ಸಾರಾಂಶ
ಚಿಕ್ಕಬಳ್ಳಾಪುರ : ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಗೆ ದಿನಾಂಕ ಘೋಷಣೆ ಆದ ಮರುಗಳಿಗೆಯೇ ಸಂಸದ ಡಾ.ಕೆ. ಸುಧಾಕರ್ ಬೆಂಬಲಿತ ಬಿಜೆಪಿ, ಕಾಂಗ್ರೆಸ್ ಸದಸ್ಯರು ಪ್ರವಾಸದ ನೆಪದಲ್ಲಿ ಡಾರ್ಜಿಲಿಂಗ್‌ಗೆ ತೆರಳಿದರೆ, ಶಾಸಕ ಪ್ರದೀಪ್ ಈಶ್ವರ್ ಬೆಂಬಲಿತ ಕಾಂಗ್ರೆಸ್ ಸದಸ್ಯರು ರಾಜಸ್ಥಾನದ ಪಿಂಕ್ ಸಿಟಿ ಖ್ಯಾತಿಯ ಜೈಪುರದಲ್ಲಿ ಬೀಡುಬಿಟ್ಟಿದ್ದಾರೆ. 14 ತಿಂಗಳ ನಗರಸಭೆ ಅಧಿಕಾರಕ್ಕಾಗಿ ಹಾವು ಏಣಿ ಆಟಕ್ಕೆ ಸೆ.12ರಂದು ತೆರೆ ಬೀಳಲಿದೆ. ಬಿಜೆಪಿಗೆ 20 ಸದಸ್ಯ ಬಲ?
ನಗರಸಭೆಯಲ್ಲಿ ಅಧಿಕಾರ ಹಿಡಿಯಲು ಹವಣಿಸಿರುವ ಸಂಸದರ ಬಣದಲ್ಲಿ ಬಿಜೆಪಿಯಿಂದ ಗೆದ್ದಿರುವ 9 ಮಂದಿ, ಪಕ್ಷೇತರ 4 ಮಂದಿ, ಬಂಡಾಯ ಕಾಂಗ್ರೆಸ್‌ನ 6 ಸದಸ್ಯರು ಇದ್ದಾರೆ ಎನ್ನಲಾಗಿದ್ದು, ಇದಕ್ಕೆ ಸಂಸದರ ಒಂದು ಮತ ಸೇರಿದರೆ 20 ಆಗಲಿದೆ. ಮೈತ್ರಿಯ ಕಾರಣ ಜೆಡಿಎಸ್‌ನ ಇಬ್ಬರು ಸದಸ್ಯರು ಬಿಜೆಪಿ ಬೆಂಬಲಿರನ್ನೇ ಬೆಂಬಲಿಸಬೇಕು. ಆದರೆ ಅವರು ಕೈಕೊಟ್ಟಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್‌ಗೆ 16 ಸದಸ್ಯ ಬಲ
ಇನ್ನು ಕಾಂಗ್ರೆಸ್ ಪಕ್ಷದ ಪಾಳೆಯದಲ್ಲಿ ಕಾಂಗ್ರೆಸ್‌ನ 10, ಪಕ್ಷೇತರ 1, ಜೆಡಿಎಸ್ 2 ಸದಸ್ಯರು ಸೇರಿ ಒಟ್ಟು 13 ನಗರಸಭಾ ಸದಸ್ಯರ ಬೆಂಬಲವಿದೆ. ಇದರ ಜತೆಗೆ ಶಾಸಕ ಪ್ರದೀಪ್ ಈಶ್ವರ್ ಮತ್ತು ಇಬ್ಬರು ವಿಧಾನಪರಿಷತ್ ಸದಸ್ಯರಾದ ಎಂ.ಆರ್.ಸೀತಾರಾಂ, ಅನಿಲ್‌ಕುಮಾರ್ ಸೇರಿದರೆ 16 ಆಗಲಿದೆ. ಸರಳ ಬಹುಮತಕ್ಕೆ 18 ಮಂದಿ ಸದಸ್ಯರ ಬೆಂಬಲ ಬೇಕೇ ಬೇಕಿದ್ದು, ಇದನ್ನು ಮೀರಿ ಬಿಜೆಪಿ ಬೆಂಬಲಿತರು ಇದ್ದಂತೆ ಮೇಲ್ನೋಟಕ್ಕೆ ಕಾಣುತ್ತಿದ್ದರೂ, ಚುನಾವಣೆಯ ದಿನ ಎಲ್ಲ ಲೆಕ್ಕಾಚಾರ ತಲೆಕೆಳಗಾದರೆ ಆಶ್ಚರ್ಯುಡುವಂತಿಲ್ಲ.ಕುತೂಹಲವೆಂದರೆ ಬಿಜೆಪಿ ಬೆಂಬಲಿತರೆಂದು ಗುರುತಿಸಿಕೊಂಡಿರುವ ಇಬ್ಬರು ಕಾಂಗ್ರೆಸ್ ಸದಸ್ಯರು ಬಿಜೆಪಿಯ ಡಾರ್ಜಲಿಂಗ್ ಪ್ರವಾಸಕ್ಕೋ ಅಥವಾ ಕಾಂಗ್ರೆಸ್‌ನ ರಾಜಾಸ್ಥಾನ ಎರಡೂ ಟೀಮ್‌ನೊಂದಿಗೂ ಪ್ರವಾಸಕ್ಕೆ ಹೋಗಿಲ್ಲ. ಇವರಿಬ್ಬರೂ ಅಡ್ಡಮತದಾನ ಮೂಲಕ ಬಿಜೆಪಿ ಬೆಂಬಲಿಸಲಿದ್ದಾರೆ ಎನ್ನಲಾಗಿದೆ.
ಆದರೆ ಈ ನಡುವೆ ಪ್ರವಾಸಕ್ಕೆ ಹೋಗಿರುವವರ ಕೈಬೆಚ್ಚಗೆ ಮಾಡುವ ಸಂದರ್ಭದಲ್ಲೇನಾದರೂ ಕೊಂಚ ಏರುಪೇರು ಅಸಮಾಧಾನ ತಲೆದೋರಿದರೆ ಮಾತ್ರ ಬಿಜೆಪಿ ಪಾಲಿಗೆ ಅಪಾಯ ಕಟ್ಟಿಟ್ಟ ಬುತ್ತಿ. ಇದಕ್ಕೆ ಪುಷ್ಟಿ ನೀಡುವಂತೆ ಡಾರ್ಜಲಿಂಗ್ ಪ್ರವಾಸದಲ್ಲಿರುವ ಬಿಜೆಪಿ ಬೆಂಬಲಿತರಲ್ಲಿ ಅಧ್ಯಕ್ಷರು ಯಾರಾಗಬೇಕು ಎಂಬ ಚರ್ಚೆ ನಡೆದಿದ್ದು, ಆಗ ಸೂಚಿತ ವ್ಯಕ್ತಿಯ ಪರ ಒಮ್ಮತ ಮೂಡದ ಕಾರಣ ಈಗಾಗಲೇ ಅಲ್ಲಿ ಅಸಮದಾನ ಶುರುವಾಗಿದ್ದು, ಕಾಂಗ್ರೆಸ್ ಇದರ ಲಾಭ ಪಡೆಯಲು ತಂತ್ರ ರೂಪಿಸುತ್ತಿದೆ. ಪೈಪೋಟಿ ನೀಡಲು ತನಗೆ ಸಾಧ್ಯವಿಲ್ಲ ಎಂದು ಭಾವಿಸಿದ್ದ ಕಾಂಗ್ರೆಸ್ ಇದೀಗ ತನ್ನದೇ ಆದ ತಂತ್ರಗಳಿಂದ ಮುನ್ನೆಲೆಗೆ ಬಂದಿದ್ದು, ವಿಧಾನಪರಿಷತ್ ಸದಸ್ಯರನ್ನು ಮತದಾರರ ಪಟ್ಟಿಗೆ ಸೇರಿಸುವ ಕೆಲಸಕ್ಕೆ ಮುಂದಾಗಿದೆ. ಎಂಎಲ್ ಸಿಗಳಾದ ಅನಿಲ್, ಮತ್ತು ಎಂ.ಆರ್.ಸೀತಾರಾಮ್ ಅವರನ್ನು ಸೇರಿಸಿರುವ ಬಗ್ಗೆ ಮಾಹಿತಿಯಿದ್ದು, ಇನ್ನೂ ಮೂವರನ್ನು ಸೇರಿಸಲು ಕಾಂಗ್ರೆಸ್ ಪ್ರಯತ್ನ ಮುಂದುವರಿಸಿದೆ ಎಂದು ಮೂಲಗಳು ತಿಳಿಸಿವೆ.ಮತಪಟ್ಟಿಗೆ ಹೆಚ್ಚುವರಿಯಾಗಿ ವಿಧಾನಪರಿಷತ್ ಸದಸ್ಯರ ಸೇರ್ಪಡೆಯಾದರೆ ಅದು ಕಾಂಗ್ರೆಸ್ ಪಾಲಿಗೆ ವರದಾನವಾಗುವುದರಲ್ಲಿ ಅನುಮಾನವಿಲ್ಲ. ಮೇಲಾಗಿ ವಿಫ್ ಉಲ್ಲಂಘಿಸಿದರೆ ಉಚ್ಚಾಟನೆ ಖಚಿತ ಎನ್ನುವ ಎಚ್ಚರಿಕೆಯ ಸಂದೇಶ ವನ್ನೂ ನೀಡಿದೆ. ಇದೇ ಕಾರಣಕ್ಕಾಗಿ ಬಿಜೆಪಿ ತಮ್ಮ ಪಾಳೆಯದಲ್ಲಿ ಗುರುತಿಸಿಕೊಂಡಿರುವ ಸದಸ್ಯರನ್ನು ಎಚ್ಚರಿಕೆಯಿಂದ ಕಾಪಾಡಿಕೊಳ್ಳುವ ತಂತ್ರ ಅನುಸರಿಸುತ್ತಿದೆ.
ಇದರ ನಡುವೆ ಸಂಸದ ಡಾ.ಕೆ.ಸುಧಾಕರ್ ಅಧ್ಯಕ್ಷ , ಉಪಾಧ್ಯಕ್ಷ ಚುನಾವಣೆ ಅಕ್ರಮವಾಗಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಿರುವುದನ್ನು ವಿರೋಧಿಸಿ ಬುಧವಾರ ಹೈಕೋರ್ಟ್ ಮೆಟ್ಟಿಲೇರುವ ಸೂಚನೆ ನೀಡಿದ್ದರು. ನ್ಯಾಯಾಲಕ್ಕೆ ತೆರಳಿದಲ್ಲಿ ಚುನಾವಣೆ ಬಗ್ಗೆ ಎನು ಆದೇಶ ನೀಡುತ್ತದೆಯೋ ಕಾದು ನೋಡಬೇಕಿದೆ.