ಹೈಟೆಕ್ ಸರ್ಕಾರಿಂದ ಜೈಲಿನಲ್ಲಿ ಕೈದಿಗಳಿಗೆ ಹೈಟೆಕ್ ಸೌಲಭ್ಯ : ಎಚ್.ಡಿ.ಕುಮಾರಸ್ವಾಮಿ

| Published : Aug 27 2024, 01:32 AM IST / Updated: Aug 27 2024, 04:31 AM IST

HD Kumaraswamy

ಸಾರಾಂಶ

ಪರಪ್ಪನ ಅಗ್ರಹಾರದಲ್ಲಿ ಕೈದಿಗಳಿಗೆ ಪಂಚತಾರ ವ್ಯವಸ್ಥೆ ಇದೆ. ಈಗ ದರ್ಶನ್ ವಿಚಾರದಲ್ಲಿ ಅದು ಪ್ರಚಾರಕ್ಕೆ ಬಂದಿದೆ. ಸರ್ಕಾರ ಆ ಕೈದಿಗಳನ್ನು‌ ಬೇರೆ ಕಡೆಗೆ ವರ್ಗಾಯಿಸಬೇಕು ಎಂದು‌ ತೀರ್ಮಾನ ಮಾಡ್ತಾ ಇದ್ಯಂತೆ. ಈ ಸರ್ಕಾರದ ಮೇಲೆ ಜನರು ನಂಬಿಕೆ ಕಳೆದುಕೊಂಡಿದ್ದಾರೆ.

 ಮಂಡ್ಯ :  ಗೃಹ ಸಚಿವ ಡಾ.ಜಿ.ಪರಮೇಶ್ವರ್ ನಮ್ಮದು ಹೈಟೆಕ್ ಸರ್ಕಾರ ಅಂತ ಹೇಳಿದ್ದರು. ಅದರಂತೆ ಪರಪ್ಪನ ಅಗ್ರಹಾರದಲ್ಲಿ ಕೈದಿಗಳಿಗೆ ಹೈಟೆಕ್ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ ಟೀಕಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಾ.ಜಿ.ಪರಮೇಶ್ವರ್ ಅವರು ಪ್ರತಿ ದಿನ ಒಂದೊಂದು ಕಥೆ ಹೇಳುತ್ತಾರೆ. ನಾವು ಪಾರದರ್ಶಕ ಹಾಗೂ ಹೈಟೆಕ್ ಸರ್ಕಾರ ಎಂದು ಹೇಳುತ್ತಾರೆ. ಪರಪ್ಪನ ಅಗ್ರಹಾರದಲ್ಲಿ ಕೈದಿಗಳಿಗೆ ಸೌಲಭ್ಯ ಕಲ್ಪಿಸುತ್ತಿರುವುದು ಕೂಡ ಸರ್ಕಾರದ ಹೈಟೆಕ್ ಆಗಿದೆ ಎಂದು ವ್ಯಂಗ್ಯವಾಡಿದರು.

ಜೈಲಿನ ವ್ಯವಸ್ಥೆ ಹೊಸದಾಗಿ ಏನೂ ಆಗಿಲ್ಲ. ಬಹಳ ಹಿಂದಿನಿಂದಲೂ ಇಂತಹ ವ್ಯವಸ್ಥೆ ನಡೆಯುತ್ತಾ ಇದೆ. ಸಮಗ್ರ ತನಿಖೆ ನಡೆಯುವ ವಿಚಾರವಾಗಿ ಈ ಹಿಂದೆ ಡಿಜಿ ಮತ್ತು ಡಿಸಿಪಿ ನಡುವೆ ದೊಡ್ಡ ಗಲಾಟೆ ಆಗಿತ್ತು ಎಂದರು.

ಪರಪ್ಪನ ಅಗ್ರಹಾರದಲ್ಲಿ ಕೈದಿಗಳಿಗೆ ಪಂಚತಾರ ವ್ಯವಸ್ಥೆ ಇದೆ. ಈಗ ದರ್ಶನ್ ವಿಚಾರದಲ್ಲಿ ಅದು ಪ್ರಚಾರಕ್ಕೆ ಬಂದಿದೆ. ಸರ್ಕಾರ ಆ ಕೈದಿಗಳನ್ನು‌ ಬೇರೆ ಕಡೆಗೆ ವರ್ಗಾಯಿಸಬೇಕು ಎಂದು‌ ತೀರ್ಮಾನ ಮಾಡ್ತಾ ಇದ್ಯಂತೆ. ಈ ಸರ್ಕಾರದ ಮೇಲೆ ಜನರು ನಂಬಿಕೆ ಕಳೆದುಕೊಂಡಿದ್ದಾರೆ ಎಂದರು.

ರಾಜ್ಯದಲ್ಲಿ ಮಂತ್ರಿಗಳಿಗೆ ಕೆಲಸವಿಲ್ಲ. ಭ್ರಷ್ಟಾಚಾರದ ಬಗ್ಗೆ ಬೀದಿ ಬೀದಿಯಲ್ಲಿ ಮಾತಾಡಿಕೊಂಡು ಕೆಲಸ ಮಾತ್ತಿದ್ದಾರೆ. ಸಚಿವರಿಗೆ ಸಿಎಂ ಅವರ ಹಗರಣ ಬಗ್ಗೆ ಮಾತಾಡಲು ಸಮಯ ಸಾಕಾಗುತ್ತಿಲ್ಲ. ಅವರು ಮಾಡಿರುವ ತಪ್ಪುಗಳನ್ನು ಮುಚ್ಚಿಕೊಳ್ಳಲು ವಿಚಾರವನ್ನು ಡೈವರ್ಟ್ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರದಲ್ಲಿ ಆಡಳಿತ ಎನ್ನುವ ನಡವಳಿಕೆ‌ ಇಲ್ಲ. ಈ ಸರ್ಕಾರ ಸತ್ತು ಹೋಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೇಣುಕಾಸ್ವಾಮಿ ಕುಟುಂಬಸ್ಥರು ಅವರ ನೋವು ಹೇಳಿಕೊಳ್ಳುತ್ತಾರೆ. ಆದರೆ, ಕೆಲವರು ದುಡ್ಡು ಇದ್ರೆ ಏನು ಬೇಕಾದರೂ ಕೊಂಡುಕೊಳ್ಳಬಹುದು ಎಂದು ತಿಳಿದಿದ್ದಾರೆ. ಅಧಿಕಾರಿಗಳಿಂದ‌ ಜನರಿಗೆ ನ್ಯಾಯ ದೊರಕಲ್ಲ. ನ್ಯಾಯಾಲಯದಿಂದ‌ ನ್ಯಾಯ ದೊರಬೇಕು ಎಂದರು.