ಸಾರಾಂಶ
ಸಿದ್ದರಾಮಯ್ಯನವರ ಮೇಲೆ ಹೈಕಮಾಂಡ್ ಆಶೀರ್ವಾದ ಇರುವವರೆಗೂ ಅವರು ಮುಖ್ಯಮಂತ್ರಿ ಆಗಿರುತ್ತಾರೆ. ಒಂದು ವೇಳೆ ಮುಖ್ಯಮಂತ್ರಿ ಬದಲಾವಣೆ ಪ್ರಸಂಗ ಬಂದರೆ ಆ ಸ್ಥಾನಕ್ಕೆ ನಾನೇ ಸ್ಪರ್ಧೆ ಮಾಡುತ್ತೇನೆ ಎಂದು ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಹೇಳಿದರು.
ದಾವಣಗೆರೆ : ಸಿದ್ದರಾಮಯ್ಯನವರ ಮೇಲೆ ಹೈಕಮಾಂಡ್ ಆಶೀರ್ವಾದ ಇರುವವರೆಗೂ ಅವರು ಮುಖ್ಯಮಂತ್ರಿ ಆಗಿರುತ್ತಾರೆ. ಒಂದು ವೇಳೆ ಮುಖ್ಯಮಂತ್ರಿ ಬದಲಾವಣೆ ಪ್ರಸಂಗ ಬಂದರೆ ಆ ಸ್ಥಾನಕ್ಕೆ ನಾನೇ ಸ್ಪರ್ಧೆ ಮಾಡುತ್ತೇನೆ ಎಂದು ವೀರಶೈವ ಲಿಂಗಾಯತ ಸಮಾಜದ ಹಿರಿಯ ನಾಯಕ, ದಾವಣಗೆರೆ ದಕ್ಷಿಣ ಕ್ಷೇತ್ರ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಹೇಳಿದರು.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮೈಸೂರಿನ ಮುಡಾ ನಿವೇಶನ ಪ್ರಕರಣದಲ್ಲಿ ವಿನಾಕಾರಣ ಸಿದ್ದರಾಮಯ್ಯ ವಿರುದ್ಧ ಆರೋಪ ಮಾಡಲಾಗುತ್ತಿದೆ. ಪ್ರಕರಣದಲ್ಲಿ ಯಾವುದೇ ಹುರುಳಿಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ ಎಂದರು.
ಹೈಕಮಾಂಡ್ ಮನಸ್ಸೇ ಮುಖ್ಯ: ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದಾರೆ. ಮುಂದೆಯೂ ಮುಖ್ಯಮಂತ್ರಿ ಆಗಿರುತ್ತಾರೆ. ರಾಜಕೀಯದಲ್ಲಿ ಸೀನಿಯರ್, ಜೂನಿಯರ್ ಎಂಬ ಪ್ರಶ್ನೆಯೇ ಇಲ್ಲ. ಕಾಂಗ್ರೆಸ್ ಹೈಕಮಾಂಡ್ ಯಾರನ್ನು ಮುಖ್ಯಮಂತ್ರಿ ಮಾಡಬೇಕೆಂಬುದಾಗಿ ಮನಸ್ಸು ಮಾಡುತ್ತದೆಯೋ ಅಂಥವರೇ ಮುಖ್ಯಮಂತ್ರಿ ಆಗುತ್ತಾರೆ. ಎಲ್ಲ ಶಾಸಕರ ಅಭಿಪ್ರಾಯ ಸಂಗ್ರಹಿಸಿ, ಮತ ಹಾಕಿದರೆ ಮುಖ್ಯಮಂತ್ರಿ ಆಗುತ್ತಾರೆ. ಅಂಥ ಸಂದರ್ಭ ಬಂದರೆ ನಾನೂ ಮುಖ್ಯಮಂತ್ರಿ ಸ್ಥಾನದ ಸ್ಪರ್ಧೆಯಲ್ಲಿದ್ದೇ ಇರುತ್ತೇನೆ ಎಂದು ಹೇಳಿದರು.
ಬಾಯಿಗೆ ಬಂದಂತೆ ಮಾತನಾಡಿದ್ರೆ ಪ್ರಯೋಜನ ಇಲ್ಲ: ಮುಖ್ಯಮಂತ್ರಿ ಆಯ್ಕೆ ವೇಳೆ ಕಾಂಗ್ರೆಸ್ ಶಾಸಕರು ನಿರ್ಧಾರ ಕೈಗೊಳ್ಳುತ್ತಾರೆ. ಶಾಸಕರು ಯಾರಿಗೆ ಬಹುಮತ ಕೊಡುತ್ತಾರೋ ಅಂಥವರನ್ನು ಕಾಂಗ್ರೆಸ್ ಹೈಕಮಾಂಡ್ ಒಪ್ಪುತ್ತದೆ. ರಾಜ್ಯ ಕಾಂಗ್ರೆಸ್‌ನಲ್ಲಿ ಸದ್ಯಕ್ಕೆ ಅಂಥ ಪರಿಸ್ಥಿತಿಯೇನೂ ಇಲ್ಲ. ಸುಮ್ಮನೆ ಬಾಯಿಗೆ ಬಂದಂತೆಲ್ಲ ಮಾತನಾಡುವುದರಿಂದ ಪ್ರಯೋಜನವೂ ಇಲ್ಲ. ಪಕ್ಷದಲ್ಲಿ ನಾನು ಹಿರಿಯ. ಮುಖ್ಯಮಂತ್ರಿ ಆಗಬೇಕೆಂದು ಕೆಲವರು ಬಾಯಿಗೆ ಬಂದಂತೆಲ್ಲ ಮಾತನಾಡುತ್ತಾ ಓಡಾಡಿಕೊಂಡಿದ್ದರೆ ಹಗುರ ಆಗುತ್ತಾರೆ ಅಷ್ಟೇ ಎಂದು ಪ್ರಶ್ನೆಯೊಂದಕ್ಕೆ ಶಿವಶಂಕರಪ್ಪ ಪ್ರತಿಕ್ರಿಯಿಸಿದರು.