ಸಂಪುಟಕ್ಕೆ ಡಿಸೆಂಬರಲ್ಲಿ ಸರ್ಜರಿ? ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಬದಲಾವಣೆ ಈಗಲೇ ಇಲ್ಲ: ಮೂಲಗಳು

| Published : Aug 25 2024, 05:28 AM IST

Siddaramaiah and DK Shivakumar

ಸಾರಾಂಶ

ರಾಜ್ಯ ಸಚಿವ ಸಂಪುಟ ಪುನರ್‌ ರಚನೆ ಬಗ್ಗೆ ಶುಕ್ರವಾರ ಹೈಕಮಾಂಡ್‌ ಜತೆಗೆ ನಡೆದ ಸಭೆಯಲ್ಲಿ ಯಾವುದೇ ಚರ್ಚೆಯಾಗಿಲ್ಲ. ಪೂರ್ವ ನಿಗದಿಯಂತೆ ಸಂಪುಟ ಪುನಾರಚನೆಯು ಡಿಸೆಂಬರ್‌ನಲ್ಲಿ ನಡೆಯುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.

ಬೆಂಗಳೂರು :  ರಾಜ್ಯ ಸಚಿವ ಸಂಪುಟ ಪುನರ್‌ ರಚನೆ ಬಗ್ಗೆ ಶುಕ್ರವಾರ ಹೈಕಮಾಂಡ್‌ ಜತೆಗೆ ನಡೆದ ಸಭೆಯಲ್ಲಿ ಯಾವುದೇ ಚರ್ಚೆಯಾಗಿಲ್ಲ. ಪೂರ್ವ ನಿಗದಿಯಂತೆ ಸಂಪುಟ ಪುನಾರಚನೆಯು ಡಿಸೆಂಬರ್‌ನಲ್ಲಿ ನಡೆಯುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.

ಶುಕ್ರವಾರ ದೆಹಲಿಯಲ್ಲಿ ಕಾಂಗ್ರೆಸ್‌ ವರಿಷ್ಠರನ್ನು ಭೇಟಿ ಮಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಸಂಪುಟ ಪುನಾರಚನೆ ಬಗ್ಗೆಯೂ ಚರ್ಚೆ ನಡೆಸಿದ್ದಾರೆ ಎಂಬ ವದಂತಿ ಹರಡಿತ್ತು.

ಈ ಬಗ್ಗೆ ಕಾಂಗ್ರೆಸ್‌ ಉನ್ನತ ಮೂಲಗಳು ಸ್ಪಷ್ಟನೆ ನೀಡಿದ್ದು, ಕಳೆದ ಬಾರಿ ಎಐಸಿಸಿ ಜತೆಗಿನ ಸಭೆಯಲ್ಲಿಯೇ ಸಂಪುಟ ಪುನಾರಚನೆ ಬಗ್ಗೆ ಚರ್ಚಿಸಲಾಗಿತ್ತು. ಈ ವೇಳೆ ಡಿಸೆಂಬರ್‌ನಲ್ಲಿ ಸಂಪುಟ ಪುನರ್‌ ರಚನೆ ಬಗ್ಗೆ ತೀರ್ಮಾನಿಸಲಾಗಿದೆ. ಹೀಗಾಗಿ ಶುಕ್ರವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ಗಾಂಧಿ ಸೇರಿ ವರಿಷ್ಠರೊಂದಿಗೆ ನಡೆದ ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗಿಲ್ಲ ಎಂದು ತಿಳಿಸಿದ್ದಾರೆ.

 ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಸದ್ಯಕ್ಕಿಲ್ಲ: 

ಇನ್ನು ಕೆಪಿಸಿಸಿ ಅಧ್ಯಕ್ಷರ ಸ್ಥಾನ ಬದಲಾವಣೆ ಬಗ್ಗೆಯೂ ಚರ್ಚೆಯಾಗಿದೆ ಎಂಬ ಗುಲ್ಲೆದ್ದಿದ್ದು, ತಾಲೂಕು ಮತ್ತು ಜಿಲ್ಲಾ ಪಂಚಾಯ್ತಿ ಚುನಾವಣೆ ಮುಗಿಯುವವರೆಗೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯ ಯಾವುದೇ ಪ್ರಕ್ರಿಯೆ ನಡೆಯುವುದಿಲ್ಲ. ತಾ.ಪಂ, ಜಿ.ಪಂ ಚುನಾವಣೆ ಮುಗಿಯುವವರೆಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರೇ ಕೆಪಿಸಿಸಿ ಅಧ್ಯಕ್ಷರಾಗಿ ಮುಂದುವರೆಯುತ್ತಾರೆ ಎಂದು ಮೂಲಗಳು ಖಚಿತಪಡಿಸಿವೆ.

ಈಗೇಕೆ ಈ ಬಗ್ಗೆ ಚರ್ಚೆ?

- ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ಅವರು ಮೊನ್ನೆ ದೆಹಲಿಗೆ ತೆರಳಿ ವರಿಷ್ಠರನ್ನು ಭೇಟಿಯಾಗಿದ್ದರು

- ಈ ವೇಳೆ ಹೈಕಮಾಂಡ್‌ ಜೊತೆ ಸಂಪುಟ ಪುನಾರಚನೆ ಬಗ್ಗೆ ಚರ್ಚಿಸಿದ್ದಾರೆಂದು ವದಂತಿ ಹರಡಿತ್ತು

- ಆದರೆ ಮೂಲಗಳ ಪ್ರಕಾರ ಮೊನ್ನೆಯ ಸಭೆಯಲ್ಲಿ ಸಂಪುಟ ಪುನಾರಚನೆ ಬಗ್ಗೆ ಚರ್ಚೆಯೇ ನಡೆದಿಲ್ಲ

- ಡಿಸೆಂಬರಲ್ಲಿ ಸಂಪುಟ ಪುನಾರಚನೆ ಬಗ್ಗೆ ತಿಂಗಳ ಹಿಂದೆಯೇ ಸಿಎಂ ಹಾಗೂ ವರಿಷ್ಠರ ನಡುವೆ ಚರ್ಚೆ

- ಮೊನ್ನೆಯ ಭೇಟಿಯಲ್ಲಿ ಮುಡಾ, ವಾಲ್ಮೀಕಿ ಹಗರಣ, ಪ್ರತಿಪಕ್ಷಗಳ ಹೋರಾಟ, ರಾಜ್ಯಪಾಲರ ವಿರುದ್ಧ ಕಾಂಗ್ರೆಸ್ಸಿಂದ ನಡೆಸಬೇಕಾದ ಹೋರಾಟದ ಬಗ್ಗೆ ಚರ್ಚೆ ನಡೆದಿದೆ