ಸಾರಾಂಶ
ಧರ್ಮ ರಕ್ಷಣೆಗಾಗಿ ಹಿಂದೂಗಳು ತ್ರಿಶೂಲ, ಶಸ್ತ್ರಾಸ್ತ್ರ ಇಟ್ಟುಕೊಳ್ಳುವಂತೆ ಹೇಳುವ ಬಿಜೆಪಿ ನಾಯಕರು ಮೊದಲು ನಿಮ್ಮ ಮನೆ ಮಕ್ಕಳನ್ನು ಧರ್ಮ ರಕ್ಷಣೆಗೆ ಬಿಡಿ. ಆರ್‌ಎಸ್‌ಎಸ್‌ನವರು ಸಹ ಒಂದು ಮ್ಯಾಟ್ರಿಮೋನಿ ಸ್ಥಾಪಿಸಿ ಮದುವೆಯಾಗಿ ಎಂಟು-ಹತ್ತು ಮಕ್ಕಳು ಮಾಡಿಕೊಳ್ಳಿ.
ಬೆಂಗಳೂರು: ಧರ್ಮ ರಕ್ಷಣೆಗಾಗಿ ಹಿಂದೂಗಳು ತ್ರಿಶೂಲ, ಶಸ್ತ್ರಾಸ್ತ್ರ ಇಟ್ಟುಕೊಳ್ಳುವಂತೆ ಹೇಳುವ ಬಿಜೆಪಿ ನಾಯಕರು ಮೊದಲು ನಿಮ್ಮ ಮನೆ ಮಕ್ಕಳನ್ನು ಧರ್ಮ ರಕ್ಷಣೆಗೆ ಬಿಡಿ. ಆರ್‌ಎಸ್‌ಎಸ್‌ನವರು ಸಹ ಒಂದು ಮ್ಯಾಟ್ರಿಮೋನಿ ಸ್ಥಾಪಿಸಿ ಮದುವೆಯಾಗಿ ಎಂಟು-ಹತ್ತು ಮಕ್ಕಳು ಮಾಡಿಕೊಳ್ಳಿ.
ಆ ನಂತರ ಅವರನ್ನು ದೇಶ ರಕ್ಷಣೆಗೆ ಬಿಡುವ ಮಾತನಾಡಿ ಎಂದು ಸಚಿವ ಪ್ರಿಯಾಂಕ್ ಖರ್ಗೆ, ಹಿಂದೂಗಳು ಆಯುಧ ಪೂಜೆಗೆ ಒಂದೊಂದು ಶಸ್ತ್ರಾಸ್ತ್ರ ಖರೀದಿಸಿ ಧರ್ಮ ರಕ್ಷಣೆಗಾಗಿ ಪೂಜಿಸಿ ಎಂದು ಹೇಳಿಕೆ ನೀಡಿರುವ ಬಿಜೆಪಿಯ ರಾಜ್ಯಸಭಾ ಸದಸ್ಯ ನಾರಾಯಣ ಬಾಂಡಗೆ ತಿರುಗೇಟು ನೀಡಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಶಸ್ತ್ರಾಸ್ತ್ರ ಹೊಂದಿಲ್ಲದ ಹಿಂದೂಗಳು ಆಯುಧ ಪೂಜೆಗೆ ಒಂದೊಂದು ಶಸ್ತ್ರಾಸ್ತ್ರ ಖರೀದಿಸಿ ಧರ್ಮ ರಕ್ಷಣೆಗಾಗಿ ಪೂಜಿಸಿ ಎಂದು ಹೇಳಿಕೆ ನೀಡಿರುವ ಬಿಜೆಪಿಯ ರಾಜ್ಯಸಭಾ ಸದಸ್ಯ ನಾರಾಯಣ ಭಾಂಡಗೆ ಹೇಳಿಕೆ ಕುರಿತ ಪ್ರಶ್ನೆಗೆ, ಬಿಜೆಪಿಯವರು ಏನು ಹುಡುಗಾಟ ಆಡುತ್ತಿದ್ದಾರಾ? ಅವರ ಮಕ್ಕಳು ಮಾತ್ರ ಸುರಕ್ಷಿತವಾಗಿರಬೇಕಾ? ಬಿಜೆಪಿಯ ಶಾಸಕ, ಸಂಸದರೆಲ್ಲರು ಅವರ ಮಕ್ಕಳಿಗೆ ಕತ್ತಿ ತಲವಾರು ಕೊಡಲಿ. ತ್ರಿಶೂಲ ದೀಕ್ಷೆ ಕೊಡಿಸಲಿ. ಹಿಂದೂ ಆಗಲಿ, ಮುಸ್ಲಿಂ, ಸಿಖ್, ಪಾರ್ಸಿ ಯಾರೇ ಇರಲಿ ಶಸ್ತ್ರಾಸ್ತ್ರ ಇಟ್ಟುಕೊಂಡು ಓಡಾಡಬೇಕು ಅಂದ್ರೆ ದಯವಿಟ್ಟು ಓಡಾಡಲಿ. ಕಾನೂನು ಪ್ರಕಾರ ನಾವು ಏನು ಕ್ರಮ ತೆಗೆದುಕೊಳ್ಳಬೇಕೋ ತೆಗೆದುಕೊಳ್ಳುತ್ತೇವೆ ಎಂದರು.
ಆರೆಸ್ಸೆಸ್‌ನವರೇಕೆ ಬ್ರಹ್ಮಚಾರಿಗಳಾಗಿರುತ್ತಾರೆ. ಅವರೂ ಮೊದಲು ಮದುವೆಯಾಗಿ ಧರ್ಮ ರಕ್ಷಣೆಗೆ ಮಕ್ಕಳನ್ನು ಮಾಡಿಕೊಳ್ಳಲು ಕರೆ ಕೊಡಲಿ. ಇದಕ್ಕಾಗಿ ಒಂದು ಆರೆಸ್ಸೆಸ್ ಮ್ಯಾಟ್ರಿಮೊನಿ ರಚಿಸಲಿ. ಬೇಕಿದ್ದರೆ ನಾವೇ ಕೊಡುತ್ತೇವೆ. ಅವರು ಮೊದಲು ಮದುವೆಯಾಗಿ ಎಂಟು ಹತ್ತು ಮಕ್ಕಳನ್ನು ಹುಟ್ಟಿಸಿಕೊಂಡು ಆ ಮೇಲೆ ಅವರೆಲ್ಲರನ್ನೂ ಧರ್ಮ ರಕ್ಷಣೆಗೆ ಬಿಡುವುದಾಗಿ ಹೇಳಬೇಕು ಎಂದರು.