ಸಿ.ಟಿ.ರವಿ - ಲಕ್ಷ್ಮಿ ಕೇಸ್‌ ಬಗ್ಗೆ ಸಿಐಡಿ ತನಿಖೆ ಶುರು - ಮಹಜರಿಗೆ ಸಮ್ಮತಿ, ವಿಡಿಯೋಗೆ ಕೋರಿಕೆ

| Published : Dec 31 2024, 08:12 AM IST

ct ravi

ಸಾರಾಂಶ

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರ ವಿರುದ್ಧ ವಿಧಾನ ಪರಿಷತ್‌ ಸದಸ್ಯ ಸಿ.ಟಿ.ರವಿ ಆಕ್ಷೇಪಾರ್ಹ ಪದ ಬಳಕೆ ಆರೋಪ ಮತ್ತು ಸಿ.ಟಿ.ರವಿ ಮೇಲೆ ಸಚಿವೆ ಬೆಂಬಲಿಗರ ಹಲ್ಲೆ ಪ್ರಕರಣಗಳ ತನಿಖೆಯನ್ನು ಸಿಐಡಿ ಅಧಿಕಾರಿಗಳು ಇದೀಗ ಆರಂಭಿಸಿದ್ದಾರೆ.

ಬೆಂಗಳೂರು : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರ ವಿರುದ್ಧ ವಿಧಾನ ಪರಿಷತ್‌ ಸದಸ್ಯ ಸಿ.ಟಿ.ರವಿ ಆಕ್ಷೇಪಾರ್ಹ ಪದ ಬಳಕೆ ಆರೋಪ ಮತ್ತು ಸಿ.ಟಿ.ರವಿ ಮೇಲೆ ಸಚಿವೆ ಬೆಂಬಲಿಗರ ಹಲ್ಲೆ ಪ್ರಕರಣಗಳ ತನಿಖೆಯನ್ನು ಸಿಐಡಿ ಅಧಿಕಾರಿಗಳು ಇದೀಗ ಆರಂಭಿಸಿದ್ದಾರೆ. ಈ ಸಂಬಂಧ ಘಟನಾ ಸ್ಥಳಗಳ ಮಹಜರು ನಡೆಸಲು ಅನುಮತಿ ನೀಡುವಂತೆ ವಿಧಾನಮಂಡಲ ಉಭಯ ಸದನಗಳ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ.

ಇದರ ಜತೆಗೆ ವಿಧಾನ ಮಂಡಲ ಅಧಿವೇಶನದ ವಿಡಿಯೋ ಹಾಗೂ ಸಿಸಿಟಿವಿ ದೃಶ್ಯಾವಳಿಗಳನ್ನೂ ನೀಡುವಂತೆ ಕೋರಿದ್ದಾರೆ.

ಆರಂಭದಲ್ಲಿ ಘಟನಾ ಸ್ಥಳಗಳ ಮಹಜರಿಗೆ ಅನುಮತಿ ಪಡೆಯುವ ಬಗ್ಗೆ ಸಿಐಡಿ ಅಧಿಕಾರಿಗಳು ಜಿಜ್ಞಾಸೆಗೆ ಒಳಗಾಗಿದ್ದರು. ಇದೀಗ ಕಾನೂನು ತಜ್ಞರ ಅಭಿಪ್ರಾಯ ಪಡೆದು ತನಿಖೆ ಆರಂಭಿಸಿದ್ದಾರೆ. ಘಟನಾ ಸ್ಥಳಗಳ ಮಹಜರು ನಡೆಸಲು ಅನುಮತಿ ಕೋರಿ ವಿಧಾನ ಮಂಡಲ ಉಭಯ ಸದನಗಳ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ.

ಅಸಲಿ ವಿಡಿಯೋ ನೀಡಲು ಮನವಿ:

ಉಭಯ ಸದನಗಳ ಕಲಾಪಗಳು ವಿಧಾನಸಭಾ ಕಾರ್ಯಾಲಯದ ಮೂಲಕವೇ ನೇರ ಪ್ರಸಾರವಾಗಲಿದೆ. ಎರಡೂ ಸದನಗಳ ಕಲಾಪಗಳ ವಿಡಿಯೋಗಳನ್ನು ಚಂದನ ಹಾಗೂ ಖಾಸಗಿ ಸುದ್ದಿವಾಹಿನಿಗಳಿಗೆ ವಿಧಾನಸಭೆಯ ಕಾರ್ಯಾಲಯದಿಂದ ಹಂಚಿಕೆ ಮಾಡಲಾಗುತ್ತದೆ. ಇದರ ನೇರ ಪ್ರಸಾರದ ಹಕ್ಕುಗಳನ್ನು ವಿಧಾನಸಭಾ ಕಾರ್ಯಾಲಯವೇ ಹೊಂದಿದೆ. ಹೀಗಾಗಿ ಘಟನೆಗೆ ಸಂಬಂಧಿಸಿದ ಅಸಲಿ ವಿಡಿಯೋಗಳನ್ನೂ ನೀಡುವಂತೆ ಪತ್ರದಲ್ಲಿ ಕೋರಲಾಗಿದೆ ಎಂದು ಸಿಐಡಿ ಮೂಲಗಳು ತಿಳಿಸಿವೆ.

ಪ್ರಕರಣದ ಹಿನ್ನೆಲೆ:

ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಡಿ.9ರಿಂದ ಡಿ.19ರವರೆಗೆ ಚಳಿಗಾಲದ ಅಧಿವೇಶನ ನಡೆಯಿತು. ಅಧಿವೇಶನದ ಕೊನೆಯ ದಿನ ಅಂದರೆ ಡಿ.19ರಂದು ವಿಧಾನ ಪರಿಷತ್‌ನಲ್ಲಿ ಪ್ರತಿಭಟನೆ ಮಾಡುವಾಗ ಸಿ.ಟಿ.ರವಿ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದಾರೆಂದು ಆರೋಪಿಸಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಹಿರೇಬಾಗೆವಾಡಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಈ ನಡುವೆ, ವಿಧಾನಸಭೆ ಮೊಗಸಾಲೆಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಬೆಂಬಲಿಗರು ತನ್ನ ಮೇಲೆ ಹಲ್ಲೆ ಮಾಡಿದ್ದಾರೆಂದು ಆರೋಪಿಸಿ ಸಿ.ಟಿ.ರವಿ ಪ್ರತಿ ದೂರು ನೀಡಿದ್ದರು.

ಇದರ ಬೆನ್ನಲ್ಲೇ ಪೊಲೀಸರು ಸಿ.ಟಿ.ರವಿಯನ್ನು ಬಂಧಿಸಿದ್ದರು. ಬಳಿಕ ಸಿ.ಟಿ.ರವಿ ಜಾಮೀನು ಪಡೆದಿದ್ದರು. ಇದು ಕಾಂಗ್ರೆಸ್‌ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ ಆರೋಪ-ಪ್ರತ್ಯಾರೋಪಕ್ಕೆ ಕಾರಣವಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಎರಡೂ ಪ್ರಕರಣಗಳನ್ನು ಸಿಐಡಿ ತನಿಖೆಗೆ ವಹಿಸಿ ಆದೇಶಿತ್ತು.