ಸಾರಾಂಶ
ನಾನು ಪಕ್ಷಕ್ಕೂ ದ್ರೋಹ ಮಾಡಲ್ಲ, ಪಕ್ಕದಲ್ಲಿರುವವರಿಗೂ (ಯದುವೀರ) ದ್ರೋಹ ಮಾಡಲ್ಲ ಎಂದು ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಸ್ಪಷ್ಟಪಡಿಸಿದರು.
ಕನ್ನಡಪ್ರಭ ವಾರ್ತೆ ಮೈಸೂರು
ನಾನು ಪಕ್ಷಕ್ಕೂ ದ್ರೋಹ ಮಾಡಲ್ಲ, ಪಕ್ಕದಲ್ಲಿರುವವರಿಗೂ (ಯದುವೀರ) ದ್ರೋಹ ಮಾಡಲ್ಲ ಎಂದು ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಸ್ಪಷ್ಟಪಡಿಸಿದರು.
ಬಿಜೆಪಿ ಸೋಮವಾರ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, 2014ರಲ್ಲಿ ನನಗೆ ಯಾಕೆ ಟಿಕೆಟ್ ಕೊಟ್ಟರು ಅಂಥಾ ಹೈಕಮಾಂಡ್ ಹೇಳಿರಲಿಲ್ಲ. ನಾನು ಯಾಕೆ ಕೊಟ್ಟರು ಅಂಥ ಕೇಳಿರಲಿಲ್ಲ. ಈಗಲೂ ಅಷ್ಟೇ ಯಾಕೆ ತಪ್ಪಿಸಿದ್ದೀರಿ ಅಂತಾ ನಾನು ಕೇಳಿಯೂ ಇಲ್ಲ, ಅವರು ಹೇಳಿಯೂ ಇಲ್ಲ ಎಂದು ಹೇಳಿದರು.
ನನಗೆ ಅಚಾನಕ್ ಆಗಿ 2014 ರಲ್ಲಿ ಬಿಜೆಪಿ ಟಿಕೆಟ್ ಸಿಕ್ಕಿತು. 2024 ರಲ್ಲಿ ಪಕ್ಷ ನನ್ನ ಬದಲು ಬೇರೆಯವರಿಗೆ ಟಿಕೆಟ್ ಕೊಟ್ಟಿದೆ. ಇದರಿಂದ ನನಗೆ ಯಾವುದೇ ಬೇಸರ ಇಲ್ಲ. ಪಕ್ಷ ನನ್ನ ತಾಯಿ ಇದ್ದ ಹಾಗೆ.
ಪಕ್ಷದ ಅಭ್ಯರ್ಥಿ ಗೆಲವಿಗೆ ಶ್ರಮಿಸುತ್ತೇನೆ. ಯದುವೀರ ಅವರಿಗೆ ಟಿಕೆಟ್ ಸಿಕ್ಕ ಕೂಡಲೇ ಅವರಿಗೆ ಕರೆ ಮಾಡಿ, ನಾನು ನಿಮ್ಮ ಏಜೆಂಟ್ ಆಗಿ ಕೆಲಸ ಮಾಡುತ್ತೇನೆ ಎಂದಿದ್ದೇನೆ. ನಾನು ಪಕ್ಷದ ಪರವಾಗಿ ಕೆಲಸ ಮಾಡುತ್ತೇನೆ ಎಂದರು.
ಯದುವೀರ್ ಅವರು ಅರಮನೆ ಉತ್ತರಾಧಿಕಾರಿಯಾಗಿರುವುದರಿಂದ ಮಹರಾಜರಾಗಿ ಕೆಲಸ ಮಾಡುತ್ತಾರ ಇಲ್ಲ ಜನಪ್ರತಿನಿಧಿಯಾಗಿ ಕೆಲಸ ಮಾಡುತ್ತಾರ ಎಂಬ ಪ್ರಶ್ನೆ ಎತ್ತಿದ್ದೆ ಅಷ್ಟೆ ಎಂದು ಅವರು ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಆಹ್ವಾನ ಬಗ್ಗೆ ಬಾಯಿ ಬಿಡದ ಪ್ರತಾಪ್ ಸಿಂಹ
ಬಿಜೆಪಿ ಟಿಕೆಟ್ ಕೈ ತಪ್ಪಿದ ಮೇಲೆ ಕಾಂಗ್ರೆಸ್ ಪಕ್ಷದಿಂದ ಆಹ್ವಾನ ಬಂದಿದಿಯಾ ಎಂಬ ಪ್ರಶ್ನೆಗೆ ಸಂಸದ ಪ್ರತಾಪ್ ಸಿಂಹ ಅವರು ಸ್ಪಷ್ಟವಾಗಿ ಉತ್ತರ ನೀಡಲು ನಿರಾಕರಿಸಿದರು.
ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡಿದಾಗ ನನಗೆ ಎಲ್ಲಾ ಪಕ್ಷದವರು ಮತ ಹಾಕಿದ್ದಾರೆ. ರಾಜಕಾರಣದಲ್ಲಿ ಕೆಲವೊಂದು ವಿಚಾರಗಳನ್ನು ಹೇಳಲು ಸಾಧ್ಯವಿಲ್ಲ.
ಬಿಜೆಪಿ ಟಿಕೆಟ್ ತಪ್ಪಿದಾಗ ಕುರುಬ ಸಮಾಜದ ಮುಖಂಡರು ದೂರವಾಣಿ ಕರೆ ಮಾಡಿ, ನೀವು ಚುನಾವಣೆಗೆ ಸ್ಪರ್ಧಿಸಿ, ಬೇಕಿದ್ದರೆ ಕಾಂಗ್ರೆಸ್ ಪಕ್ಷಕ್ಕೆ ಬನ್ನಿ ಎಂದು ಹೇಳಿದ್ದರು. ಹೀಗಾಗಿ, ಎಲ್ಲರೂ ನನ್ನೊಂದಿಗೆ ಚೆನ್ನಾಗಿದ್ದಾರೆ ಎಂದರು.
ಕಾಂಗ್ರೆಸ್ ಪಕ್ಷದಿಂದ ಆಫರ್ ಇತ್ತು ಇಲ್ವಾ ಎಂಬ ಯಾವ ಪ್ರಶ್ನೆಗಳು ಈಗ ಪ್ರಸ್ತುತ ಅಲ್ಲ. ನಮಗೆ ಯದುವೀರ ಅವರನ್ನು ಗೆಲ್ಲಿಸುವುದಷ್ಟೇ ಈಗ ಮುಖ್ಯ. ದೇಶಕ್ಕೆ ಮೋದಿ ಬೇಕು, ಮೋದಿ ಪರವಾಗಿ ಕೈ ಎತ್ತಲು ಮೈಸೂರಿನಿಂದ ಒಬ್ಬ ವ್ಯಕ್ತಿ ಬೇಕು.
ಇದಷ್ಟೇ ನಮಗೆ ಮುಖ್ಯ. ಪಕ್ಷ ನನಗೆ ತಾಯಿ ಇದ್ದಾಗೆ. ಇದು ಬರಿ ಬಾಯಿ ಮಾತಲ್ಲ. ಇದು ನನ್ನ ಮನಸಿನ ಮಾತು ಎಂದು ಅವರು ಹೇಳಿದರು.
ಮೈಸೂರಿನಲ್ಲಿ ಬಿಜೆಪಿ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿದರು.
ಸಂಸದ ಪ್ರತಾಪ್ ಸಿಂಹ, ನಗರಾಧ್ಯಕ್ಷ ಎಲ್. ನಾಗೇಂದ್ರ, ಜಿಲ್ಲಾಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ, ಮಾಳವಿಕ ಅವಿನಾಶ್ ಇದ್ದರು.