ಸಾರಾಂಶ
- ಆಳಂದದಲ್ಲಿ ಜಯಿಸಿದ್ದು ಕಾಂಗ್ರೆಸ್ ಪಕ್ಷ ಅಲ್ಲವೇ: ಅನುರಾಗ್ ವ್ಯಂಗ್ಯ
- ಕೋರ್ಟ್‌ನಿಂದ ಛೀಮಾರಿ ಹಾಕಿಸಿಕೊಳ್ಳೋದು ರಾಹುಲ್‌ಗೆ ರೂಢಿನವದೆಹಲಿ: ಆಳಂದದಲ್ಲಿ ಭಾರೀ ಮತಗಳವು ಯತ್ನ ನಡೆದಿತ್ತು ಎಂದು ಆರೋಪಿಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಬಿಜೆಪಿ ಸಂಸದ ಅನುರಾಗ್ ತಿರುಗೇಟು ನೀಡಿದ್ದು, ಆ ಕ್ಷೇತ್ರದಲ್ಲಿ 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಜಯ ಸಾಧಿಸಿದ್ದು ಮತಚೋರಿ ಮಾಡಿಯೇ? ಎಂದು ಕಾಲೆಳೆದಿದ್ದಾರೆ.
ಜತೆಗೆ, ರಾಹುಲ್ ತಮ್ಮ ಮೇಲೆ ತಾವೇ ಹೈಡ್ರೋಜನ್ ಬಾಂಬ್ ಹಾಕಿಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.‘ಕಾಂಗ್ರೆಸ್ ಮಾಡುತ್ತಿರುವ ಆಳಂದ ಮತಚೋರಿ ಆರೋಪವನ್ನು ಸ್ವತಃ ಚುನಾವಣಾ ಆಯೋಗವೇ ಅಲ್ಲಗಳೆದಿದೆ. 2013ರಲ್ಲೂ ಇಂಥ ಆರೋಪವನ್ನು ಕಾಂಗ್ರೆಸ್ ಮಾಡಿದಾಗ ಎಲ್ಲ ಸಾಕ್ಷ್ಯಗಳನ್ನು ಆಯೋಗ ನೀಡಿತ್ತು’ ಎಂದ ಠಾಕೂರ್, ‘ರಾಹುಲ್ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಸುಮಾರು 90 ಚುನಾವಣೆಗಳಲ್ಲಿ ಸೋಲುತ್ತಲೇ ಬಂದಿದೆ. ಇದರಿಂದಾಗಿ ಪಕ್ಷದ ಹತಾಶೆ ದಿನೇದಿನೇ ಹೆಚ್ಚುತ್ತಿದೆ. ಈ ಕಾರಣದಿಂದ ಆಧಾರರಹಿತ ಹಾಗೂ ಸುಳ್ಳು ಆರೋಪಗಳನ್ನೇ ರಾಜಕೀಯ ಅಸ್ತ್ರವಾಗಿ ಬಳಸುತ್ತಿರುವ ರಾಹುಲ್‌ಗೆ ನ್ಯಾಯಾಲಯದಿಂದ ಛೀಮಾರಿ ಹಾಕಿಸಿಕೊಂಡು ಕ್ಷಮೆ ಕೇಳುವುದು ರೂಢಿಯಾಗಿಬಿಟ್ಟಿದೆ’ ಎಂದು ಹೇಳಿದರು.
‘ಕರ್ನಾಟಕದಲ್ಲಿ 2023ರಲ್ಲಿ ಮಾಲೂರಿನ ಕಾಂಗ್ರೆಸ್ ಶಾಸಕ ನಂಜೇಗೌಡ ಆಯ್ಕೆಯನ್ನು ಹೈಕೋರ್ಟ್ ರದ್ದು ಮಾಡಿದೆ. ಹಾಗಿದ್ದರೆ ಅದನ್ನು ಮತಚೋರಿ ಎಂದು ಕಾಂಗ್ರೆಸ್ ಒಪ್ಪುತ್ತದೆಯೇ?’ ಎಂದು ಅನುರಾಗ್ ಕೇಳಿದರು.ವಾಗ್ದಾಳಿ ಮುಂದುವರೆಸಿದ ಅವರು, ‘ರಾಹುಲ್ ಭಾರತದ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸಿ, ಜನರ ದಾರಿ ತಪ್ಪಿಸಿ, ನೇಪಾಳ ಮತ್ತು ಬಾಂಗ್ಲಾದಲ್ಲಿರುವಂತಹ ಸ್ಥಿತಿ ಸೃಷ್ಟಿಸಿದ್ದಾರೆ. ನುಸುಳುಕೋರರಿಗೆ ಮತದಾರರ ಪಟ್ಟ ಕಟ್ಟುತ್ತಿದ್ದಾರೆ’ ಎಂದರು.