ಉಪ ಚುನಾವಣೆ : ಚನ್ನಪಟ್ಟಣದಲ್ಲಿ ಕಾಂಗ್ರೆಸ್‌ ಹಿರಿಯ ನಾಯಕರ ಭರ್ಜರಿ ಪ್ರಚಾರ - ಗೆಲುವಿಗೆ ಪ್ಲಾನ್

| Published : Nov 08 2024, 01:17 AM IST / Updated: Nov 08 2024, 04:34 AM IST

CP Yogeshwar
ಉಪ ಚುನಾವಣೆ : ಚನ್ನಪಟ್ಟಣದಲ್ಲಿ ಕಾಂಗ್ರೆಸ್‌ ಹಿರಿಯ ನಾಯಕರ ಭರ್ಜರಿ ಪ್ರಚಾರ - ಗೆಲುವಿಗೆ ಪ್ಲಾನ್
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದ ಉಪ ಚುನಾವಣೆ ಕಾವು ದಿನೇ ದಿನೇ ಹೆಚ್ಚಾಗುತ್ತಿರುವ ನಡುವೆಯೇ ಚನ್ನಪಟ್ಟಣದಲ್ಲಿ ಕಾಂಗ್ರೆಸ್‌ ಹಿರಿಯ ನಾಯಕರು ಪಕ್ಷದ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್‌ ಅವರ ಪರವಾಗಿ ಬಿರುಸಿನ ಪ್ರಚಾರ ನಡೆಸಿದರು.

 ಚನ್ನಪಟ್ಟಣ : ರಾಜ್ಯದ ಉಪ ಚುನಾವಣೆ ಕಾವು ದಿನೇ ದಿನೇ ಹೆಚ್ಚಾಗುತ್ತಿರುವ ನಡುವೆಯೇ ಚನ್ನಪಟ್ಟಣದಲ್ಲಿ ಕಾಂಗ್ರೆಸ್‌ ಹಿರಿಯ ನಾಯಕರು ಪಕ್ಷದ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್‌ ಅವರ ಪರವಾಗಿ ಬಿರುಸಿನ ಪ್ರಚಾರ ನಡೆಸಿದರು.

ಸಚಿವರು, ಸಂಸದರು, ಶಾಸಕರಿಂದ ಪ್ರಚಾರ: 

ಯೋಗೇಶ್ವರ್ ಪರವಾಗಿ ಸಚಿವರಾದ ಕೃಷ್ಣ ಬೈರೇಗೌಡ, ಕೆ.ಜೆ.ಜಾರ್ಜ್, ಚಲುವರಾಯಸ್ವಾಮಿ, ಮಾಜಿ ಸಂಸದ ಡಿ.ಕೆ.ಸುರೇಶ್, ಶಾಸಕರಾದ ಕೃಷ್ಣಪ್ಪ, ಮಾಜಿ ಸಭಾಪತಿ ಬಿ.ಎಲ್.ಶಂಕರ್, ರಘುನಂದನ್ ರಾಮಣ್ಣ, ಕೆ.ಪಿ.ನಂಜುಂಡಿ ಸೇರಿ ಅನೇಕ ನಾಯಕರು ಚನ್ನಪಟ್ಟಣದಲ್ಲಿ ಮತಯಾಚಿಸಿದರು.

ಚನ್ನಪಟ್ಟಣದಲ್ಲಿ ಕಾಂಗ್ರೆಸ್‌ ಗೆಲುವು ಖಚಿತ- ಚಾರ್ಜ್‌:

ಚನ್ನಪಟ್ಟಣದ ಕಾಂಗ್ರೆಸ್‌ ಕಚೇರಿಯಲ್ಲಿ ಮಾತನಾಡಿದ ಸಚಿವ ಕೆ.ಜೆ.ಜಾರ್ಜ್, ಸಿದ್ದರಾಮಯ್ಯ ಅವರ ಕೈ ಬಲ ಪಡಿಸಲು ಈ ಉಪ ಚುನಾವಣೆಯಲ್ಲಿ ನಮ್ಮ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು. ಗ್ಯಾರಂಟಿಯಿಂದ ನಮ್ಮ ಆರ್ಥಿಕವಾಗಿ ದಿವಾಳಿಯಾಗುತ್ತೇವೆ ಎಂಬ ಪ್ರತಿಪಕ್ಷಗಳ ದುರಾಲೋಚನೆ ಸುಳ್ಳಾಗಿದೆ. ಕರ್ನಾಟಕ ಆರ್ಥಿಕವಾಗಿ ಸದೃಢವಾಗಿದೆ. ಕರ್ನಾಟಕವು ಗಣನೀಯ ಆರ್ಥಿಕ ಪ್ರಗತಿ ಸಾಧಿಸಿದ್ದು, 1,03,683 ಕೋಟಿ ರೂ. ಆದಾಯ ಸಂಗ್ರಹ ಮಾಡಿದೆ ಎಂದು ಇತ್ತೀಚಿನ ವರದಿ ಹೇಳಿದೆ ಎಂದರು.

ಚನ್ನಪಟ್ಟಣ ಬಿಟ್ಟು ಹೋಗಿಲ್ಲ-ಕೃಷ್ಣ:

ಮತ ಪ್ರಚಾರದ ವೇಳೆ ಮಾತನಾಡಿದ ಸಚಿವ ಕೃಷ್ಣ ಬೈರೇಗೌಡ ಅವರು, ಯೋಗೇಶ್ವರ್ ಅವರು ಗೆದ್ದರೂ ನಿಮ್ಮ ಜೊತೆ ಇದ್ದರು, ಸೋತಾಗಲೂ ನಿಮ್ಮ ಜೊತೆಯಲ್ಲೇ ಇದ್ದರು. ಚನ್ನಪಟ್ಟಣ ಬಿಟ್ಟು ಬೇರೆ ಎಲ್ಲೂ ಹೋಗಿಲ್ಲ. ಆದರೆ ಎಲೆಕ್ಷನ್‌ಗಾಗಿ ಊರಿಂದ ಊರಿಗೆ ಹೋಗುವ ಜೆಡಿಎಸ್ ಅಭ್ಯರ್ಥಿ ಚನ್ನಪಟ್ಟಣದಲ್ಲಿ ಗ್ಯಾರಂಟಿ ಇರುತ್ತಾರಾ ಎಂದು ಮತದಾರರನ್ನು ಪ್ರಶ್ನಿಸಿದರು.

ಸರ್ವತೋಮುಖ ಅಭಿವೃದ್ಧಿಗೆ ಸಿಪಿವೈರನ್ನು ಬೆಂಬಲಿಸಿ-ಚಲುವ

ಕ್ಷೇತ್ರದ ಕೋಡಂಬಳ್ಳಿಯಲ್ಲಿ ಪ್ರಚಾರದ ವೇಳೆ ಸಚಿವ ಚಲುವರಾಯಸ್ವಾಮಿ ಅವರು, ಚನ್ನಪಟ್ಟಣದ ಸರ್ವತೋಮುಖ ಅಭಿವೃದ್ಧಿಗೆ ಯೋಗೇಶ್ವರ್ ರನ್ನು ಬೆಂಬಲಿಸಿ. ಅವರೇ ಸೂಕ್ತ ಅಭ್ಯರ್ಥಿ. ಕ್ಷೇತ್ರದ ಪರಿಚಯವಿದ್ದು ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಯೋಗೇಶ್ವರ್ ಅವರನ್ನು ಗೆಲ್ಲಿಸಿ ಅಭಿವೃದ್ಧಿಗೆ ಕೈ ಜೋಡಿಸಿ ಎಂದು ಕರೆಕೊಟ್ಟರು. 

ಯೋಗೇಶ್ವರ್ ಅಭಿವೃದ್ಧಿ ಕೆಲಸಗಳಿಂದ ಬಹುಮತ: ಬಿ.ಎಲ್‌.ಶಂಕರ್‌

ಯೋಗೇಶ್ವರ್ ಅವರು ಕ್ಷೇತ್ರದಲ್ಲಿ ಸಮರ್ಥ ನಾಯಕ ಎಂಬುದು ಅವರು ಮಾಡಿರುವ ಕೆಲಸಗಳಿಂದ ಸಾಬೀತಾಗಿದೆ. ಕಾಂಗ್ರೆಸ್ ಸರ್ಕಾರದ ಸಾಧನೆಗಳು, ಯೋಗೇಶ್ವರ್ ಅವರು ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳು ಒಗ್ಗೂಡುವುದರಿಂದ ಕಾಂಗ್ರೆಸ್ ಬಹುಮತದಿಂದ ಗೆಲುವು ಸಾಧಿಸಲಿದೆ ಎಂದು ಮಾಜಿ ಸಭಾಪತಿ ಬಿ.ಎಲ್.ಶಂಕರ್ ಅವರು ಹೇಳಿದರು.

ಗೌಡರ ಕುಟುಂಬ 7 ವರ್ಷದಲ್ಲಿ ಎಂದಿಗೂ ಕಷ್ಟ ಕೇಳಲು ಬಂದಿಲ್ಲ: ಡಿಕೆಸು

ಚನ್ನಪಟ್ಟಣದ ನಾನಾ ವಾರ್ಡ್‌ಗಳಲ್ಲಿ ಪ್ರಚಾರ ನಡೆಸಿದ ಮಾಜಿ ಸಂಸದ ಡಿ.ಕೆ. ಸುರೇಶ್, ದೇವೇಗೌಡರು, ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಅವರು ಕಳೆದ 7 ವರ್ಷಗಲ್ಲಿ ಎಂದಿಗೂ ಜನರ ಕಷ್ಟ ಕೇಳಲು ಬಂದಿಲ್ಲ. ಈಗ ಮಗ ಹಾಗೂ ಮೊಮ್ಮಗನ ಗೆಲ್ಲಿಸಲು ಬಂದಿದ್ದಾರೆ. ಇಷ್ಟು ದಿನ ಜನರ ಕಷ್ಟ ಕೇಳಲು ಅವರು ಹಳ್ಳಿಗೆ ಹೋಗಿಲ್ಲ. ಹೋಗಿದ್ದರೆ, ಮಾಧ್ಯಮಗಳು ಅದರ ಬಗ್ಗೆ ಮಾಹಿತಿ ನೀಡಲಿ. ಅವರು ಮುಖ್ಯಮಂತ್ರಿ ಆಗಿದ್ದಾಗ ಕ್ಷೇತ್ರದ ಅಭಿವೃದ್ಧಿಗೆ ಎಷ್ಟು ಸಭೆ ಮಾಡಿದ್ದಾರೆ ಎಂದು ಮಾಹಿತಿ ನೀಡಲಿ’ ಎಂದು ತಿಳಿಸಿದರು.