ಸಾರಾಂಶ
ಬೆಂಗಳೂರಿನ ಅಭಿವೃದ್ಧಿಗೆ ಬಿಜೆಪಿಯಿಂದ ಸಹಕಾರ ಸಿಗುತ್ತಿಲ್ಲ. ಪ್ರತಿ ವಿಚಾರದಲ್ಲೂ ತಡೆಯಾಜ್ಞೆ, ಆಕ್ಷೇಪಣೆ ತರುತ್ತಿದ್ದಾರೆ. ಅದಕ್ಕಾಗಿಯೇ ಒಂದು ತಂಡವಿದ್ದು, ಬಿಜೆಪಿಗೆ ಅಭಿವೃದ್ಧಿಗಿಂತ ರಾಜಕೀಯವೇ ಹೆಚ್ಚಾಗಿದೆ ಎಂದು ಡಿ.ಕೆ. ಶಿವಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು : ಬೆಂಗಳೂರಿನ ಅಭಿವೃದ್ಧಿಗೆ ಬಿಜೆಪಿಯಿಂದ ಸಹಕಾರ ಸಿಗುತ್ತಿಲ್ಲ. ಪ್ರತಿ ವಿಚಾರದಲ್ಲೂ ತಡೆಯಾಜ್ಞೆ, ಆಕ್ಷೇಪಣೆ ತರುತ್ತಿದ್ದಾರೆ. ಅದಕ್ಕಾಗಿಯೇ ಒಂದು ತಂಡವಿದ್ದು, ಬಿಜೆಪಿ ಅವರಿಗೆ ಅಭಿವೃದ್ಧಿಗಿಂತ ರಾಜಕೀಯವೇ ಹೆಚ್ಚಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ.
ಯಶವಂತಪುರದ ಹೇರೋಹಳ್ಳಿಯ ಭರತ್ ನಗರದ ಗಾಂಧಿ ಉದ್ಯಾನವನದಲ್ಲಿ ಶನಿವಾರ ‘ಬೆಂಗಳೂರು ನಡಿಗೆ’ ಅಭಿಯಾನದ ನಡೆಸಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ಬಳಿಕ ಅವರು ಮಾತನಾಡಿದರು.
ಕಸದ ಸಮಸ್ಯೆ ಪರಿಹಾರ ಮಾಡಬೇಕಿದ್ದು, ಕಸದ ಟೆಂಡರ್ ಪ್ರಕ್ರಿಯೆಗೆ ಕೆಲವರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ತಡೆಯಾಜ್ಞೆ ತೆರವುಗೊಳಿಸಲು ಮನವಿ ಮಾಡುತ್ತಿದ್ದೇವೆ. ಕೈಲಾದಷ್ಟು ಜನರಿಗೆ ಸಹಾಯ ಮಾಡುತ್ತೇನೆ. ಇಡೀ ವಿಶ್ವ ಬೆಂಗಳೂರನ್ನು ನೋಡುತ್ತಿದೆ. ಕೆಂಪೇಗೌಡರು ಕಟ್ಟಿರುವ ಬೆಂಗಳೂರಿಗೆ ಹೊಸ ರೂಪ ನೀಡಲು ಮುಂದಾಗಿದ್ದೇವೆ ಎಂದು ತಿಳಿಸಿದರು.
ದಿನದಿಂದ ದಿನಕ್ಕೆ ವಾಹನ ಸಂಖ್ಯೆ ಹೆಚ್ಚಾಗಿ ಸಂಚಾರ ದಟ್ಟಣೆ ಉಂಟಾಗುತ್ತಿದ್ದು, ಪರಿಹಾರಕ್ಕೆ 117 ಕಿ.ಮೀ ಉದ್ಧದ ಬೆಂಗಳೂರು ಬಿಸಿನೆಸ್ ಕಾರಿಡಾರ್ ರಸ್ತೆ ನಿರ್ಮಿಸಲಾಗುತ್ತಿದೆ. ಈಗಾಗಲೇ ಅಧಿಸೂಚನೆ ಹೊರಡಿಸಿರುವ ಜಮೀನುಗಳನ್ನು ಯಾವುದೇ ಕಾರಣಕ್ಕೂ ಡಿನೋಟಿಫಿಕೇಷನ್ ಮಾಡುವುದಿಲ್ಲ. ಭೂ ಸಂತ್ರಸ್ತರಿಗೆ ಅಗತ್ಯ ಪರಿಹಾರ ನೀಡುತ್ತೇವೆ. ಜತೆಗೆ ಟನಲ್ ರಸ್ತೆಗೆ ಮುಂದಾಗಿದ್ದು, ಅದಕ್ಕೂ ಸಾಕಷ್ಟು ಅಡಚಣೆ ಮಾಡುತ್ತಿದ್ದಾರೆ ಎಂದರು.
ಎ ಖಾತಾ ಪರಿವರ್ತನೆ ಬಳಸಿಕೊಳ್ಳಿ :
ಬೆಂಗಳೂರಿನ ಆಸ್ತಿಗಳನ್ನು ‘ಬಿ’ ಖಾತೆಯಿಂದ ‘ಎ’ ಖಾತೆಗೆ ಪರಿವರ್ತನೆ ಮಾಡಲಾಗುತ್ತಿದೆ. ಕಂದಾಯ ಭೂಮಿ ತೆಗೆದುಕೊಂಡಿದ್ದು, ದಾಖಲೆಗಳು ಸರಿ ಇಲ್ಲವಾದರೆ ಯಾರಿಗೂ ಸಾಲ ಸೌಲಭ್ಯ ಸಿಗುವುದಿಲ್ಲ. ಆಸ್ತಿಯ ಮಾರ್ಗಸೂಚಿ ದರ (ಗೈಡೆನ್ಸ್ ವ್ಯಾಲ್ಯೂ) ಮೇಲಿನ ಶೇ. 5ರಷ್ಟು ಹಣ ಪಾವತಿ ಮಾಡಿ. ಎ ಖಾತಾ ಪಡೆದರೆ ಆಸ್ತಿ ಮೌಲ್ಯ ದ್ವಿಗುಣವಾಗುತ್ತದೆ. ಆಸ್ತಿ ದಾಖಲೆಗಳನ್ನು ಸ್ಕ್ಯಾನಿಂಗ್ ಮಾಡಿಸುತ್ತಿದ್ದು, ಭವಿಷ್ಯದಲ್ಲಿ ಯಾರೂ ಆಸ್ತಿ ದಾಖಲೆಗಳನ್ನು ಅಕ್ರಮವಾಗಿ ತಿದ್ದುವುದಕ್ಕೆ ಆಸ್ಪದವಿಲ್ಲ ಎಂದು ತಿಳಿಸಿದರು.
110 ಹಳ್ಳಿಯ ಜನರಿಗೆ ಕಾವೇರಿ ನೀರು ಪೂರೈಕೆ ಮಾಡಲಾಗುತ್ತಿದೆ. ಆದರೆ, ಹೆಚ್ಚಿನ ಸಂಖ್ಯೆಯ ಜನರು ನೀರಿನ ಸಂಪರ್ಕ ಪಡೆದುಕೊಂಡಿಲ್ಲ. ಸಂಪರ್ಕ ಪಡೆಯಲು ವಿವಿಧ ಕಂತುಗಳಲ್ಲಿ ಹಣ ಪಾವತಿಗೂ ಅವಕಾಶ ಕಲ್ಪಿಸಿದ್ದೇವೆ ಎಂದು ತಿಳಿಸಿದರು.
ಅನೇಕರು ಕಸ ಸಮಸ್ಯೆ, ರಸ್ತೆ, ಪಾರ್ಕ್, ಜಿಮ್, ಶೌಚಾಲಯ, ಪೊಲೀಸ್ ವಿಚಾರ, ಎಲ್ ಇಡಿ ದೀಪ, ಬಸ್ ನಿಲ್ದಾಣ, ರಸ್ತೆ ಅಗಲೀಕರಣ, ಮೆಟ್ರೋ, ಕೆರೆ, ಕಲುಷಿತ ನೀರು, ಪಾರ್ಕ್ ಒತ್ತುವರಿ, ನೀರಿನ ಸಂಪರ್ಕ, ಬಿಡಿಎ ಫ್ಲಾಟ್ ಹಸ್ತಾಂತರ. ಬಿಡಿಎ ಅಧಿಸೂಚನೆ, ಸಿಸಿ ಕ್ಯಾಮೆರಾ, ಸ್ಟೇಡಿಯಂ, ಚಿತಾಗಾರ, ಬೀದಿ ವ್ಯಾಪಾರಿಗಳಿಂದ ರಸ್ತೆ ಒತ್ತುವರಿ, ಕ್ಲಬ್, ಕೌಶಲ್ಯಾಭಿವೃದ್ಧಿ ಕೇಂದ್ರ, ಆಸ್ಪತ್ರೆ ಸೇರಿದಂತೆ ಅನೇಕ ವಿಚಾರವಾಗಿ ಪ್ರಸ್ತಾಪ ಮಾಡಿದ್ದೀರಿ. ಈ ಎಲ್ಲಾ ವಿಚಾರಗಳ ಬಗ್ಗೆಯೂ ಗಮನಹರಿಸುತ್ತೇವೆ. ಉತ್ತಮ ಆಡಳಿತ ನೀಡಿ, ಸಮಸ್ಯೆ ಬಗೆಹರಿಸಬೇಕು ಎಂಬ ಉದ್ದೇಶದಿಂದಲೇ ಜಿಬಿಎ ರಚಿಸಿದ್ದೇವೆ ಎಂದು ಹೇಳಿದರು.
ಸದ್ಯಕ್ಕೆ ಜಿಬಿಎಗೆ ಹೊಸ ಸೇರ್ಪಡೆ ಇಲ್ಲ:
ಜಿಬಿಎ ವ್ಯಾಪ್ತಿಗೆ ಕೆಲವು ಪ್ರದೇಶಗಳನ್ನು ಸೇರಿಸಬೇಕಾಗಿದ್ದು. ತಕ್ಷಣವೇ ಸೇರಿಸುವುದಿಲ್ಲ. ಈಗ ಚುನಾವಣೆ ಮಾಡುತ್ತೇವೆ. ಅದಾದ ನಂತರ ಯಾವ ಪ್ರದೇಶಗಳನ್ನು ಸೇರಿಸಿಕೊಳ್ಳಬೇಕು ಎಂದು ಪಟ್ಟಿ ಸಿದ್ಧಪಡಿಸಲಾಗುತ್ತಿದೆ. ಆನಂತರ ಕಾನೂನಾತ್ಮಕವಾಗಿ ಸೇರಿಸಿಕೊಳ್ಳಲಾಗುವುದು ಎಂದು ತಿಳಿಸಿದರು.
ಇಂದು ಕಬ್ಬನ್ ಪಾರ್ಕ್‌ನಲ್ಲಿ ಬೆಂಗಳೂರು ನಡಿಗೆ:
ಭಾನುವಾರ ಕಬ್ಬನ್ ಪಾರ್ಕ್ ನಡೆಯಲಿರುವ ಬೆಂಗಳೂರು ನಡಿಗೆ ಅಭಿಯಾನದಲ್ಲಿ ನಗರದ ಎಲ್ಲ ಪಾಲಿಕೆಯ ನಾಗರಿಕರ ಅರ್ಜಿಗಳನ್ನು ಸ್ವೀಕರಿಸಲಾಗುವುದು. ಬೆಳಗ್ಗೆ 7ರಿಂದ 10 ಗಂಟೆವರೆಗೂ ಅರ್ಜಿ ಸ್ವೀಕರಿಸುತ್ತೇನೆ. ಮುಂದಿನ ದಿನಗಳಲ್ಲಿ ನಿರಂತರವಾಗಿ ಈ ರೀತಿಯ ಜನಸಂಪರ್ಕ ಸಭೆಗಳನ್ನು ಮಾಡಲು ವ್ಯವಸ್ಥೆ ರೂಪಿಸಲಾಗುವುದು ಎಂದು ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
)
)

;Resize=(128,128))
;Resize=(128,128))
;Resize=(128,128))