ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಕೇಂದ್ರ ಸರ್ಕಾರಿ ಸ್ವಾಮ್ಯದ ಎಚ್ಎಂಟಿ ಸಂಸ್ಥೆಯು ರಿಯಲ್ ಎಸ್ಟೇಟ್‌ನಂತೆ ವರ್ತಿಸುತ್ತಿದ್ದು, ಹಲವು ಸಂಸ್ಥೆಗಳಿಗೆ ಅಕ್ರಮವಾಗಿ ಮಾರಾಟ ಮಾಡಿರುವ ಅರಣ್ಯ ಭೂಮಿಯನ್ನು ಕಾನೂನಾತ್ಮಕವಾಗಿ ಹೋರಾಟ ನಡೆಸಿ ವಾಪಸ್ ಪಡೆದುಕೊಳ್ಳಲಾಗುವುದು ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.ಮಂಗಳವಾರ ವಿಕಾಸಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕುಮಾರಸ್ವಾಮಿ ಆರೋಪಕ್ಕೆ ಪ್ರತ್ಯುತ್ತರ ನೀಡಿದ ಅವರು, 1997ರಿಂದ 2011ರವರೆಗೆ ಎಚ್ಎಂಟಿ ಸಂಸ್ಥೆ ತನ್ನ ವಶದಲ್ಲಿದ್ದ ಅರಣ್ಯ ಭೂಮಿಯನ್ನು ಅಕ್ರಮವಾಗಿ ಯು.ಎಸ್. ಸ್ಟೀಲ್ ಕಂಪನಿ, ಸಿಲ್ವರ್ ಲೈನ್ ಎಸ್ಟೇಟ್ಸ್, ಎಂ.ಎಂ.ಆರ್. ಕನ್‌ಸ್ಟ್ರಕ್ಷನ್ಸ್ ಸೇರಿದಂತೆ ಹಲವು ಖಾಸಗಿ ಮತ್ತು ಸರ್ಕಾರಿ ಸಂಸ್ಥೆಗಳಿಗೆ 165 ಎಕರೆ ಭೂಮಿಯನ್ನು 313 ಕೋಟಿ ರು.ಗಿಂತ ಹೆಚ್ಚು ಹಣಕ್ಕೆ ಮಾರಾಟ ಮಾಡಿದೆ ಎಂದು ವಿವರಿಸಿದರು.
ಭೂಮಿಯನ್ನು 1963ರಲ್ಲಿ ಎಚ್ಎಂಟಿಗೆ ದಾನ ನೀಡಲಾಗಿದೆ ಎಂದು ತಿಳಿಸಿದೆ. ಈಗ ಕುಮಾರಸ್ವಾಮಿ ಭೂಮಿಯನ್ನು ಎಚ್ಎಂಟಿ ಸಂಸ್ಥೆ ಖರೀದಿಸಿರುವುದಾಗಿ ಹೇಳುತ್ತಿದ್ದಾರೆ. ಅರಣ್ಯ ಭೂಮಿಯನ್ನು ಅರಣ್ಯೇತರ ಉದ್ದೇಶಕ್ಕೆ ಡಿನೋಟಿಫೈ ಮಾಡದೆ ಮಾರಾಟ ಮಾಡಲು ಅಥವಾ ದಾನ ಮಾಡಲು ಕಾನೂನಿನಲ್ಲಿ ಅವಕಾಶವೇ ಇಲ್ಲ. ಕುಮಾರಸ್ವಾಮಿ ಅವರು ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ತೀಕ್ಷ್ಣವಾಗಿ ಹೇಳಿದರು.ಎಚ್‌ಎಂಟಿ ಜಾಗವನ್ನು ಮರುಕಳುಹಿಸಲು ಸಾಧ್ಯವೇ ಇಲ್ಲ ಎಂದಿದ್ದಾರೆ. ಜಮೀನು ಪಡೆದು ಯಾರಿಗೆ ಮಾರುತ್ತೀರಿ ಎಂದಿದ್ದಾರೆ. ಅರಣ್ಯ ಭೂಮಿ ಮಾರಾಟ ಮಾಡಿರುವುದು ಈಗ ಅವರ ಇಲಾಖಾ ವ್ಯಾಪ್ತಿಯಲ್ಲಿರುವ ಎಚ್ಎಂಟಿಯೇ ಹೊರತು ಅರಣ್ಯ ಇಲಾಖೆಯಲ್ಲ. ಸುಪ್ರೀಂಕೋರ್ಟ್‌ನ ಆದೇಶ ಏನಿದೆ ಎಂಬುದನ್ನು ತಿಳಿದುಕೊಳ್ಳಬೇಕು. ಒಂದು ವೇಳೆ ಜಾಗವು ಬೇಕಾದರೆ ಲೋಕಸಭೆಯಲ್ಲಿ ಕಾಯ್ದೆಗೆ ತಿದ್ದುಪಡಿ ತಂದುಕೊಳ್ಳಲಿ. ಕೇಂದ್ರದಲ್ಲಿ ಅವರ ಮಿತ್ರ ಪಕ್ಷದ ಸರ್ಕಾರವೇ ಇದ್ದು, ಅವರೇ ಸಚಿವರೂ ಆಗಿದ್ದಾರೆ ಎಂದು ಟಾಂಗ್ ಕೊಟ್ಟರು.
ಇನ್ನು, ತಮ್ಮ ಮತ್ತು ಕುಮಾರಸ್ವಾಮಿ ನಡುವೆ ಉತ್ತಮ ಸೌಹಾರ್ದ ಬಾಂಧವ್ಯವಿದ್ದು, ದ್ವೇಷದ ರಾಜಕೀಯ ಮಾಡುತ್ತಿಲ್ಲ. ಯಾವುದೇ ಪೂರ್ವಾಗ್ರಹ ಪೀಡಿತನಾಗಿ ಎಚ್ಎಂಟಿ ಭೂಮಿ ವಿಚಾರ ಪ್ರಸ್ತಾಪಿಸಿಲ್ಲ. ಬದಲಾಗಿ ತಮಗೆ ಬಂದ ದೂರಿನ ಮೇಲೆ ಸಚಿವನಾಗಿ ಕ್ರಮ ವಹಿಸಿದ್ದೇನೆ ಎಂದು ಸಚಿವ ಖಂಡ್ರೆ ಸ್ಪಷ್ಟಪಡಿಸಿದರು.ಎಚ್‌ಎಂಟಿ ಸಂಸ್ಥೆಯು ಅಕ್ರಮವಾಗಿ ಮಾರಾಟ ಮಾಡಿರುವ ಭೂಮಿ ಸೇರಿದಂತೆ ಅರಣ್ಯ ಇಲಾಖೆಗೆ ಸೇರಿದ ಎಲ್ಲಾ ಜಮೀನನ್ನು ವಶಕ್ಕೆ ಪಡೆದುಕೊಳ್ಳಲು ಕಾನೂನೂ ಹೋರಾಟ ನಡೆಸಲಾಗುವುದು. ಅರಣ್ಯ ಭೂಮಿಯನ್ನು ಮಾರಾಟ, ದಾನ ಮಾಡಲು ಯಾರಿಗೂ ಅವಕಾಶವಿಲ್ಲ. ಎಚ್ಎಂಟಿ. ವಶದಲ್ಲಿರುವ ಅರಣ್ಯ ಭೂಮಿ ಮರು ವಶಕ್ಕೆ ಪಡೆದ ಬಳಿಕ ಅಲ್ಲಿ ವೃಕ್ಷೋದ್ಯಾನ ನಿರ್ಮಿಸಲಾಗುವುದು ಎಂದರು.