ಹೈಕಮಾಂಡ್‌ ಎಚ್ಚರಿಕೆ ನಂತರವೂ ಅಧಿಕಾರ ಹಂಚಿಕೆ, ಮುಖ್ಯಮಂತ್ರಿ ಬದಲಾವಣೆ ಕುರಿತು ಮಾಧ್ಯಮಗಳಲ್ಲಿ ಹೇಳಿಕೆ ನೀಡಿದ ಶಾಸಕ ಡಾ.ರಂಗನಾಥ್‌ ಮತ್ತು ಮಾಜಿ ಶಾಸಕ ಎಲ್‌.ಆರ್‌.ಶಿವರಾಮೇಗೌಡ ಅವರಿಗೆ ಕೆಪಿಸಿಸಿ ಶಿಸ್ತುಪಾಲನಾ ಸಮಿತಿ ಕಾರಣ ಕೇಳಿ ನೋಟಿಸ್‌ ನೀಡಿದೆ.

ಬೆಂಗಳೂರು : ಹೈಕಮಾಂಡ್‌ ಎಚ್ಚರಿಕೆ ನಂತರವೂ ಅಧಿಕಾರ ಹಂಚಿಕೆ, ಮುಖ್ಯಮಂತ್ರಿ ಬದಲಾವಣೆ ಕುರಿತು ಮಾಧ್ಯಮಗಳಲ್ಲಿ ಹೇಳಿಕೆ ನೀಡಿದ ಶಾಸಕ ಡಾ.ರಂಗನಾಥ್‌ ಮತ್ತು ಮಾಜಿ ಶಾಸಕ ಎಲ್‌.ಆರ್‌.ಶಿವರಾಮೇಗೌಡ ಅವರಿಗೆ ಕೆಪಿಸಿಸಿ ಶಿಸ್ತುಪಾಲನಾ ಸಮಿತಿ ಕಾರಣ ಕೇಳಿ ನೋಟಿಸ್‌ ನೀಡಿದೆ.

ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರಲು ಡಿ.ಕೆ.ಶಿವಕುಮಾರ್‌ ಅವರ ಶ್ರಮ ಬಹಳಷ್ಟಿದೆ. ಅವರಿಗೆ ಪಕ್ಷ ಸೂಕ್ತ ಸ್ಥಾನಮಾನ ನೀಡಬೇಕು ಹಾಗೂ ಅವರು ಒಂದಲ್ಲ ಒಂದು ದಿನ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಡಾ.ರಂಗನಾಥ್‌ ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿಕೆ ನೀಡಿದರು. ಅದೇ ರೀತಿ ಮಾಜಿ ಶಾಸಕ ಎಲ್‌.ಆರ್‌.ಶಿವರಾಮೇಗೌಡ ಕೂಡ ಅಧಿಕಾರ ಹಂಚಿಕೆ ಮತ್ತು ಮುಖ್ಯಮಂತ್ರಿ ಬದಲಾವಣೆ ಕುರಿತು ಮಾತನಾಡಿದ್ದರು.

ಈ ಇಬ್ಬರು ನಾಯಕರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಕೆಪಿಸಿಸಿ ಶಿಸ್ತುಪಾಲನಾ ಸಮಿತಿ, ಮುಖ್ಯಮಂತ್ರಿ ಬದಲಾವಣೆ ವಿಚಾರದಲ್ಲಿ ಮಾಧ್ಯಮಗಳಲ್ಲಿ ಹೇಳಿಕೆ ನೀಡುವ ಮೂಲಕ ಪಕ್ಷಕ್ಕೆ ಮುಜುಗರವನ್ನುಂಟು ಮಾಡಿದ್ದೀರಿ. ಪಕ್ಷದ ಶಿಸ್ತು ಉಲ್ಲಂಘನೆ ಮಾಡಿದ್ದೀರಿ. ಈ ರೀತಿಯ ಅಶಿಸ್ತಿನ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ತಿಳಿಸಿರುವ ಶಿಸ್ತುಪಾಲನಾ ಸಮಿತಿ, ಕಾರಣ ಕೇಳಿ ನೋಟಿಸ್‌ ನೀಡಲಾಗಿದೆ. ನೋಟಿಸ್‌ ನೀಡಿದ ಒಂದು ವಾರದಲ್ಲಿ ನಿಮ್ಮ ಹೇಳಿಕೆಗಳ ಬಗ್ಗೆ ಸಮಜಾಯಿಷಿ ನೀಡಬೇಕು ಎಂದು ತಿಳಿಸಲಾಗಿದೆ.