ರಾಜ್ಯದಲ್ಲಿ ಒಳಮೀಸಲಾತಿ ಜಾರಿಯಾಗಲಿ

| Published : Aug 14 2024, 01:05 AM IST

ಸಾರಾಂಶ

ಎಸ್ಸಿ ಎಸ್ಟಿ ಒಳಮೀಸಲಾತಿ ಜನಸಂಖ್ಯೆ ಆಧಾರದ ಮೇಲೆ ಅವರಿಗೆ ಆರ್ಥಿಕ, ಶೈಕ್ಷಣಿಕ,ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಸುಪ್ರೀ ಕೋರ್ಟ್‌ ತೀರ್ಪು ನೀಡಿದೆ. ಒಳ ಮೀಸಲಾತಿ ಜಾರಿಯಿಂದ ಬೇರೆ ಯಾವ ವರ್ಗದವರಿಗೂ ಅನ್ಯಾಯವಾಗುವುದಿಲ್ಲ.

ಕನ್ನಡಪ್ರಭ ವಾರ್ತೆ ಕೋಲಾರ

ಸುಪ್ರೀಂಕೋರ್ಟ್ ತೀರ್ಪಿನಂತೆ ರಾಜ್ಯದಲ್ಲಿಯೂ ಒಳ ಮೀಸಲಾತಿಯನ್ನು ಶೀಘ್ರ ಜಾರಿಗೊಳಿಸಲು ಕಾಂಗ್ರೆಸ್ ವರಿಷ್ಠರಿಗೆ ರಾಜ್ಯ ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಮನವಿ ಮಾಡಿದರು.

ಈ ಸಂಬಂಧ ದೆಹಲಿಯಲ್ಲಿ ಅವರನ್ನು ಭೇಟಿ ಮಾಡಿದ ಅವರು, ದೇಶದಲ್ಲಿ ನಡೆದ ೩೦ ವರ್ಷಗಳ ಒಳ ಮೀಸಲಾತಿ ಹೋರಾಟಕ್ಕೆ ಸರ್ವೋಚ್ಚ ನ್ಯಾಯಾಲಯ ಮಹತ್ವದ ತೀರ್ಪು ನೀಡಿದ್ದು ಎಸ್ಸಿ ಎಸ್ಟಿ ಒಳಮೀಸಲಾತಿ ಜನಸಂಖ್ಯೆ ಆಧಾರದ ಮೇಲೆ ಅವರಿಗೆ ಆರ್ಥಿಕ, ಶೈಕ್ಷಣಿಕ,ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹೇಳಿದರು.ಪಕ್ಷದ ವರಿಷ್ಠರಿಗೆ ಮನವಿ

ಸಮಾನತೆ ಕಾಣಬೇಕಾದರೆ ಒಳ ಮೀಸಲಾತಿ ಅನಿವಾರ್ಯವಾಗಿ ಜಾರಿಯಾಗಬೇಕು ಎಂದು ಕಾಂಗ್ರೆಸ್ ಪಕ್ಷದ ವರಿಷ್ಠರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಕೆಸಿ ವೇಣುಗೋಪಾಲ, ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಅವರಲ್ಲಿ ಮನವಿ ಮಾಡಿರುವುದಾಗಿ ತಿಳಿಸಿದರು.

ಒಳ ಮೀಸಲಾತಿ ಜಾರಿಯಿಂದ ಬೇರೆ ಯಾವ ವರ್ಗದವರಿಗೂ ಅನ್ಯಾಯವಾಗುವುದಿಲ್ಲ. ನಮ್ಮ ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಉಪ ಮುಖ್ಯಮಂತ್ರಿಗಳು ಶೀಘ್ರದಲ್ಲಿ ಜಾರಿಗೊಳಿಸುವ ಆಶ್ವಾಸನೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

ಕೇಂದ್ರ ಸಚಿವ ಸೋಮಣ್ಣ ಜತೆ ಚರ್ಚೆ

ತಮ್ಮ ಅವಧಿಯಲ್ಲಿ ರಾಜ್ಯಕ್ಕೆ ಮಂಜೂರು ಮಾಡಿದ್ದ ರೈಲ್ವೆ ಕೋಚ್ ಫ್ಯಾಕ್ಟರಿ ಸೇರಿದಂತೆ ವಿವಿಧ ರೈಲು ಮಾರ್ಗಗಳಿಗೆ ಸಂಬಂಧಿಸಿದ ಯೋಜನೆಗಳನ್ನು ಪೂರ್ಣಗೊಳಿಸುವಂತೆ ಹಾಲಿ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ ಮಾಜಿ ರೈಲ್ವೆ ಸಚಿವ ಹಾಗೂ ಹಾಗೂ ರಾಜ್ಯ ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಮನವಿ ಮಾಡಿದರು. ದೆಹಲಿಯಲ್ಲಿ ಸಚಿವ ಸೋಮಣ್ಣ ಅವರನ್ನು ಭೇಟಿ ಮಾಡಿದ ಕೆ.ಎಚ್.ಮುನಿಯಪ್ಪ, ದಕ್ಷಿಣ ಭಾರತದಲ್ಲಿಯೇ ಎರಡನೇ ಅತಿ ದೊಡ್ಡ ರೈಲ್ವೆ ಕೋಚ್ ಪ್ಯಾಕ್ಟರಿ ಶ್ರೀನಿವಾಸಪುರದಲ್ಲಿ ಕಾರ್ಯಾರಂಭ ಮಾಡಬೇಕಾಗಿತ್ತು. ಅದನ್ನು ಶೀಘ್ರ ಪೂರ್ಣಗೊಳಿಸಲು ರೈಲ್ವೆ ಸಚಿವ ಸೋಮಣ್ಣ ಅವರಿಗೆ ಒತ್ತಾಯಿಸಿದರು.