ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರ ೨೦೨೩ರ ವಿಧಾನಸಭೆ ಚುನಾವಣೆಯಲ್ಲಿ ಮಾಲೂರು ಕ್ಷೇತ್ರದ ಫಲಿತಾಂಶಕ್ಕೆ ಸಂಬಂಧಿಸಿದಂತೆ ತಕರಾರು ಅರ್ಜಿ ವಿಚಾರವಾಗಿ ಹೈಕೋರ್ಟ್ ದಾಖಲೆ ಕೇಳಿದ್ದರಿಂದ ಜಿಲ್ಲಾಡಳಿತವು ಮಂಗಳವಾರ ಇವಿಎಂ ಉಗ್ರಾಣದ ಬಾಗಿಲು ತೆರೆದು ಪರಿಶೀಲನೆ ನಡೆಸಿತಾದರೂ ನಿರ್ದಿಷ್ಟ ದಾಖಲೆಗಳು ಲಭ್ಯವಾಗಲಿಲ್ಲ. ನ್ಯಾಯಾಲಯದ ಸೂಚನೆಯಂತೆ ಚುನಾವಣಾ ಆಯೋಗದ ನಿರ್ದೇಶನ ಪಾಲಿಸಿ ಜಿಲ್ಲಾಧಿಕಾರಿ ಕಚೇರಿಯ ಸಂಕೀರ್ಣದಲ್ಲಿರುವ ಇವಿಎಂ ಉಗ್ರಾಣದ ಬಾಗಿಲು ತೆರೆಯಲು ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನುಮತಿ ನೀಡಿದ್ದರು. ಬಾಗಿಲು ತೆರೆಯುವ ಮುನ್ನ ಜಿಲ್ಲಾಧಿಕಾರಿ ಸಭೆ ನಡೆಸಿ ನಿಯಮಗಳ ಬಗ್ಗೆ ಮಾಹಿತಿ ನೀಡಿದರು. ಮುಖಂಡರ ಸಮ್ಮುಖದಲ್ಲಿ ಪರಿಶೀಲನೆ
ಜಿಲ್ಲಾಧಿಕಾರಿ ಅಕ್ರಂ ಪಾಷ, ಎಸ್ಪಿ ನಿಖಿಲ್, ಎಡಿಸಿ ಮಂಗಳ, ಎಸಿ ಡಾ.ಮೈತ್ರಿ ಅವರೊಂದಿಗೆ ರಾಜಕೀಯ ಪಕ್ಷಗಳ ಸಮ್ಮುಖದಲ್ಲಿ ಮಾಲೂರು ಕ್ಷೇತ್ರಕ್ಕೆ ಸಂಬಂಧಿಸಿದ ಭದ್ರತಾ ಕೊಠಡಿ ತೆರೆದು ಮತ ಎಣಿಕೆ ಸಂದರ್ಭದಲ್ಲಿ ಸಂಗ್ರಹಿಸಿಟ್ಟರುವ ದಾಖಲೆಗಳನ್ನು ಪರಿಶೀಲಿಸಿದರು. ಆದರೆ, ಸುಮಾರು ಒಂದೊವರೆ ಗಂಟೆಗೂ ಅಧಿಕ ಕಾಲ ಪರಿಶೀಲನೆ ನಡೆಸಿದರೂ ಅಗತ್ಯ ದಾಖಲೆ ಸಿಗಲೇ ಇಲ್ಲ.ಹಾರ್ಡ್‌ಡಿಸ್ಕ್, ಸಿಸಿ ಟಿವಿ ದೃಶ್ಯಾವಳಿ ಇಲ್ಲಜಿಲ್ಲಾಧಿಕಾರಿ ಅಕ್ರಂ ಪಾಷ ಮಾತನಾಡಿ, ನ್ಯಾಯಾಲಯ ಕೇಳಿದ ದಾಖಲೆಗಳು ಭದ್ರತಾ ಕೊಠಡಿಯಲ್ಲಿ ಲಭ್ಯವಾಗಿಲ್ಲ. ಇವಿಎಂ ಹಾಗೂ ಇತರೆ ದಾಖಲೆಗಳಿವೆ. ಮಾಲೂರು ಖಜಾನೆಯಲ್ಲಿ ಇರಬಹುದು. ಹೀಗಾಗಿ, ಖಜಾನೆಯಲ್ಲಿ ಹುಡುಕಿ ದಾಖಲೆ ಲಭಿಸಿದರೆ ನ್ಯಾಯಾಲಯಕ್ಕೆ ಒಪ್ಪಿಸುತ್ತೇವೆ. ಮತ ಎಣಿಕೆಯ ಸಿಸಿಟಿವಿ ದೃಶ್ಯಾವಳಿಗಳನ್ನು ನ್ಯಾಯಾಲಯ ಕೇಳಿದೆ. ರೌಂಡ್ ವೈಸ್ ಮತ ಎಣಿಕೆ ಮಾಹಿತಿ ನಮ್ಮಲ್ಲಿದೆ. ಹಾರ್ಡ್ಡಿಸ್ಕ್ ಹಾಗೂ ಸಿ.ಸಿ.ಟಿ.ವಿ ದೃಶ್ಯಾವಳಿ ಇಲ್ಲಿಲ್ಲ. ಇದು ಮಾಲೂರಿನ ಖಜಾನೆಯಲ್ಲಿದೆಯೇ ಎಂಬುದನ್ನು ಪರಿಶೀಲಿಸಲು ತಹಸೀಲ್ದಾರ್‌ಗೆ ಸೂಚನೆ ನೀಡಲಾಗುವುದು ಎಂದು ಹೇಳಿದರು.
ಏನೇನು ಮಾಹಿತಿ ಲಭ್ಯವಿದೆಯೋ ಅದನ್ನು ನ್ಯಾಯಾಲಯ ಮುಂದೆ ಇಡುತ್ತೇವೆ. ಏನೇನು ಲಭ್ಯವಾಗಿಲ್ಲವೋ ಆ ಬಗ್ಗೆಯೂ ಮಾಹಿತಿ ನೀಡುತ್ತೇವೆ. ಚುನಾವಣಾ ಮುಗಿದ ಬಳಿಕದ ಮಾಹಿತಿ ಎಲ್ಲಾ ಉಗ್ರಾಣದಲ್ಲಿ ಇದೆ. ವಿವಾದಕ್ಕೆ ಸಂಬಂಧಿಸಿದ ಅಂಶಗಳು ಮಾಲೂರಿನ ಖಜಾನೆಯಲ್ಲಿ ಇರಬಹುದು. ಹಿಂದೆಯೇ ಈ ಮಾಹಿತಿ ನೀಡಬೇಕಿತ್ತು ಎಂದರು.ಸ್ಥಳದಲ್ಲಿ ಬಿಜೆಪಿ ಅಭ್ಯರ್ಥಿ ಕೆ.ಎಸ್.ಮಂಜುನಾಥ್ ಗೌಡ, ಪಕ್ಷೇತರ ಅಭ್ಯರ್ಥಿ ಹೂಡಿ ವಿಜಯಕುಮಾರ್, ಕೆಆರ್‌ಎಸ್ ಅಭ್ಯರ್ಥಿ ಮಹೇಶ್ ಸೇರಿದಂತೆ ಮಾಲೂರು ಕ್ಷೇತ್ರದಿಂದ ಸ್ಪರ್ಧಿಸಿದ್ದ ಅಭ್ಯರ್ಥಿಗಳು, ಬಿಜೆಪಿ ಜಿಲ್ಲಾ ಅಧ್ಯಕ್ಷ ಡಾ.ವೇಣುಗೋಪಾಲ್, ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಲಕ್ಷ್ಮಿನಾರಾಯಣ, ಸಿಪಿಎಂ ಮುಖಂಡ ಗಾಂಧಿನಗರ ನಾರಾಯಣಸ್ವಾಮಿ, ಜೆಡಿಎಸ್, ಬಿಎಸ್‌ಪಿ, ಆಮ್ ಆದ್ಮಿ ಪಾರ್ಟಿ ಮುಖಂಡರು ಇದ್ದರು. ಕಾರ್ಯಕರ್ತರಿಂದ ಜಯಕಾರಇವಿಎಂ ಉಗ್ರಾಣದಲ್ಲಿ ದಾಖಲೆಗಳನ್ನು ಹುಡುಕಿ ವಾಪಸ್ ಬರುವಾಗ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರು ಪರಸ್ಪರ ತಮ್ಮ ನಾಯಕರಿಗೆ ಜೈಕಾರ ಕೂಗಿದರು. ಮೊದಲಿಗೆ ಬಿಜೆಪಿ ಮುಖಂಡ ಕೆ.ಎಸ್.ಮಂಜುನಾಥ್‌ಗೌಡ ಅವರಿಗೆ ಕಾರ್ಯಕರ್ತರು ಜೈಕಾರ ಹಾಕಿದರು. ಇದನ್ನು ನೋಡಿದ ಕಾಂಗ್ರೆಸ್ ಕಾರ್ಯಕರ್ತರು ಶಾಸಕ ಕೆ.ವೈ.ನಂಜೇಗೌಡ ಅವರಿಗೆ ಜೈಕಾರ ಹಾಕಿ ಕೂಗಿದರು. ಏಜೆಂಟರ ಸಹಿಗಳೇ ಇಲ್ಲ
ಮಾಜಿ ಶಾಸಕ ಕೆ.ಎಸ್.ಮಂಜುನಾಥ್‌ಗೌಡ ಮಾತನಾಡಿ, ಸಿಸಿಟಿವಿ ದೃಶ್ಯಾವಳಿ, ೧೭ ಸಿ ಫಾರಂಗಳನ್ನು ನೀಡುವಂತೆ ನ್ಯಾಯಾಲಯವು ಆದೇಶ ಮಾಡಿತ್ತು, ಆದರೂ ೧ ವರ್ಷದಿಂದ ಆಟ ಆಡಿಸುತ್ತಿದ್ದಾರೆ. ೨೫೧ ಸಿ ಫಾರಂಗಳ ಪೈಕಿ ೧೨೦ ಫಾರಂಗಳಲ್ಲಿ ನಮ್ಮ ಏಜೆಂಟರ ಸಹಿಗಳೇ ಇಲ್ಲ. ಸಿಸಿಟಿವಿ ದೃಶ್ಯಾವಳಿ ದೊರೆತರೆ ನಮ್ಮ ಏಜೆಂಟರು ಇದ್ದರೋ ಅಥವಾ ಇಲ್ಲವೋ ಎನ್ನುವುದು ತಿಳಿಯುತ್ತದೆ ಎಂದರು.ಮಾಲೂರು ಕ್ಷೇತ್ರದ ಪರಾಜಿತ ಅಭ್ಯರ್ಥಿ ಹೂಡಿ ವಿಜಯ್‌ಕುಮಾರ್ ಮಾತನಾಡಿ, ಮರು ಮತ ಎಣಿಕೆ ವಿಚಾರವಾಗಿ ಒಬ್ಬರು ಈಗಾಗಲೇ ನ್ಯಾಯಾಲಯದಲ್ಲಿ ತಕರಾರು ಅರ್ಜಿ ಸಲ್ಲಿಸಿದ್ದಾರೆ. ಹೀಗಾಗಿ ನಾವೂ ಸಹ ಬಂದಿದ್ದೇವೆ. ಮರು ಮತ ಎಣಿಕೆ ಆದರೆ ಎಲ್ಲ ಗೊಂದಲಕ್ಕೂ ತೆರೆ ಬೀಳುತ್ತದೆ ಎಂದರು.ಮಾಲೂರು ಖಜಾನೆ ಪರಿಶೀಲನೆಕಾಂಗ್ರೆಸ್ ಸಮಿತಿ ಜಿಲ್ಲಾಧ್ಯಕ್ಷ ಸಿ.ಲಕ್ಷ್ಮೀನಾರಾಯಣ ಮಾತನಾಡಿ, ಜಿಲ್ಲಾ ಕೇಂದ್ರದಲ್ಲಿನ ಹುಡುಕಾಟ ಮುಗಿದಿದೆ. ಮಾಲೂರಿನ ಖಜಾನೆಯಲ್ಲಿ ಇರಬಹುದು. ಚುನಾವಣೆ ಆಯೋಗದ ನಿಯಮದಂತೆಯೇ ಫಲಿತಾಂಶ ಪ್ರಕ್ರಿಯೆ ನಡೆದಿದೆ. ಈಗಾಗಲೇ ಶಾಸಕರಾಗಿ ಆಯ್ಕೆಯಾಗಿರುವ ಕೆ.ವೈ.ನಂಜೇಗೌಡರಿಗೆ ಇದರಿಂದ ಯಾವುದೇ ತೊಂದರೆಯಾಗುವುದಿಲ್ಲ ಎಂದರು.