ಸಾರಾಂಶ
ಧರ್ಮಸ್ಥಳ ಗ್ರಾಮದ ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೌಜನ್ಯಾ ಮಾವ ವಿಠಲಗೌಡ ಆಪ್ತ ಪ್ರದೀಪ್ ಅವರನ್ನು ಎಸ್ಐಟಿ ಪೊಲೀಸರು ಬೆಳ್ತಂಗಡಿ ಕೋರ್ಟ್‌ಗೆ ಹಾಜರುಪಡಿಸಿ ತಲೆಬುರುಡೆ ಪತ್ತೆ ಪ್ರಕರಣದಲ್ಲಿ ಸಾಕ್ಷ್ಯವನ್ನಾಗಿ ಪರಿಗಣಿಸಲು ಹೇಳಿಕೆ ಪಡೆಯಲಾಗಿದೆ.
ಮಂಗಳೂರು/ ಬೆಳ್ತಂಗಡಿ : ಧರ್ಮಸ್ಥಳ ಗ್ರಾಮದ ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೌಜನ್ಯಾ ಮಾವ ವಿಠಲಗೌಡ ಆಪ್ತ ಪ್ರದೀಪ್ ಅವರನ್ನು ಎಸ್ಐಟಿ ಪೊಲೀಸರು ಬೆಳ್ತಂಗಡಿ ಕೋರ್ಟ್‌ಗೆ ಹಾಜರುಪಡಿಸಿ ತಲೆಬುರುಡೆ ಪತ್ತೆ ಪ್ರಕರಣದಲ್ಲಿ ಸಾಕ್ಷ್ಯವನ್ನಾಗಿ ಪರಿಗಣಿಸಲು ಹೇಳಿಕೆ ಪಡೆಯಲಾಗಿದೆ.
ಪ್ರದೀಪ್ ಸಾಕ್ಷ್ಯ ದಾಖಲು: ಸೌಜನ್ಯಾ ಮಾವ ವಿಠಲಗೌಡನ ಆಪ್ತ ಪ್ರದೀಪ್‌ರನ್ನು ಸಂಜೆ ಬೆಳ್ತಂಗಡಿ ಕೋರ್ಟ್‌ಗೆ ಎಸ್‌ಐಟಿ ಪೊಲೀಸರು ಹಾಜರುಪಡಿಸಿದ್ದಾರೆ. ಈ ಪ್ರಕರಣದಲ್ಲಿ ಬುರುಡೆ ತಂದುಕೊಟ್ಟವರು ವಿಠಲಗೌಡ ಎಂಬ ಸಂಗತಿ ಸಾಬೀತುಪಡಿಸಲು ಪ್ರದೀಪ್ ಹೇಳಿಕೆ ಅಗತ್ಯವಾಗಿದೆ. ಎಸ್‌ಐಟಿ ತನಿಖೆ ವೇಳೆಯೂ ಪ್ರದೀಪ್‌ನಿಂದ ಪ್ರಮುಖ ಮಾಹಿತಿ ಅಥವಾ ಘಟನೆಗೆ ಸಂಬಂಧಿಸಿದ ಸಾಕ್ಷ್ಯಗಳನ್ನು ಪಡೆಯಲಾಗಿತ್ತು. ಬಿಎನ್ಎಸ್ 183ರ ಅಡಿ ನ್ಯಾಯಾಧೀಶರ ಎದುರು ಪ್ರದೀಪ್ ಹೇಳಿಕೆ ದಾಖಲಿಸಲಾಗಿದೆ. ಮ್ಯಾಜಿಸ್ಟ್ರೇಟ್ ಮುಂದೆ ಸಾಕ್ಷಿ ನೀಡುವ ಹೇಳಿಕೆ ಇದಾಗಿದ್ದು, ಇದರ ಆಧಾರದಲ್ಲಿ ವಿಠಲ ಗೌಡನ ಬಂಧನಕ್ಕೂ ಎಸ್‌ಐಟಿ ವಾರೆಂಟ್ ಪಡೆಯುವ ಅವಕಾಶ ಇದೆ.
ಧರ್ಮಸ್ಥಳ ಗ್ರಾಮದ ಬುರುಡೆ ಕೇಸ್‌ನಲ್ಲಿ ಎಸ್‌ಐಟಿ ಬಂಗ್ಲೆಗುಡ್ಡೆ ರಹಸ್ಯದ ಪತ್ತೆಗೆ ಮುಂದಾಗಿದೆ. ಬಂಗ್ಲೆಗುಡ್ಡೆಯಲ್ಲಿ ಗುರುವಾರ ಸಂಜೆ ಗೌಪ್ಯವಾಗಿ ಪರಿಶೀಲನೆ ನಡೆಸಲಾಗಿದೆ. ಎಸ್‌ಐಟಿ ಎಸ್ಪಿ ಸೈಮನ್ ನೇತೃತ್ವದಲ್ಲಿ ತಂಡ ಬಂಗ್ಲೆಗುಡ್ಡೆಗೆ ತೆರಳಿ ವಿಠಲ ಗೌಡ ಆರೋಪಿಸಿದಂತೆ ಬೇರೆ ತಲೆಬುರುಡೆ, ಅಸ್ಥಿಪಂಜರ ಇದೆಯಾ ಎಂದು ಪರಿಶೀಲನೆ ನಡೆಸಿ ವಾಪಸಾಗಿದೆ.
16ಕ್ಕೆ ಚಿನ್ನಯ್ಯನ
ಜಾಮೀನು ತೀರ್ಪು
ಬುರುಡೆ ಕೇಸ್‌ನಲ್ಲಿ ಆರೋಪಿ ಚಿನ್ನಯ್ಯನ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಬೆಳ್ತಂಗಡಿ ನ್ಯಾಯಾಲಯ ಆದೇಶವನ್ನು ಕಾಯ್ದಿರಿಸಿದ್ದು, ಸೆ.16ರಂದು ಪ್ರಕಟಿಸುವುದಾಗಿ ಹೇಳಿದೆ. ಆರೋಪಿ ಚಿನ್ನಯ್ಯ ಜೈಲು ಸೇರಿದ ಬೆನ್ನಲ್ಲೇ ಆತನ ಪರ ವಕೀಲರು ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಚಿನ್ನಯ್ಯ ಪರ ಜಿಲ್ಲಾ ಕಾನೂನು ಪ್ರಾಧಿಕಾರದ ವಕೀಲರು ಬೆಳ್ತಂಗಡಿಯ ಹೆಚ್ಚುವರಿ ವ್ಯಾವಹಾರಿಕ ಮತ್ತು ಪ್ರಥಮ ದರ್ಜೆ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಎಸ್ಐಟಿ ಪರ ವಕೀಲರು ಜಾಮೀನಿಗೆ ಆಕ್ಷೇಪಣೆ ಸಲ್ಲಿಸಿದ್ದರು. ಆಕ್ಷೇಪಣೆ ಸಲ್ಲಿಕೆ ಬಳಿಕ ಎರಡೂ ಕಡೆಯ ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರು ಸೆ.16ಕ್ಕೆ ಆದೇಶ ಕಾಯ್ದಿರಿಸಿದರು.
ಮೂವರ ವಿಚಾರಣೆ
ಧರ್ಮಸ್ಥಳ ಗ್ರಾಮದ ತಲೆಬುರುಡೆ ಪ್ರಕರಣಕ್ಕೆ ಸಂಬಂಧಿಸಿ ಎಸ್ಐಟಿ ಬೆಳ್ತಂಗಡಿ ಕಚೇರಿಗೆ ಶುಕ್ರವಾರವೂ ಮೂರು ಮಂದಿ ಆಗಮಿಸಿ ವಿಚಾರಣೆ ಎದುರಿಸಿದ್ದಾರೆ. ಸೌಜನ್ಯ ಪರ ಹೋರಾಟಗಾರರಾದ ಗಿರೀಶ್ ಮಟ್ಟಣ್ಣವರ್, ಪ್ರದೀಪ್ ಮತ್ತು ಜಯಂತ್ ಬೆಳಗ್ಗೆ ಎಸ್ಐಟಿ ಕಚೇರಿಗೆ ಆಗಮಿಸಿ ಸಂಜೆ ವರೆಗೆ ವಿಚಾರಣೆ ಎದುರಿಸಿದರು.
ಪ್ರದೀಪ್‌ಗೆ ಐದನೇ ದಿನ, ಗಿರೀಶ್ ಮಟ್ಟಣ್ಣವರ್ ಎಂಟನೇ ದಿನ ಹಾಗೂ ಜಯಂತ್‌ಗೆ ಒಂಭತ್ತನೇ ದಿನದ ವಿಚಾರಣೆಯಾಗಿದೆ.