ಆಳಂದ ಅಕ್ರಮಕ್ಕೆ ಲ್ಯಾಪ್‌ಟಾಪ್‌ ಸಾಕ್ಷ್ಯ

| N/A | Published : Oct 25 2025, 01:00 AM IST / Updated: Oct 25 2025, 06:24 AM IST

Aland Vote

ಸಾರಾಂಶ

ದೇಶಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿರುವ ಆಳಂದ ಕ್ಷೇತ್ರದ ಮತಕಳವು ಯತ್ನ ಪ್ರಕರಣದಲ್ಲಿ ಕ್ಷೇತ್ರದ ಮಾಜಿ ಶಾಸಕ ಮತ್ತು ಬಿಜೆಪಿ ಮುಖಂಡ ಸುಭಾಷ್ ಗುತ್ತೇದಾರ್ ಅವರ ಕುಟುಂಬಕ್ಕೆ ಎರಡು ಲ್ಯಾಪ್‌ಟಾಪ್‌ಗಳು ಕಂಟಕವಾಗಿ ಪರಿಣಮಿಸುವ ಸಾಧ್ಯತೆಯಿದೆ.

ಡಿಲೀಟ್‌ ಆಗಬೇಕಿದ್ದ ಮತದಾರರ ವಿವರ ಲ್ಯಾಪ್‌ಟಾಪ್‌ನಲ್ಲಿ ಪತ್ತೆ  

ಬೆಂಗಳೂರು : ದೇಶಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿರುವ ಆಳಂದ ಕ್ಷೇತ್ರದ ಮತಕಳವು ಯತ್ನ ಪ್ರಕರಣದಲ್ಲಿ ಕ್ಷೇತ್ರದ ಮಾಜಿ ಶಾಸಕ ಮತ್ತು ಬಿಜೆಪಿ ಮುಖಂಡ ಸುಭಾಷ್ ಗುತ್ತೇದಾರ್ ಅವರ ಕುಟುಂಬಕ್ಕೆ ಎರಡು ಲ್ಯಾಪ್‌ಟಾಪ್‌ಗಳು ಕಂಟಕವಾಗಿ ಪರಿಣಮಿಸುವ ಸಾಧ್ಯತೆಯಿದೆ.

ಮತಗಳ್ಳರ ಬೆನ್ನತ್ತಿ ಮಾಜಿ ಶಾಸಕರ ಪರಿವಾರ ಸೇರಿ ಕೆಲವರ ಮನೆಗಳ ಮೇಲೆ ವಿಶೇಷ ತನಿಖಾ ತಂಡ (ಎಸ್‌ಐಟಿ) ಇತ್ತೀಚೆಗೆ ದಾಳಿ ನಡೆಸಿತ್ತು. ಆ ವೇಳೆ ಕಲಬುರಗಿ ನಗರದ ಮೊಹಮ್ಮದ್‌ ಅಕ್ರಂ ಹಾಗೂ ಸುಭಾಷ್ ಗುತ್ತೇದಾರ್ ಅವರ ಪರಿಚಿತನ ಮನೆಯಲ್ಲಿ ಪತ್ತೆಯಾದ ಲ್ಯಾಪ್‌ಟಾಪ್‌ನಲ್ಲಿ ‘ಮತದಾರರ ಪಟ್ಟಿ’ಯ ಮಾಹಿತಿ ಎಸ್‌ಐಟಿಗೆ ಲಭಿಸಿದೆ ಎನ್ನಲಾಗಿದೆ.

ಕಳೆದ ವಿಧಾನಸಭಾ ಚುನಾವಣೆ ವೇಳೆ ಆಳಂದ ಕ್ಷೇತ್ರದಲ್ಲಿ 6,018 ಮತಗಳವು ಯತ್ನ ನಡೆದಿತ್ತು ಎಂಬ ಆರೋಪ ಕೇಳಿಬಂದಿತ್ತು. ಈ ಕುರಿತು ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರೂ ಧ್ವನಿ ಎತ್ತಿದ್ದು, ಇದೀಗ ಎಸ್‌ಐಟಿ ತನಿಖೆ ನಡೆಯುತ್ತಿದೆ. ಈ ವೇಳೆ ಪ್ರತಿ ಮತದಾರರ ಹೆಸರು ಡಿಲೀಟ್‌ ಮಾಡಲು 80 ರು. ನಿಗದಿ ಮಾಡಿದ್ದ ವಿಚಾರ ಬಹಿರಂಗವಾಗಿತ್ತು ಎನ್ನಲಾಗಿದೆ.

ಆಳಂದ ಕ್ಷೇತ್ರ ವ್ಯಾಪ್ತಿಯಲ್ಲಿ ಯಾವ್ಯಾವ ಮತಗಟ್ಟೆಗಳಲ್ಲಿ ಮತ ಡಿಲೀಟ್‌ ಮಾಡಬೇಕೆಂಬ ಪಟ್ಟಿ ತಯಾರಿಸಿ ಕಲಬುರಗಿ ನಗರದಲ್ಲಿ ಕಾಲ್ ಸೆಂಟರ್ ನಡೆಸುತ್ತಿದ್ದ ಮೊಹಮ್ಮದ್ ಅಶ್ಫಕ್‌ಗೆ ಕ್ಷೇತ್ರದ ಪ್ರಮುಖ ನಾಯಕರೊಬ್ಬರ ಆಪ್ತರು ಕಳುಹಿಸಿಕೊಟ್ಟಿದ್ದರು. ಆ ಪಟ್ಟಿಯನ್ನು ಆರೋಪಿ ಅಶ್ಫಕ್‌ ತನ್ನ ಲ್ಯಾಪ್‌ಟಾಪ್‌ನಲ್ಲಿ ಇಟ್ಟಿದ್ದ. ಸದ್ಯ ಪ್ರಕರಣದಲ್ಲಿ ಬಂಧನ ಭೀತಿಯಿಂದ ದುಬೈಗೆ ಪರಾರಿಯಾಗಿರುವ ಅಶ್ಫಕ್‌, ಆ ಲ್ಯಾಪ್‌ಟಾಪ್‌ ಅನ್ನು ತನ್ನ ಆಪ್ತ ಅಕ್ರಂಗೆ ಕೊಟ್ಟು ಹೋಗಿದ್ದ. ಎಸ್‌ಐಟಿ ದಾಳಿ ವೇಳೆ ಮತದಾರರ ಪಟ್ಟಿ ಕಳುಹಿಸಲು ಬಳಸಿದ್ದ ಲ್ಯಾಪ್‌ಟಾಪ್ ಹಾಗೂ ಆ ಪಟ್ಟಿ ಸ್ವೀಕರಿಸಿದ್ದ ಲ್ಯಾಪ್‌ಟಾಪ್‌ಗಳು ಪತ್ತೆಯಾಗಿವೆ ಎಂದು ಮೂಲಗಳು ಹೇಳಿವೆ.

ಲ್ಯಾಪ್‌ಟಾಪ್ ಯಾಕೆ ಮುಖ್ಯ?:

ಮತಗಳವು ಯತ್ನ ಪ್ರಕರಣದ ತನಿಖೆ ತಾಂತ್ರಿಕ ಪುರಾವೆಗಳ ಮೇಲೆಯೇ ಹೆಚ್ಚು ಅವಲಂಬಿತವಾಗಿದೆ. ಪ್ರಕರಣದಲ್ಲಿ ಮತ ರದ್ದತಿಗೆ ಅರ್ಜಿ ಸಲ್ಲಿಸಿದವರ ವಿವರ ಸೇರಿ ತನಿಖೆಗೆ ಅಗತ್ಯವಾದ ಮಾಹಿತಿ ಕೋರಿ ಚುನಾವಣಾ ಆಯೋಗಕ್ಕೆ ಅಧಿಕಾರಿಗಳು ಪತ್ರ ಬರೆದಿದ್ದರು. ಆದರೆ ಚುನಾವಣಾ ಆಯೋಗ ಮಾಹಿತಿ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಅನ್ಯ ಮಾರ್ಗದ ಮೂಲಕ ಮತಕಳವು ಹಿಂದಿನ ಸಂಚು ಭೇದಿಸಲು ಎಸ್‌ಐಟಿ ಅಧಿಕಾರಿಗಳು ಮುಂದಾಗಿದ್ದಾರೆ.

ಲ್ಯಾಪ್‌ಟಾಪ್‌ನಲ್ಲಿ ಕಡತ ಕಳುಹಿಸಿದರೆ ಅಥವಾ ಸ್ವೀಕರಿಸಿದರೆ ಆ ಕಡತಗಳಿಗೆ ಪ್ರತ್ಯೇಕ ಕೋಡ್ ಸೃಷ್ಟಿಯಾಗುತ್ತದೆ. ಈ ಫೈಲ್ ನಂಬರ್ ಮಾಹಿತಿ ಆಧರಿಸಿ ಎಸ್‌ಐಟಿ ತನಿಖೆಗಿಳಿದೆ. ಇದಕ್ಕಾಗಿ ಮತದಾರರ ಪಟ್ಟಿ ಕಳುಹಿಸಿದ ಹಾಗೂ ಸ್ವೀಕರಿಸಿದ ಲ್ಯಾಪ್‌ಟಾಪ್‌ಗಳಿಗೆ ಅಧಿಕಾರಿಗಳು ಶೋಧ ನಡೆಸಿದ್ದರು. ಕೊನೆಗೂ ಈ ಲ್ಯಾಪ್‌ಟಾಪ್‌ಗಳು ಎಸ್‌ಐಟಿ ಕೈ ಸೇರಿವೆ ಎನ್ನಲಾಗಿದೆ.

ಕಚೇರಿಯಲ್ಲಿದ್ದಾಗ ದಾಳಿ:

ಪ್ರಕರಣ ಸಂಬಂಧ ವಿಚಾರಣೆ ಸಲುವಾಗಿ ಕಾಲ್ ಸೆಂಟರ್‌ನಲ್ಲಿ ಡಾಟಾ ಆಪರೇಟರ್‌ಗಳಾಗಿ ಕೆಲಸ ಮಾಡಿದ್ದ ಅಶ್ಫಕ್ ಸಹಚರರಾದ ಅಕ್ರಂ ಸೇರಿ ನಾಲ್ವರನ್ನು ಎಸ್‌ಐಟಿ ಅಧಿಕಾರಿಗಳು ಬೆಂಗಳೂರಿಗೆ ಕರೆಸಿದ್ದರು. ಅಕ್ರಂ ತಂಡ ಬೆಂಗಳೂರು ತಲುಪಿದ ಬಳಿಕ ಅವರ ಮನೆಗಳ ಮೇಲೆ ಎಸ್‌ಐಟಿ ದಾಳಿ ನಡೆಸಿ ಶೋಧಿಸಿತ್ತು. ಆಗಲೇ ಅಕ್ರಂ ಮನೆಯಲ್ಲಿ ಲ್ಯಾಪ್‌ಟಾಪ್‌ಗಳು ಸಿಕ್ಕಿವೆ. ಆತ ಎಸ್‌ಐಟಿ ಕಚೇರಿಯಲ್ಲಿದ್ದ ಕಾರಣ ಲ್ಯಾಪ್‌ಟಾಪ್‌ ಬಚ್ಚಿಡಲು ಸಾಧ್ಯವಾಗಿಲ್ಲ. ಅದೇ ರೀತಿ ಮಾಜಿ ಶಾಸಕರ ಆಪ್ತನ ಮನೆಯಲ್ಲಿದ್ದ ಲ್ಯಾಪ್‌ಟಾಪ್ ಕೂಡ ಎಸ್‌ಐಟಿ ಕೈ ಸೇರಿದೆ ಎಂದು ತಿಳಿದು ಬಂದಿದೆ.

ಕಲಬುರಗಿ ಉತ್ತರದಲ್ಲಿ 30,000 ಮತ ರದ್ದತಿ?

ಕಳೆದ ವಿಧಾನಸಭಾ ಚುನಾವಣೆ ವೇಳೆ ಕಲಬುರಗಿ ಉತ್ತರ ಕ್ಷೇತ್ರದಲ್ಲಿ 30 ಸಾವಿರಕ್ಕೂ ಅಧಿಕ ಮತ ಕಳ್ಳತನವಾಗಿದೆ ಎಂಬ ಮಾತುಗಳು ಕೇಳಿ ಬಂದಿವೆ. ಆಳಂದ ಮಾತ್ರವಲ್ಲದೆ, ಕಲಬುರಗಿಯ ಇತರೆ ಕ್ಷೇತ್ರಗಳಲ್ಲೂ ಮತ ಕಳ್ಳತನ ಆಗಿದೆ. ಕಲಬುರಗಿ ಉತ್ತರ ಕ್ಷೇತ್ರವೊಂದರಲ್ಲೇ ಸುಮಾರು 30 ಸಾವಿರ ಮತಗಳು ರದ್ದುಗೊಂಡಿವೆ. ಹೀಗಾಗಿ ಆ ಚುನಾವಣೆಯಲ್ಲಿ ಅಲ್ಪಸಂಖ್ಯಾತರ ಬಾಹುಳ್ಯವಿರುವ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಗೆಲುವಿನ ಅಂತರ ಕಡಿಮೆ ಇತ್ತು. ಇನ್ನು ಮತಕಳ್ಳತನ ಬಗ್ಗೆ ಉತ್ತರ ಕ್ಷೇತ್ರದ ಕಾಂಗ್ರೆಸ್ ಹುರಿಯಾಳು ಆಗಿದ್ದ ಶಾಸಕಿಗೆ ಆಳಂದ ಕ್ಷೇತ್ರದ ಕಾಂಗ್ರೆಸ್ ಮುಖಂಡರು ಎಚ್ಚರಿಕೆಯನ್ನೂ ನೀಡಿದ್ದರು. ಆದರೆ ಈ ಮಾಹಿತಿಯನ್ನು ಅವರು ಗಂಭೀರವಾಗಿ ಪರಿಗಣಿಸಿರಲಿಲ್ಲ ಎನ್ನಲಾಗಿದೆ.

Read more Articles on