ಸಾರಾಂಶ
ಬೊಗೋಟ/ನವದೆಹಲಿ: ವಿದೇಶಿ ನೆಲದಲ್ಲಿ ಭಾರತದ ಆಂತರಿಕ ವಿಷಯ ಪ್ರಸ್ತಾಪಿಸಿ ಕಾಂಗ್ರೆಸ್ ಮುಖಂಡ ಹಾಗೂ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಪುನಃ ವಿವಾದಕ್ಕೆ ಕಾರಣವಾಗಿದ್ದಾರೆ. ಕೊಲಂಬಿಯಾ ಪ್ರವಾಸದಲ್ಲಿರುವ ಅವರು, ‘ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಭಾರತದ ಪ್ರಜಾಪ್ರಭುತ್ವದ ಮೇಲೆ ದಾಳಿ ನಡೆಸುತ್ತಿದೆ. ಇದು ಭಾರತದ ಪಾಲಿಗೆ ಅತಿದೊಡ್ಡ ಬೆದರಿಕೆಯಾಗಿದೆ’ ಎಂದಿದ್ದಾರೆ.
ಇದೇ ವೇಳೆ, ‘ಆರೆಸ್ಸೆಸ್ ಮತ್ತು ಬಿಜೆಪಿಗರು ಹೇಡಿಗಳು. ದುರ್ಬಲರ ಮೇಲೆ ದಾಳಿ ನಡೆಸುವುದೇ ಅವರ ಸಿದ್ಧಾಂತ’ ಎಂದು ಆರೋಪಿಸಿದ್ದಾರೆ. ರಾಹುಲ್ ಆರೋಪಕ್ಕೆ ಬಿಜೆಪಿ ಕಿಡಿಕಾರಿದ್ದು, ‘ಅವರೊಬ್ಬ ಭಾರತ ವಿರೋಧಿ. ವಿದೇಶಿ ನೆಲದಲ್ಲಿ ದೇಶದ ಪ್ರಜಾಪ್ರಭುತ್ವವನ್ನು ಟೀಕಿಸುವುದೇ ಅವರ ಕೆಲಸ’ ಎಂದಿದೆ.
ರಾಹುಲ್ ಹೇಳಿದ್ದೇನು?:
ಕೊಲಂಬಿಯಾ ಸಿಟಿಯಲ್ಲಿ ಇಐಎ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಜತೆಗೆ ನಡೆಸಿದ ಸಂವಾದದ ವೇಳೆ ಅವರು ಮಾತನಾಡಿ, ‘ಭಾರತವು ಹಲವು ಧರ್ಮಗಳು, ಸಂಪ್ರದಾಯಗಳು ಮತ್ತು ಹಲವು ಭಾಷೆಗಳ ಸಂಗಮ. ಪ್ರಜಾಪ್ರಭುತ್ವ ವ್ಯವಸ್ಥೆಯು ಪ್ರತಿಯೊಬ್ಬರಿಗೂ ಸ್ಥಾನ ಕೊಡುತ್ತದೆ. ಆದರೆ ಈಗ ಲೋಕತಾಂತ್ರಿಕ ವ್ಯವಸ್ಥೆ ಮೇಲೆ ಎಲ್ಲಾ ದಿಕ್ಕುಗಳಿಂದಲೂ ದಾಳಿ ನಡೆಯುತ್ತಿದೆ. ಇದು ದೇಶದ ಪಾಲಿಗೆ ಅತಿದೊಡ್ಡ ಬೆದರಿಕೆ’ ಎಂದು ಕೇಂದ್ರ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದರು.
ನೋಟ್‌ಬ್ಯಾನ್, ಜಿಎಸ್‌ಟಿ ವಿರುದ್ಧವೂ ಕಿಡಿ:
ಅಪನಗದೀಕರಣ ಹಾಗೂ ಜಿಎಸ್‌ಟಿಯಂಥ ಕೇಂದ್ರ ಸರ್ಕಾರದ ನೀತಿಗಳ ವಿರುದ್ಧವೂ ಕಿಡಿಕಾರಿದ ಅವರು, ಈ ಆರ್ಥಿಕ ನೀತಿಗಳು ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು ನಾಶ ಮಾಡಿದ್ದು, ದೊಡ್ಡ ಏಕಸ್ವಾಮ್ಯ ಕಂಪನಿಗಳು ನಮ್ಮ ಅರ್ಥವ್ಯವಸ್ಥೆಯ ದೊಡ್ಡ ಭಾಗವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವಂತೆ ಮಾಡಿವೆ. ಸಣ್ಣ ಕೈಗಾರಿಕೆಗಳಿಗೆ ಬೆಂಬಲಿಸಿದರೆ ಉದ್ಯಮಶೀಲತೆಗೆ ಉತ್ತೇಜನ ನೀಡಿದಂತೆ ಎಂಬುದು ನಮ್ಮ ನಂಬಿಕೆ. ಇದೇ ನಮ್ಮ ಮತ್ತು ಈಗ ಅಧಿಕಾರದಲ್ಲಿರುವವರ ನಡುವಿನ ವ್ಯತ್ಯಾಸ. ಈಗ ಅಧಿಕಾರದಲ್ಲಿರುವ ಸರ್ಕಾರವು ಅರ್ಥವ್ಯವಸ್ಥೆಯನ್ನು ಏಕಸ್ವಾಮ್ಯ ಕಂಪನಿಗಳು ನಿಯಂತ್ರಣ ಮಾಡಬೇಕೆಂದು ಬಯಸುತ್ತದೆ ಎಂದರು.
ಭಾರತದಲ್ಲಿ ಕೇಂದ್ರಮಟ್ಟದಲ್ಲಿ ದೊಡ್ಡಮಟ್ಟದ ಭ್ರಷ್ಟಾಚಾರ ಇದೆ. ಪ್ರಧಾನಿಗಳ ಜತೆ ನೇರ ಸಂಬಂಧ ಹೊಂದಿರುವ ಮೂರರಿಂದ ನಾಲ್ಕು ಉದ್ಯಮಿಗಳು ಇಡೀ ಅರ್ಥವ್ಯವಸ್ಥೆಯನ್ನು ನಿಯಂತ್ರಿಸುತ್ತಿದ್ದಾರೆ ಎಂದು ರಾಹುಲ್ ಆರೋಪಿಸಿದರು.
ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರ ಚೀನಾ ಕುರಿತ ಹೇಳಿಕೆ ಮತ್ತು ಮುಸ್ಲಿಂ ವ್ಯಕ್ತಿ ಮೇಲೆ ಹಲ್ಲೆ ವಿಚಾರವಾಗಿ ಸಾವರ್ಕರ್ ಅವರ ಹೇಳಿಕೆ ಕುರಿತು ಇದೇ ವೇಳೆ ಉಲ್ಲೇಖಿಸಿದ ಅವರು, ನಮ್ಮ ವಿದೇಶಾಂಗ ಸಚಿವರು ಚೀನಾವು ಭಾರತಕ್ಕಿಂತ ಬಲಶಾಲಿಯಾಗಿದೆ. ಅವರ ಜತೆ ನಾನು ಹೇಗೆ ಯುದ್ಧ ಮಾಡಲು ಸಾಧ್ಯ? ಎಂದು ಹೇಳಿದ್ದಾರೆ. ಇನ್ನು ಸಾವರ್ಕರ್ ಅವರು ತಮ್ಮ ಕೃತಿಯಲ್ಲಿ ಒಮ್ಮೆ ಗೆಳೆಯರ ಜತೆ ಸೇರಿಕೊಂಡು ಮುಸ್ಲಿಂ ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ನಡೆಸಿದ ವಿಚಾರ ಪ್ರಸ್ತಾಪಿಸಿದ್ದಾರೆ. ಇದರಿಂದ ಅವರು ತೀವ್ರ ಖುಷಿಪಟ್ಟಿದ್ದರಂತೆ. ಐದು ಜನ ಸೇರಿ ಒಬ್ಬ ವ್ಯಕ್ತಿಗೆ ಹಲ್ಲೆ ಮಾಡಿದರೆ ಖುಷಿಯಂತೆ. ಇದು ಹೇಡಿತನ. ಇದು ಆರೆಸ್ಸೆಸ್ ಸಿದ್ಧಾಂತ. ದುರ್ಬಲರ ಮೇಲೆ ಹಲ್ಲೆ ಮಾಡುವುದೇ ಅವರ ಸಿದ್ಧಾಂತ ಎಂದು ಆರೋಪಿಸಿದರು.
ರಾಹುಲ್ ಹೇಳಿಕೆಗೆ ತೀವ್ರ ಕಿಡಿಕಾರಿರುವ ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ, ರಾಹುಲ್ ಗಾಂಧಿ ಅವರು ಮತ್ತೊಮ್ಮೆ ತಾವೊಬ್ಬ ಅಪಪ್ರಚಾರದ ನಾಯಕ ಎಂಬುದನ್ನು ಸಾಬೀತುಪಡಿಸಿದ್ದಾರೆ. ವಿದೇಶಕ್ಕೆ ತೆರಳಿ ಭಾರತದ ಪ್ರಜಾಪ್ರಭುತ್ವದ ಮೇಲೆ ದಾಳಿ ನಡೆಸುತ್ತಾರೆ ಎಂದು ಆರೋಪಿಸಿದರು.
ಬಿಜೆಪಿ ಮತ್ತೊಬ್ಬ ಮುಖಂಡ ಪ್ರದೀಪ್ ಭಂಡಾರಿ ಮಾತನಾಡಿ, ಗಾಂಧಿ-ವಾದ್ರಾ ಕುಟುಂಬವು ಭಾರತವನ್ನು ಬಡದೇಶವಾಗಿಯೇ ಉಳಿಸಲು ಬಯಸುತ್ತದೆ. ರಾಹುಲ್ ಗಾಂಧಿ ಅವರು ಭಾರತ ವಿರೋಧಿ. ಅವರು ದೇಶವನ್ನು ವಿರೋಧಿಸುತ್ತಾರೆ ಎಂದು ಆರೋಪಿಸಿದ್ದಾರೆ.
ರಾಹುಲ್ ಪ್ರಹಾರ
- ಈ ಹಿಂದಿನಂತೆಯೇ ಪುನಃ ವಿದೇಶಿ ನೆಲದಲ್ಲಿ ಮೋದಿ ಸರ್ಕಾರ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ
- ದುರ್ಬಲರ ಮೇಲೆ ಹಾಗೂ ಲೋಕತಾಂತ್ರಿಕ ವ್ಯವಸ್ಥೆ ಮೇಲೆ ದಾಳಿಯೇ ಆರೆಸ್ಸೆಸ್-ಬಿಜೆಪಿ ಸಿದ್ಧಾಂತ
- ಕೇವಲ ಶತಕೋಟ್ಯಧಿಪತಿ 3-4 ಉದ್ಯಮಿಗಳಿಂದ ಅರ್ಥವ್ಯವಸ್ಥೆ ನಿಯಂತ್ರಣ. ಜನತೆಗೆ ಅನ್ಯಾಯ
- ಭಾರತದಲ್ಲಿ ಕೇಂದ್ರಮಟ್ಟದಲ್ಲಿ ದೊಡ್ಡಮಟ್ಟದ ಭ್ರಷ್ಟಾಚಾರ. ಪ್ರಧಾನಿಗೆ ಇದು ಗೊತ್ತಿದ್ದೂ ಮೌನ: ರಾಗಾ
- ರಾಹುಲ್ ಭಾರತ ವಿರೋಧಿ: ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ ಅವರಿಂದ ತೀವ್ರ ಆಕ್ರೋಶ