ವಕ್ಫ್‌ ಬೋರ್ಡ್ ಈಸ್ಟ್‌ ಇಂಡಿಯಾ ಕಂಪನಿ ಇದ್ದಂತೆ : ವಿಪಕ್ಷ ನಾಯಕ ಆರ್‌. ಅಶೋಕ್‌

| Published : Nov 07 2024, 11:53 PM IST / Updated: Nov 08 2024, 04:54 AM IST

R Ashok

ಸಾರಾಂಶ

ಸರ್ಕಾರಿ ಶಾಲೆಯನ್ನು ಉಳಿಸುವುದಕ್ಕಾಗಿ ನಾವಿಲ್ಲಿಗೆ ಬಂದಿದ್ದೇವೆ. ಆದರೆ, ಕಾಂಗ್ರೆಸ್‌ನವರು ಇಲ್ಲಿಗೆ ಯಾಕೆ ಬರುತ್ತಾರೆ ಎಂದು ನಮ್ಮನ್ನೇ ಪ್ರಶ್ನೆ ಮಾಡುತ್ತಾರೆ. ನಾನು ವಿಪಕ್ಷ ನಾಯಕ. ನಮ್ಮನ್ನೇ ಪ್ರಶ್ನೆ ಮಾಡುತ್ತೀರಾ. ನೀವು ಇನ್ನು ಎಷ್ಟು ದಿನ ಅಧಿಕಾರದಲ್ಲಿರುತ್ತೀರೋ ನೋಡುತ್ತೇನೆ.

  ಶ್ರೀರಂಗಪಟ್ಟಣ : ವಕ್ಫ್‌ ಬೋರ್ಡ್‌ ಈಸ್ಟ್ ಇಂಡಿಯಾ ಕಂಪನಿ ಇದ್ದಂತೆ. ರೈತರ ಭೂಮಿಯನ್ನೆಲ್ಲಾ ವಕ್ಫ್‌ ಬೋರ್ಡ್‌ಗೆ ಬರೆದುಕೊಟ್ಟರೆ ಉಳುಮೆ ಮಾಡುವುದು ಎಲ್ಲಿ ಎಂದು ವಿಪಕ್ಷ ನಾಯಕ ಆರ್‌.ಅಶೋಕ್‌ ಪ್ರಶ್ನಿಸಿದರು.

ತಾಲೂಕಿನ ಚಂದಗಾಲು ಗ್ರಾಮದಲ್ಲಿ ದೇಗುಲ ಹಾಗೂ ಸರ್ಕಾರಿ ಶಾಲೆ ಜಾಗಕ್ಕೆ ವಕ್ಫ್‌ ಕನ್ನ ಹಾಕಿರುವುದರ ವಿರುದ್ಧ ಮಾತನಾಡಿ, ಜಮೀರ್‌ಗೆ ಮಾನ-ಮರ್ಯಾದೆಯೇ ಇಲ್ಲ. ಮೊದಲು ಅವನ ಬಾಯಿಗೆ ಪ್ಲಾಸ್ಟರ್‌ ಹಾಕಬೇಕು. ಯಾರ ಜಮೀನನ್ನೂ ನುಂಗಲು ಬಿಡಬಾರದು ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರು.

ಸರ್ಕಾರಿ ಶಾಲೆಯನ್ನು ಉಳಿಸುವುದಕ್ಕಾಗಿ ನಾವಿಲ್ಲಿಗೆ ಬಂದಿದ್ದೇವೆ. ಆದರೆ, ಕಾಂಗ್ರೆಸ್‌ನವರು ಇಲ್ಲಿಗೆ ಯಾಕೆ ಬರುತ್ತಾರೆ ಎಂದು ನಮ್ಮನ್ನೇ ಪ್ರಶ್ನೆ ಮಾಡುತ್ತಾರೆ. ನಾನು ವಿಪಕ್ಷ ನಾಯಕ. ನಮ್ಮನ್ನೇ ಪ್ರಶ್ನೆ ಮಾಡುತ್ತೀರಾ. ನೀವು ಇನ್ನು ಎಷ್ಟು ದಿನ ಅಧಿಕಾರದಲ್ಲಿರುತ್ತೀರೋ ನೋಡುತ್ತೇನೆ ಎಂದು ಸವಾಲು ಹಾಕಿದರು.

ಜಮೀರ್ ಅಹಮದ್ ಖಾನ್ ಲಿಕೋ ಲಿಕೋ ಅಂತಾನೆ. ಹೀಗಾಗಿ ಎಲ್ಲ ಕಡೆ ವಕ್ಫ್‌ ಹೆಸರಿಗೆ ಆಸ್ತಿಯನ್ನು ಬರೆದಿದ್ದಾರೆ. ಸರ್ಕಾರಿ ಶಾಲೆಯನ್ನ ಹೇಗೆ ಖಬರಸ್ತಾನ್ ಎಂದು ಬರೆದರು?, ದೇಶದಲ್ಲಿ ಆರ್ಮಿ ಅವರಿಗೆ ಆಸ್ತಿ ಜಾಸ್ತಿ ಅಂತಾರೆ. ಅವರನ್ನು ಬಿಟ್ಟರೇ ಈ ಮನೆಹಾಳರದ್ದು ಜಾಸ್ತಿ ಆಸ್ತಿ ಎಂದು ಕಿಡಿಕಾರಿದರು.

ಎಲ್ಲ ರೈತರು ತಮ್ಮ ಜಮೀನುಗಳ ಪಹಣಿಯನ್ನು ಪರಿಶೀಲನೆ ಮಾಡಿಕೊಳ್ಳಿ. ನಮ್ಮ ದೇಶ ಉಳಿಯಬೇಕು.

ಸರ್ಕಾರಿ ಶಾಲೆ ವಕ್ಫ್‌ ಹೆಸರು ಬದಲಾವಣೆ ಮಾಡದೇ ಇದ್ದರೇ ನಾನು ಬಿಡುವುದಿಲ್ಲ. ಇಲ್ಲಿಯೇ ನಾನು ಹೋರಾಟ ಮಾಡುತ್ತೇನೆ. ರೈತರ ಜಮೀನು ಉಳಿಯಬೇಕು. ನಮ್ಮ ಶಾಲೆ ನಮ್ಮ ಹಕ್ಕು. ಪ್ರಾಣ ಬಿಟ್ಟರೂ ಈ ಶಾಲೆಯನ್ನ ಬಿಟ್ಟುಕೊಡುವುದಿಲ್ಲ ಎಂದು ಗಟ್ಟಿಧ್ವನಿಯಲ್ಲಿ ಹೇಳಿದರು.