ಮೈತ್ರಿ ಬಳಿಕ ದಳ ಮೊದಲ ಆತ್ಮಹತ್ಯೆ ಪ್ರಯತ್ನ: ಡಿಕೆಶಿ

| Published : Mar 20 2024, 01:15 AM IST / Updated: Mar 20 2024, 07:59 AM IST

ಸಾರಾಂಶ

ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ತಮ್ಮ ಅಳಿಯ ಡಾ.ಸಿ.ಎನ್‌. ಮಂಜುನಾಥ್‌ ಅವರನ್ನು ಬಿಜೆಪಿಯಿಂದ ಸ್ಪರ್ಧಿಸುವಂತೆ ಮಾಡಿದ್ದು ಜೆಡಿಎಸ್‌ ಪಕ್ಷದ ಮೊದಲ ಆತ್ಮಹತ್ಯೆ ಪ್ರಯತ್ನವಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಕುಟುಕಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ತಮ್ಮ ಅಳಿಯ ಡಾ.ಸಿ.ಎನ್‌. ಮಂಜುನಾಥ್‌ ಅವರನ್ನು ಬಿಜೆಪಿಯಿಂದ ಸ್ಪರ್ಧಿಸುವಂತೆ ಮಾಡಿದ್ದು ಜೆಡಿಎಸ್‌ ಪಕ್ಷದ ಮೊದಲ ಆತ್ಮಹತ್ಯೆ ಪ್ರಯತ್ನವಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಕುಟುಕಿದ್ದಾರೆ.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಲೋಕಸಭೆ ಚುನಾವಣಾ ಕ್ಷೇತ್ರ ಹಂಚಿಕೆ ವಿಚಾರದಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ನಡುವಿನ ಮೈತ್ರಿಯಲ್ಲಿ ಬಿರುಕು ಮೂಡಲಿದೆ ಎಂಬುದು ನನಗೆ ಮೊದಲೇ ಗೊತ್ತಿದ್ದ ವಿಚಾರ. 

ದೇವೇಗೌಡರು ತಮ್ಮ ಅಳಿಯನನ್ನು ಬಿಜೆಪಿಯ ಚಿಹ್ನೆಯಡಿ ಲೋಕಸಭಾ ಚುನಾವಣಾ ಕಣಕ್ಕಿಳಿಸಿದ್ದು ಜೆಡಿಎಸ್‌ನ ಮೊದಲ ಆತ್ಮಹತ್ಯೆ ಯತ್ನವಾಗಿದೆ. ಇದನ್ನು ನಾನು ನಿರೀಕ್ಷೆ ಕೂಡ ಮಾಡಿರಲಿಲ್ಲ. ಅವರ ಪಕ್ಷಕ್ಕೆ ದೊಡ್ಡ ಮುಜುಗರ ಉಂಟಾಗಿದೆ’ ಎಂದರು,

‘ಜೆಡಿಎಸ್‌ ಪಕ್ಷಕ್ಕೆ ಅದರದ್ದೇ ಶಕ್ತಿ ಇದೆ. ವಿವಿಧ ಕ್ಷೇತ್ರಗಳಲ್ಲಿ ಹಾಲಿ ಶಾಸಕರು, ಸಂಸದರು ಇದ್ದಾರೆ. ಆ ಶಕ್ತಿ ಬಿಜೆಪಿಯವರಿಗೆ ಬೇಕಾಗಿತ್ತು. ಅದಕ್ಕೆ ಮೈತ್ರಿ ಮಾಡಿಕೊಂಡಿದ್ದಾರೆ.

 ಬಿಜೆಪಿಯವರ ಸ್ಟೈಲ್‌ ಇರೋದೆ ಹೀಗೆ. ಕರ್ನಾಟಕ ಮಾತ್ರವಲ್ಲ ಬೇರೆ ಬೇರೆ ರಾಜ್ಯಗಳಲ್ಲೂ ಹೀಗೆ ಮಾಡಿಕೊಂಡು ಬರುತ್ತಿದ್ದಾರೆ’ ಎಂದು ಹೇಳಿದರು.

ಇದೇ ವೇಳೆ, ‘ಮೈತ್ರಿ ಅಂದ ಮೇಲೆ ಎಲ್ಲರೂ ಮತ ಹಾಕಲೇಬೇಕಿತ್ತು. ಆದರೆ, ಅದು ಅವರ ಪಕ್ಷದ ತೀರ್ಮಾನ, ಈ ಬಗ್ಗೆ ನಾನು ಪ್ರತಿಕ್ರಿಯೆ ನೀಡಲು ಹೋಗುವುದಿಲ್ಲ. ಮಧ್ಯಪ್ರವೇಶಿಸುವುದು ಸರಿಹೋಗುವುದಿಲ್ಲ’ ಎಂದೂ ನುಡಿದರು.