ಆಟಂ ಬಾಂಬ್‌ ಆಯ್ತು, ಹೈಡ್ರೋಜನ್‌ ಬಾಂಬ್‌ ಹಾಕ್ತೇವೆ : ರಾಹುಲ್‌ ಗಾಂಧಿ

| N/A | Published : Sep 02 2025, 01:00 AM IST

ಆಟಂ ಬಾಂಬ್‌ ಆಯ್ತು, ಹೈಡ್ರೋಜನ್‌ ಬಾಂಬ್‌ ಹಾಕ್ತೇವೆ : ರಾಹುಲ್‌ ಗಾಂಧಿ
Share this Article
  • FB
  • TW
  • Linkdin
  • Email

ಸಾರಾಂಶ

ಆಟಂ ಬಾಂಬ್‌ ಆಯ್ತು, ಇದೀಗ ಕಾಂಗ್ರೆಸ್‌ ಪಕ್ಷ ಸದ್ಯದಲ್ಲೇ ಮತಗಳ್ಳತನ ಕುರಿತು ಹೈಡ್ರೋಜನ್‌ ಬಾಂಬ್‌ ಹಾಕಲಿದೆ. ಇದಾದ ಬಳಿಕ ಪ್ರಧಾನಿ ಮೋದಿ ಅವರು ದೇಶಕ್ಕೆ ತಮ್ಮ ಮುಖ ತೋರಿಸಲೂ ಆಗದ ಸ್ಥಿತಿ ಬರಲಿದೆ ಎಂದು ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಪಟನಾ: ಆಟಂ ಬಾಂಬ್‌ ಆಯ್ತು, ಇದೀಗ ಕಾಂಗ್ರೆಸ್‌ ಪಕ್ಷ ಸದ್ಯದಲ್ಲೇ ಮತಗಳ್ಳತನ ಕುರಿತು ಹೈಡ್ರೋಜನ್‌ ಬಾಂಬ್‌ ಹಾಕಲಿದೆ. ಇದಾದ ಬಳಿಕ ಪ್ರಧಾನಿ ಮೋದಿ ಅವರು ದೇಶಕ್ಕೆ ತಮ್ಮ ಮುಖ ತೋರಿಸಲೂ ಆಗದ ಸ್ಥಿತಿ ಬರಲಿದೆ ಎಂದು ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಬಿಹಾರದಲ್ಲಿ 16 ದಿನಗಳ ಮತ ಅಧಿಕಾರ್‌ ಯಾತ್ರೆ ಸಮಾರೋಪದ ಭಾಗವಾಗಿ ಪಟನಾದಲ್ಲಿ ಸೋಮವಾರ ಆಯೋಜಿಸಿದ್ದ ಮಹಾಮೈತ್ರಿಕೂಟದ ಒಕ್ಕೂಟದ ಬೃಹತ್‌ ಸಮಾವೇಶದಲ್ಲಿ ಮಾತನಾಡಿದರು.

ಈ ನಡುವೆ ರಾಹುಲ್‌ ಹೇಳಿಕೆಗೆ ತಿರುಗೇಟು ನೀಡಿರುವ ಬಿಜೆಪಿ, ‘ರಾಹುಲ್‌ ಗಾಂಧಿ ಅವರ ಆಟಂ ಬಾಂಬ್‌ ಈಗಾಗಲೇ ಠುಸ್ಸಾಗಿದೆ. ಪ್ರತಿಪಕ್ಷ ನಾಯಕನಾಗಿ ರಾಹುಲ್‌ ಅವರು ಬೇಜವಾಬ್ದಾರಿಯುತ ಹೇಳಿಕೆ ನೀಡಬಾರದು. ವೋಟ್‌ ಅಧಿಕಾರ್‌ ರ್‍ಯಾಲಿ ಮತದಾರರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ’ ಎಂದು ಹೇಳಿದೆ.

ಹೈಡ್ರೋಜನ್‌ ಬಾಂಬ್:

ಮತ ಅಧಿಕಾರ ಸಮಾರೋಪದಲ್ಲಿ ಮಾತನಾಡಿದ ರಾಹುಲ್‌, ‘ಬಿಹಾರವು ಒಂದು ಕ್ರಾಂತಿಕಾರಿ ರಾಜ್ಯ. ಈ ರಾಜ್ಯವು ಯಾವುದೇ ಕಾರಣಕ್ಕೂ ಮತಗಳ್ಳತನಕ್ಕೆ ಅವಕಾಶ ನೀಡುವುದಿಲ್ಲ ಎನ್ನುವ ಸಂದೇಶವನ್ನು ದೇಶಕ್ಕೆ ರವಾನಿಸಿದೆ. ಮಹಾತ್ಮಾ ಗಾಂಧಿ ಅವರನ್ನು ಕೊಂದ ಶಕ್ತಿಗಳೇ, ಇದೀಗ ದೇಶದ ಸಂವಿಧಾನದ ಹತ್ಯೆ ಮಾಡಲು ಹೊರಟಿವೆ. ಆದರೆ ನಾವು ಯಾವುದೇ ಕಾರಣಕ್ಕೂ ಅವರಿಗೆ(ಬಿಜೆಪಿ) ಸಂವಿಧಾನದ ಹತ್ಯೆ ಮಾಡಲು ಬಿಡಲ್ಲ. ಇದೇ ಕಾರಣಕ್ಕೆ ಈ ಯಾತ್ರೆ ಆರಂಭಿಸಿದೆವು. ನಮ್ಮ ಈ ಯಾತ್ರೆಗೆ ಭಾರೀ ಜನಬೆಂಬಲ ವ್ಯಕ್ತವಾಗಿದೆ. ಜನ ಭಾರೀ ಸಂಖ್ಯೆಯಲ್ಲಿ ಆಗಮಿಸಿ ಮತಕಳ್ಳರು, ಕುರ್ಚಿ ಕಳ್ಳರು ಎಂಬ ಘೋಷಣೆ ಮೊಳಗಿಸಿದ್ದಾರೆ’ ಎಂದು ಹೇಳಿದರು.

ಮಹದೇವಪುರದಲ್ಲಿ ಆಟಂ ಬಾಂಬ್‌:

ಬಿಜೆಪಿಯವರು ನಮಗೆ ಕಪ್ಪುಬಾವುಟ ತೋರಿಸಿದರು. ಅವರಿಗೆ ನಾನು ಹೇಳುವುದಿಷ್ಟೆ. ಅವರು ಯಾವತ್ತಾದರೂ ಆಟಂ ಬಾಂಬ್‌ಗಿಂತ ದೊಡ್ಡದನ್ನು ಕೇಳಿದ್ದಾರಾ? ಆಟಂ ಬಾಂಬ್‌ಗಿಂತ ಹೈಡ್ರೋಜನ್‌ ಬಾಂಬ್‌ ಶಕ್ತಿಶಾಲಿಯಾಗಿದೆ. ಕರ್ನಾಟಕದ ಮಹದೇವಪುರದಲ್ಲಿ ನಾವು ಆಟಂಬಾಂಬ್‌ ತೋರಿಸಿದ್ದೇವೆ. ಬಿಜೆಪಿಗರೇ ಸಿದ್ಧವಾಗಿರಿ, ಶೀಘ್ರದಲ್ಲೇ ಹೈಡ್ರೋಜನ್‌ ಬಾಂಬ್‌ ಕೂಡ ಹೊರಬೀಳಲಿದೆ. ಜನ ಶೀಘ್ರದಲ್ಲೇ ಬಿಜೆಪಿಯ ಮತಕಳವಿನ ನೈಜತೆ ತಿಳಿಯಲಿದ್ದಾರೆ. ಮುಂದಿನ ದಿನಗಳಲ್ಲಿ ಹೈಡ್ರೋಜನ್‌ ಬಾಂಬ್‌ನಿಂದಾಗಿ ಮೋದಿ ಅವರು ದೇಶಕ್ಕೆ ತಮ್ಮ ಮುಖ ತೋರಿಸಲೂ ಆಗದ ಸ್ಥಿತಿ ಬರಲಿದೆ ಎಂದರು.

ಮಹದೇವಪುರದಲ್ಲಿ ಸಾಕ್ಷ್ಯ;

ನಮ್ಮ ಪಕ್ಷವು ಕರ್ನಾಟಕದ ಮಹದೇವಪುರ ಅಸೆಂಬ್ಲಿ ಕ್ಷೇತ್ರದಲ್ಲಿ ನಡೆದ ಮತಗಳ್ಳತನಕ್ಕೆ ಸಾಕ್ಷ್ಯ ಕೊಟ್ಟಿದೆ. ಕೇವಲ ಒಂದು ವಿಧಾನಸಭಾ ಕ್ಷೇತ್ಪದಲ್ಲಿ ಒಂದು ಲಕ್ಷ ನಕಲಿ ಮತಗಳನ್ನು ತೋರಿಸಿಕೊಟ್ಟಿದ್ದೇವೆ. ಪತ್ರಿಕಾಗೋಷ್ಠಿಯಲ್ಲೇ ನಾವು ಇದನ್ನು ಬಹಿರಂಗಪಡಿಸಿದ್ದೇವೆ. ಚುನಾವಣಾ ಆಯೋಗವು ನಮಗೆ ಸುಲಭವಾಗಿ ಪರಿಶೀಲಿಸಬಹುದಾದ ವೋಟರ್‌ ಲಿಸ್ಟ್‌ ಅನ್ನಾಗಲಿ, ಮತದಾನದ ವಿಡಿಯೋವನ್ನಾಗಲಿ ನೀಡುತ್ತಿಲ್ಲ. ಹೀಗಾಗಿ ಸಾಕ್ಷ್ಯ ಸಂಗ್ರಹಿಸಲು ನಾವು ಸಾಕಷ್ಟು ಪ್ರಯತ್ನ ಪಟ್ಟಿದ್ದೇವೆ. ಜನರ ಮುಂದೆ ಎಲ್ಲವನ್ನೂ ಬಯಲು ಮಾಡಿದ್ದೇವೆ ಎಂದರು.

ಮತಗಳವು ಅಂದರೆ ಯುವಕರ ಅಧಿಕಾರದ ಹಕ್ಕು, ಮೀಸಲಾತಿ ಮತ್ತು ಪ್ರಜಾಪ್ರಭುತ್ವ, ಉದ್ಯೋಗ, ಶಿಕ್ಷಣ, ಯುವಕರ ಭವಿಷ್ಯಕ್ಕೆ ಹಾಕುವ ಕನ್ನವಾಗಿದೆ ಎಂದು ಆರೋಪಿಸಿದ ಅ‍ವರು, ಬಿಜೆಪಿಗರು ಕೇವಲ ನಿಮ್ಮ ಮತವನ್ನಷ್ಟೇ ಅಲ್ಲ, ರೇಷನ್‌ ಕಾರ್ಡ್‌, ಭೂಮಿಯನ್ನೂ ತೆಗೆದುಕೊಳ್ಳುತ್ತಾರೆ. ಅದಾನಿ, ಅಂಬಾನಿಗೆ ಅದನ್ನು ನೀಡುತ್ತಾರೆ ಎಂದು ದೂರಿದರು.

ಆಟಂ ಬಾಂಬ್‌ ಠುಸ್‌:

ರಾಹುಲ್‌ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿ ವಕ್ತಾರ ರವಿಶಂಕರ್ ಪ್ರಸಾದ್‌, ‘ರಾಹುಲ್‌ ಗಾಂಧಿ ಮತ್ತು ಅ‍ವರ ಪಕ್ಷಕ್ಕೆ ಮೋದಿ ಅವರನ್ನು ನಿಂದಿಸುವ ಇತಿಹಾಸವೇ ಇದೆ. ಆದರೆ ಜನ ರಾಹುಲ್‌ ಗಾಂಧಿ ಅವರನ್ನು ತಿರಸ್ಕರಿಸಿ, ಪ್ರಧಾನಿ ಮೋದಿ ಅವರಲ್ಲಿ ವಿಶ್ವಾಸ ಇರಿಸಿದ್ದಾರೆ. ಮೋದಿ ನಾಯಕತ್ವದಲ್ಲಿ ಬಿಜೆಪಿ ಗೆಲುವನ್ನು ಮೋಸ ಎಂದು ಕರೆಯುವ ಮೂಲಕ ರಾಹುಲ್‌ ಮತದಾರರಿಗೆ ಅವಮಾನ ಮಾಡಿದ್ದಾರೆ. ಇದೊಂದು ದಾಷ್ಟ್ರ್ಯದ ವರ್ತನೆ. ಇದಕ್ಕಾಗಿ ಅವರನ್ನು ಶಿಕ್ಷಿಸುವಂತೆ ಮತದಾರರಿಗೆ ಆಗ್ರಹಿಸುತ್ತೇನೆ’ ಎಂದರು.

- ಇದರಿಂದ ಮೋದಿಗೆ ಮುಖತೋರಿಸಲಾಗದ ಸ್ಥಿತಿ ಬರಲಿದೆ

- ಮಹದೇವಪುರದಲ್ಲಿ ನಾವು ಆಟಂ ಬಾಂಬ್‌ ಹಾಕಿದ್ದೇವೆ

- ಪ್ರತಿಕಾಗೋಷ್ಠಿಯಲ್ಲೇ ಮತಕಳವಿಗೆ ಸಾಕ್ಷ್ಯ ಕೊಟ್ಟಿದ್ದೇವೆ

- ವೋಟ್‌ ಅಧಿಕಾರ್‌ ಯಾತ್ರೆ ಸಮಾರೋಪದಲ್ಲಿ ರಾಹುಲ್‌

Read more Articles on