ರಾಹುಲ್‌ ಗಾಂಧಿ ಪ್ರಶ್ನೆಗಳಿಗೆ ಚುನಾವಣಾ ಆಯೋಗ ಉತ್ತರಿಸಲಿ: ರಮಾನಾಥ ರೈ

| Published : Aug 15 2025, 01:01 AM IST

ಸಾರಾಂಶ

ಮತದಾರರ ಪಟ್ಟಿಯಲ್ಲಿನ ಲೋಪಗಳನ್ನು ರಾಹುಲ್‌ ಗಾಂಧಿ ಉದಾಹರಣೆ ಸಹಿತ ತೋರಿಸಿಕೊಟ್ಟಿದ್ದಾರೆ. ಅವರು ಎತ್ತಿರುವ ಪ್ರಶ್ನೆಗಳು ದೇಶಾದ್ಯಂತ ಚರ್ಚೆಯ ವಿಷಯವಾಗಿದೆ. ಇದಕ್ಕೆ ಉತ್ತರಿಸಬೇಕಾದ ಜವಾಬ್ದಾರಿ ಚುನಾವಣಾ ಆಯೋಗದ್ದು ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಅಭಿಪ್ರಾಯಪಟ್ಟಿದ್ದಾರೆ.

ಮಂಗಳೂರು: ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರು ಚುನಾವಣಾ ಆಯೋಗದ ತಪ್ಪುಗಳನ್ನು ಬಹಿರಂಗಪಡಿಸಿದ್ದು, ಅವರ ಪ್ರಶ್ನೆಗಳಿಗೆ ಆಯೋಗ ಉತ್ತರಿಸಬೇಕು ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮತದಾರರ ಪಟ್ಟಿಯಲ್ಲಿನ ಲೋಪಗಳನ್ನು ರಾಹುಲ್‌ ಗಾಂಧಿ ಉದಾಹರಣೆ ಸಹಿತ ತೋರಿಸಿಕೊಟ್ಟಿದ್ದಾರೆ. ಅವರು ಎತ್ತಿರುವ ಪ್ರಶ್ನೆಗಳು ದೇಶಾದ್ಯಂತ ಚರ್ಚೆಯ ವಿಷಯವಾಗಿದೆ. ಇದಕ್ಕೆ ಉತ್ತರಿಸಬೇಕಾದ ಜವಾಬ್ದಾರಿ ಚುನಾವಣಾ ಆಯೋಗದ್ದು. ದೇಶದಲ್ಲಿನ ಚುನಾವಣಾ ಪ್ರಕ್ರಿಯೆ ಪಾರದರ್ಶಕವಾಗಿದೆ ಎಂದಾದರೆ ಆಯೋಗವು ಉತ್ತರ ನೀಡಲಿ ಎಂದು ಆಗ್ರಹಿಸಿದರು.ಚುನಾವಣಾ ಆಯೋಗ ಉತ್ತರ ನೀಡಬೇಕಾದಲ್ಲಿ ಬಿಜೆಪಿ ನಾಯಕರು ಉತ್ತರಿಸುತ್ತಿದ್ದಾರೆ. ಈ ಮೂಲಕ ಮತದಾರರ ಪಟ್ಟಿಯಲ್ಲಿನ ಚುನಾವಣಾ ಆಯೋಗದ ತಪ್ಪನ್ನು ಒಪ್ಪಿಕೊಂಡಂತಾಗಿದೆ ಎಂದು ರಮಾನಾಥ ರೈ ಹೇಳಿದರು.

ರಾಹುಲ್‌ ಗಾಂಧಿ ಕೇಳಿರುವಂತೆ ಚುನಾವಣಾ ಆಯೋಗವು ಕಳೆದ 10 ವರ್ಷಗಳ ವಿಡಿಯೋ ಹಾಗೂ ಸಾಫ್ಟ್‌ ಕಾಪಿಯನ್ನು ಒದಗಿಸಬೇಕು. ಈ ಹಿಂದೆ ಮಹಾರಾಷ್ಟ್ರ ಚುನಾವಣೆ ಸಂದರ್ಭದಲ್ಲಿಯೇ ರಾಹುಲ್‌ ಮತದಾರರ ಪಟ್ಟಿಯ ಲೋಪದ ಬಗ್ಗೆ ಧ್ವನಿ ಎತ್ತಿದ್ದರು. ಬಳಿಕ ಹರಿಯಾಣ ಚುನಾವಣೆ ಸಂದರ್ಭದಲ್ಲೂ ಮಾತನಾಡಿದ್ದಾರೆ. ಇದೀಗ ಬಿಹಾರ ಚುನಾವಣೆ ಸಂದರ್ಭದಲ್ಲಿ ದೊಡ್ಡ ಮಟ್ಟದಲ್ಲಿ ಪ್ರಶ್ನಿಸಿದ್ದಾರೆ. ಚುನಾವಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರುವಲ್ಲಿ ಅವರ ಈ ಪ್ರಯತ್ನಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದರು.

ಕಾಂಗ್ರೆಸ್‌ ಮುಖಂಡರಾದ ಶಶಿಧರ ಹೆಗ್ಡೆ, ನವೀನ್‌ ಡಿಸೋಜ, ಇಬ್ರಾಹಿಂ ನವಾಜ್‌, ಆರ್‌.ಕೆ. ಪ್ರಥ್ವಿರಾಜ್‌, ಬಿ.ಎಂ. ಅಬ್ಬಾಸ್‌ ಅಲಿ, ಸುಹಾನ್‌ ಆಳ್ವ, ಜಯಶೀಲ ಅಡ್ಯಂತಾಯ, ಅಶೋಕ್‌ ಡಿ.ಕೆ., ಪ್ರೇಮ್‌ ಬಳ್ಳಾಲ್‌ಬಾಗ್‌, ಸಬೀರ್‌ ಎಸ್‌. ಯಶವಂತ ಪ್ರಭು, ಫಯಾಝ್‌ ಅಮ್ಮೆಮಾರ್‌ ಇದ್ದರು.