ರವಿ-ಲಕ್ಷ್ಮಿ ಕೇಸ್‌ ಮಹಜರು ಹೇಗೆ? ಸಿಐಡಿಗೆ ಪರಿಷತ್‌ ಪತ್ರ - ಉತ್ತರ ಆಧರಿಸಿ ಅನುಮತಿ ನೀಡುವ ಬಗ್ಗೆ ತೀರ್ಮಾನ

| Published : Jan 02 2025, 08:04 AM IST

lakshmi hebbalkar

ಸಾರಾಂಶ

 ಲಕ್ಷ್ಮೀ ಹೆಬ್ಬಾಳ್ಕರ್‌ ಕುರಿತು  ಸಿ.ಟಿ.ರವಿ ಬಳಸಿದ್ದಾರೆನ್ನಲಾದ ಆಕ್ಷೇಪಾರ್ಹ ಪದ ಪ್ರಕರಣಕ್ಕೆ ಸಂಬಂಧಿಸಿ ಸ್ಥಳ ಮಹಜರು ವಿಚಾರದಲ್ಲಿ ಗೊಂದಲ ಮುಂದುವರಿದಿದ್ದು, ಯಾವ ರೀತಿಯಲ್ಲಿ ಮಹಜರು ಮಾಡಲಾಗುತ್ತದೆ ಎಂಬುದನ್ನು ವಿವರಿಸುವಂತೆ ವಿಧಾನಪರಿಷತ್‌ ಸಚಿವಾಲಯವು ಸಿಐಡಿಗೆ ಪತ್ರ ಬರೆದಿದೆ.

ಬೆಂಗಳೂರು :  ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಕುರಿತು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಬಳಸಿದ್ದಾರೆನ್ನಲಾದ ಆಕ್ಷೇಪಾರ್ಹ ಪದ ಪ್ರಕರಣಕ್ಕೆ ಸಂಬಂಧಿಸಿ ಸ್ಥಳ ಮಹಜರು ವಿಚಾರದಲ್ಲಿ ಗೊಂದಲ ಮುಂದುವರಿದಿದ್ದು, ಯಾವ ರೀತಿಯಲ್ಲಿ ಮಹಜರು ಮಾಡಲಾಗುತ್ತದೆ ಎಂಬುದನ್ನು ವಿವರಿಸುವಂತೆ ವಿಧಾನಪರಿಷತ್‌ ಸಚಿವಾಲಯವು ಸಿಐಡಿಗೆ ಪತ್ರ ಬರೆದಿದೆ.

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಚಳಿಗಾಲ ಅಧಿವೇಶನ ವೇಳೆ ನಡೆದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಮತ್ತು ಸಿ.ಟಿ.ರವಿ ಪ್ರಕರಣ ಸಂಬಂಧ ಸ್ಥಳ ಮಹಜರು ಮಾಡಲು ಪತ್ರ ಬರೆದಿರುವ ಸಿಐಡಿಗೆ ವಿಧಾನಪರಿಷತ್‌ ಸಚಿವಾಲಯ ಈ ಮರು ಪತ್ರ ಬರೆದಿದೆ ಎಂದು ತಿಳಿದು ಬಂದಿದೆ.

ವಿಧಾನಪರಿಷತ್‌ ಕಾರ್ಯದರ್ಶಿ ಮಹಾಲಕ್ಷ್ಮೀ ಅವರು ಸಿಐಡಿಗೆ ಪತ್ರ ಬರೆದು ಯಾವ ರೀತಿ ಮಹಜರು ಮಾಡಲಾಗುತ್ತದೆ ಎಂಬುದರ ಕುರಿತು ವಿವರಣೆ ನೀಡುವಂತೆ ಸೂಚಿಸಿದ್ದಾರೆ. ಸ್ಥಳ ಮಹಜರು ಯಾವ ರೀತಿ ಇರಲಿದೆ ಎಂಬುದರ ಜತೆಗೆ ಯಾರನ್ನು ಮಹಜರು ಸ್ಥಳಕ್ಕೆ ಕರೆದೊಯ್ಯಲಾಗುತ್ತದೆ ಎಂಬ ಬಗ್ಗೆ ಮಾಹಿತಿ ನೀಡುವಂತೆ ಕೇಳಲಾಗಿದೆ. ಸಭಾಪತಿ ಬಸವರಾಜ ಹೊರಟ್ಟಿ ನಿರ್ದೇಶನ ಮೇರೆಗೆ ಸಿಐಡಿಗೆ ಪತ್ರ ಬರೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಲಕ್ಷ್ಮೀ ಹೆಬ್ಬಾಳ್ಕರ್‌ ಮತ್ತು ಸಿ.ಟಿ.ರವಿ ನಡುವಿನ ಮಾತಿನ ಚಕಮಕಿ ವೇಳೆ ವಿಧಾನಪರಿಷತ್‌ನ ಹಲವು ಸದಸ್ಯರು ಉಪಸ್ಥಿತರಿದ್ದರು. ಈ ಪೈಕಿ ಯಾವ ಸದಸ್ಯರಿಗೆ ಮಹಜರು ವೇಳೆ ಸಾಕ್ಷಿಯಾಗಲು ಸೂಚನೆ ನೀಡಲಾಗುತ್ತದೆ ಎಂಬುದರ ಕುರಿತು ಮಾಹಿತಿ ನೀಡಬೇಕು ಎಂದು ಪತ್ರದಲ್ಲಿ ಉಲ್ಲೇಖ ಮಾಡಲಾಗಿದೆ ಎಂದು ಹೇಳಲಾಗಿದೆ.

ವಿಧಾನಪರಿಷತ್‌ ಸಚಿವಾಲಯದಿಂದ ಕೇಳಲಾದ ಪ್ರಶ್ನೆಗೆ ಸಿಐಡಿಯಿಂದ ಉತ್ತರ ಬಂದ ಬಳಿಕ ಮಹಜರಿಗೆ ಅನುಮತಿ ನೀಡುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ. ಅಲ್ಲಿಯವರೆಗೆ ಯಾವುದೇ ನಿರ್ಣಯ ಕೈಗೊಳ್ಳದಿರಲು ನಿರ್ಧರಿಸಲಾಗಿದೆ. ಸಿಐಡಿಯಿಂದ ಮಹಜರು ಕುರಿತು ವಿವರ ತಲುಪಿದ ಬಳಿಕ ವಿಧಾನಪರಿಷತ್‌ ಸಚಿವಾಲದಿಂದ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ ಎನ್ನಲಾಗಿದೆ.