗಳು ಸಚಿವರ ಕುಟುಂಬಸ್ಥರ ಪಾಲಾಗಿದೆ. ಅದರಲ್ಲೂ ಸಚಿವರ ಪುತ್ರಿಯರು ಟಿಕೆಟ್‌ ಗಿಟ್ಟಿಸುವಲ್ಲಿ ಮೇಲುಗೈ ಸಾಧಿಸಿದ್ದಾರೆ. 

ಬೆಂಗಳೂರು ದಕ್ಷಿಣದಿಂದ ಸಚಿವ ರಾಮಲಿಂಗಾರೆಡ್ಡಿ ಅವರ ಪುತ್ರಿ ಸೌಮ್ಯ ರೆಡ್ಡಿ, ಬಾಗಲಕೋಟೆಯಿಂದ ಸಚಿವ ಶಿವಾನಂದ ಪಾಟೀಲ್ ಅವರ ಪುತ್ರಿ ಸಂಯುಕ್ತಾ ಶಿವಾನಾಂದ ಪಾಟೀಲ್, ಚಿಕ್ಕೋಡಿಯಿಂದ ಸಚಿವ ಸತೀಶ್‌ ಜಾರಕಿಹೊಳಿ ಪುತ್ರಿ ಪ್ರಿಯಾಂಕ ಜಾರಕಿಹೊಳಿ ಟಿಕೆಟ್‌ ಗಿಟ್ಟಿಸಿದ್ದರೆ, ಬೆಳಗಾವಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಹೆಬ್ಬಾಳ್ಕರ್‌ ಹಾಗೂ ಬೀದರ್‌ನಲ್ಲಿ ಸಚಿವ ಈಶ್ವರ್ ಖಂಡ್ರೆ ಪುತ್ರ ಸಾಗರ್ ಖಂಡ್ರೆ ಹೆಸರು ಅಖೈರುಗೊಂಡಿದೆ. ಇನ್ನು ಸಚಿವ ಎಸ್‌.ಎಸ್. ಮಲ್ಲಿಕಾರ್ಜುನ್ ಅವರ ಪತ್ನಿ ಪ್ರಭಾ ಮಲ್ಲಿಕಾರ್ಜುನ ಅವರ ಹೆಸರು ದಾವಣಗೆರೆ ಕ್ಷೇತ್ರಕ್ಕೆ ಅಖೈರುಗೊಂಡಿದೆ.

ಮಹಿಳಾ ಟಿಕೆಟ್ ದಾಖಲೆ?
ಕುತೂಹಲಕಾರಿ ಸಂಗತಿಯೆಂದರೆ ಮಂಗಳವಾರ ಅಖೈರುಗೊಂಡ ಪಟ್ಟಿಯಲ್ಲಿ ಐವರು ಮಹಿಳೆಯರು ಹಾಗೂ ಮೊದಲ ಪಟ್ಟಿಯಲ್ಲಿ (ಶಿವಮೊಗ್ಗಕ್ಕೆ ಗೀತಾ ಶಿವರಾಜಕುಮಾರ್‌) ಸೇರಿ ಒಟ್ಟು ಆರು ಮಂದಿ ಟಿಕೆಟ್‌ ಗಿಟ್ಟಿಸಿದಂತಾಗುತ್ತದೆ. 

ಹೀಗಾದರೆ ಇತ್ತೀಚಿನ ವರ್ಷಗಳಲ್ಲಿ ಕಾಂಗ್ರೆಸ್‌ ಇಷ್ಟು ದೊಡ್ಡ ಮಟ್ಟದಲ್ಲಿ ಮಹಿಳೆಯರಿಗೆ ಟಿಕೆಟ್‌ ಕೊಟ್ಟಿದ್ದು ದಾಖಲೆಯಾಗುತ್ತದೆ.

ಇದಲ್ಲದೆ, ನಿವೃತ್ತ ಐಎಎಸ್‌ ಅಧಿಕಾರಿ ಕುಮಾರ ನಾಯಕ್‌ ರಾಯಚೂರಿಗೆ ಹಾಗೂ ಇತ್ತೀಚೆಗಷ್ಟೇ ಕಾಂಗ್ರೆಸ್‌ ಸೇರಿದ್ದ ಜಯಪ್ರಕಾಶ್‌ ಹೆಗ್ಡೆ ಅವರ ಹೆಸರು ಉಡುಪಿ- ಚಿಕ್ಕಮಗಳೂರಿಗೆ ಅಖೈರುಗೊಂಡಿದೆ.

ಬೆಂಗಳೂರು ಉತ್ತರಕ್ಕೆ ರಾಜೀವ್‌ ಗೌಡ?
ಇನ್ನೂ ತೀವ್ರ ಕುತೂಹಲ ಹುಟ್ಟಿಸಿದ್ದ ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಯಾರಿಗೆ ಟಿಕೆಟ್‌ ದೊರೆಯಲಿದೆ ಎಂಬುದಕ್ಕೂ ಉತ್ತರ ದೊರಕಿದ್ದು, ಈ ಕ್ಷೇತ್ರಕ್ಕೆ ರಾಜ್ಯ ನೀತಿ ಹಾಗೂ ಯೋಜನಾ ಆಯೋಗ ಉಪಾಧ್ಯಕ್ಷ ಪ್ರೊ। ರಾಜೀವ್‌ ಗೌಡ ಅವರ ಹೆಸರು ಅಂತಿಮಗೊಂಡಿದೆ. 

ಈ ಕ್ಷೇತ್ರಕ್ಕೆ ಪ್ರಬಲ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಬೇಕು ಎಂಬ ಕಾರಣಕ್ಕೆ ಶಾಸಕ ಪ್ರಿಯಕೃಷ್ಣ ಅವರ ಮನವೊಲಿಸಲು ಕಾಂಗ್ರೆಸ್‌ ನಾಯಕತ್ವ ತೀವ್ರ ಪ್ರಯತ್ನ ನಡೆಸಿದ್ದರು. ಆದರೆ, ಆ ಪ್ರಯತ್ನ ವಿಫಲಗೊಂಡಿದೆ. 

ಇದಾದ ನಂತರ ಬಿಜೆಪಿಯಿಂದ ಟಿಕೆಟ್‌ ವಂಚಿತರಾಗಿರುವ ಬೆಂಗಳೂರು ಉತ್ತರ ಕ್ಷೇತ್ರದ ಹಾಲಿ ಸಂಸದ ಡಿ.ವಿ. ಸದಾನಂದ ಗೌಡ ಅವರ ಹೆಸರು ಕೂಡ ತೇಲಿ ಬಿಡಲಾಗಿತ್ತು. ಆದರೆ, ಅಂತಿಮವಾಗಿ ರಾಜೀವ್ ಗೌಡ ಅವರ ಹೆಸರು ಅಖೈರುಗೊಂಡಿದೆ ಎಂದು ಮೂಲಗಳು ತಿಳಿಸಿವೆ.

ಬಾಕಿ ಉಳಿದಿದ ಕ್ಷೇತ್ರಗಳು:ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರ, ಬಳ್ಳಾರಿ

ಅಂತಿಮಗೊಂಡ ಹೆಸರು

  1. ಕಲಬುರಗಿ- ರಾಧಾಕೃಷ್ಣ ದೊಡ್ಡಮನಿ
  2. ಬೆಂಗಳೂರು ದಕ್ಷಿಣ- ಸೌಮ್ಯಾರೆಡ್ಡಿ
  3. ಬೆಂಗಳೂರು ಸೆಂಟ್ರಲ್-ಮನ್ಸೂರ್ ಆಲಿಖಾನ್
  4. ಮೈಸೂರು-ಲಕ್ಮಣ್
  5.  ರಾಯಚೂರು- ಕುಮಾರ ನಾಯಕ್ 
  6. ಕೊಪ್ಪಳ-ರಾಜಶೇಖರ ಹಿಟ್ನಾಳ್
  7. ಬೀದರ್- ಸಾಗರ್ ಖಂಡ್ರೆ
  8. ದಾವಣಗೆರೆ- ಪ್ರಭಾ ಮಲ್ಲಿಕಾರ್ಜುನ್   
  9. ಉತ್ತರ ಕನ್ನಡ- ಅಂಜಲಿ ನಿಂಬಾಳ್ಕರ್  
  10. ದಕ್ಷಿಣ ಕನ್ನಡ- ಪದ್ಮರಾಜ್
  11. ಚಿತ್ರದುರ್ಗ- ಬಿ.ಎನ್. ಚಂದ್ರಪ್ಪ
  12.  ಬೆಂಗಳೂರು ಉತ್ತರ-ರಾಜೀವ್ ಗೌಡ
  13.  ಧಾರವಾಡ- ವಿನೋದ ಅಸೂಟಿ
  14. ಬಾಗಲಕೋಟೆ-ಸಂಯುಕ್ತ ಪಾಟೀಲ್
  15. ಉಡುಪಿ/ಚಿಕ್ಕಮಗಳೂರು- ಜಯಪ್ರಕಾಶ್ ಹೆಗಡೆ
  16. ಬೆಳಗಾವಿ- ಮೃಣಾಲ್ ಹೆಬ್ಬಾಳ್ಕರ್ 
  17. ಚಿಕ್ಕೋಡಿ- ಪ್ರಿಯಾಂಕಾ ಜಾರಕಿಹೊಳಿ