ಸಾರಾಂಶ
ಕೆ.ಎಂ.ದೊಡ್ಡಿ : ಮಂಡ್ಯ ಜಿಲ್ಲೆಯ ಜನರನ್ನು ಛತ್ರಿಗಳು ಎಂದು ಬಿರುದುಕೊಟ್ಟ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ರಾಜ್ಯದ ಮುಖ್ಯಮಂತ್ರಿ ಮಾಡಲು ಮಂಡ್ಯ ಜಿಲ್ಲೆಯ ಇಬ್ಬರು ಶಾಸಕರು ಹೊರಟಿದ್ದಾರೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.
ದೇವೇಗೌಡನದೊಡ್ಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲು ಛತ್ರಿಗಳು ಎಂಬ ಅರ್ಥ ತಿಳಿದುಕೊಳ್ಳಬೇಕು. ನಂತರ ಡಿಕೆಶಿ ಛತ್ರಿಗೆ ಬೇರೆ ಅರ್ಥ ಕೊಟ್ಟರು. ಇಂತವರನ್ನು ಮುಖ್ಯಮಂತ್ರಿ ಮಾಡಲು ಜಿಲ್ಲೆಯ ಶಾಸಕರು ಓಡಾಡುತ್ತಿದ್ದಾರೆ. ಮದ್ದೂರು ಕ್ಷೇತ್ರದ ಶಾಸಕರ ನಡವಳಿಕೆ ಸರಿ ಇಲ್ಲ. ತಾಲೂಕಿನಲ್ಲಿ ಪೊಲೀಸ್ ಠಾಣೆ ಇವರಪ್ಪನ ಮನೆನಾ ಎಂದು ಕಿಡಿಕಾರಿದರು.
ಸಚಿವ ಚಲುವರಾಯಸ್ವಾಮಿ ಅವರಿಗೆ ಏಕೆ ಆತಂಕ
ಕುಮಾರಣ್ಣನವರು ಸಿಎಂ ಆಗುವ ಬಗ್ಗೆ ಸಚಿವ ಚಲುವರಾಯಸ್ವಾಮಿ ಅವರಿಗೆ ಏಕೆ ಆತಂಕ, ಚಿಂತೆ ಎಂಬುದು ಗೊತ್ತಿಲ್ಲ. ಚುನಾವಣೆಗೆ ಇನ್ನೂ ಎರಡೂವರೆ ವರ್ಷವಿದೆ. ರಾಜ್ಯದಲ್ಲಿ ಮುಂದಿನ ಚುನಾವಣೆ ಯಾವ ನಾಯಕತ್ವದಲ್ಲಿ ನಡೆಯಬೇಕು ಅಂತ ತೀರ್ಮಾನ ಮಾಡೋದು ಎನ್‌ಡಿಎ ನಾಯಕರು ಎಂದರು.
ಎನ್ ಡಿಎಗೆ ಕುಮಾರಣ್ಣ ಅರ್ಜಿ ಹಾಕೊಂಡು ಹೋಗಿಲ್ಲ
ಎನ್ ಡಿಎಗೆ ಕುಮಾರಣ್ಣ ಅರ್ಜಿ ಹಾಕೊಂಡು ಹೋಗಿಲ್ಲ. ಎಚ್ ಡಿಕೆಯವರಲ್ಲಿದ್ದ ಬಂಡವಾಳ, ಶಕ್ತಿ ನೋಡಿ ರೆಡ್ ಕಾರ್ಪೆಟ್ ಹಾಕಿ ಮಿತ್ರ ಪಕ್ಷ ಬಿಜೆಪಿಯವರು ಎನ್ ಡಿಎಗೆ ಬರ ಮಾಡಿಕೊಂಡಿದ್ದಾರೆ. ಇದರಿಂದ ಲೋಕಸಭಾ ಚುನಾವಣೆಯಲ್ಲಿ ಹಳೇ ಮೈಸೂರು ಭಾಗದಲ್ಲಿ 11 ಕ್ಷೇತ್ರಗಳಲ್ಲಿ ಎನ್‌ಡಿಎ ಅಭ್ಯರ್ಥಿಗಳು ಗೆಲ್ಲುಲು ಕಾರಣವಾಗಿದೆ ಎಂದು ತಿಳಿಸಿದರು.
ಚುನಾವಣೆಯಲ್ಲಿ ಕುಮಾರಸ್ವಾಮಿ ಅವರಪ್ಪನಾಣೆಗೂ ಗೆಲ್ಲಲ್ಲ ಅಂತಾ ಕಾಂಗ್ರೆಸ್ ನವರು ಭಾಷಣ ಬಿಗಿದಿದ್ರು. ಆದರೆ, ಮಂಡ್ಯ ಜನರ ಆಶೀರ್ವಾದದಿಂದ ದಾಖಲೆ ಗೆಲುವು ಸಿಕ್ಕಿತ್ತು. ಕುಮಾರಣ್ಣನ ಶಕ್ತಿ ನೋಡಿಯೇ ಜನ ಗೆಲ್ಲಿಸಿರೋದು. ಕುಮಾರಣ್ಣ ಚುನಾವಣೆಯಲ್ಲಿ ಗೆದ್ದಾಗ ತಲೆ ಎತ್ತಿ ಮೆರೆಯಲ್ಲ. ಸೋತಾಗ ಕೈ ಕಟ್ಟಿ ಮನೆಯಲ್ಲಿ ಕೂರಲ್ಲ. ಅವರು ಸ್ವಾಭಿಮಾನದಿಂದ ಬದುಕಿದ್ದಾರೆ ಎಂದು ಸಚಿವ ಚಲುವರಾಯಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
;Resize=(690,390))

;Resize=(128,128))
;Resize=(128,128))