ಚುನಾವಣಾ ಕಾವಲುಗಾರನೇಮತಗಳ್ಳರ ರಕ್ಷಿಸಿದ: ರಾಗಾ

| Published : Sep 20 2025, 01:00 AM IST

ಸಾರಾಂಶ

ಕರ್ನಾಟಕದ ಆಳಂದ ವಿಧಾನಸಭಾ ಚುನಾವಣೆಯಲ್ಲಿ ಭಾರೀ ಮತಗಳವು ಆಗಿದೆ ಎಂದು ಗುರುವಾರ ದಾಖಲೆಗಳನ್ನು ಮುಂದಿಟ್ಟು ಆರೋಪಿಸಿದ್ದ ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ಶುಕ್ರವಾರವೂ ತಮ್ಮ ಆರೋಪವನ್ನು ಪುನರುಚ್ಚರಿಸಿದ್ದಾರೆ. ಚುನಾವಣೆಯ ವೇಳೆ ಎಚ್ಚರವಿದ್ದ ಚುನಾವಣಾ ಕಾವಲುಗಾರ, ಕಳ್ಳತನವನ್ನು ನೋಡಿಕೊಂಡು ಸುಮ್ಮನಿದ್ದು ಕಳ್ಳರನ್ನು ರಕ್ಷಿಸಿದ ಎಂದು ಚುನಾವಣಾ ಆಯೋಗದ ವಿರುದ್ಧ ಕಿಡಿಕಾರಿದ್ದಾರೆ.

ಆಳಂದ ಚುನಾವಣೆ ಕುರಿತು ಮತ್ತೆ ಆಯೋಗದ ವಿರುದ್ಧ ರಾಹುಲ್‌ ವಾಗ್ದಾಳಿ

ನವದೆಹಲಿ: ಕರ್ನಾಟಕದ ಆಳಂದ ವಿಧಾನಸಭಾ ಚುನಾವಣೆಯಲ್ಲಿ ಭಾರೀ ಮತಗಳವು ಆಗಿದೆ ಎಂದು ಗುರುವಾರ ದಾಖಲೆಗಳನ್ನು ಮುಂದಿಟ್ಟು ಆರೋಪಿಸಿದ್ದ ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ಶುಕ್ರವಾರವೂ ತಮ್ಮ ಆರೋಪವನ್ನು ಪುನರುಚ್ಚರಿಸಿದ್ದಾರೆ. ಚುನಾವಣೆಯ ವೇಳೆ ಎಚ್ಚರವಿದ್ದ ಚುನಾವಣಾ ಕಾವಲುಗಾರ, ಕಳ್ಳತನವನ್ನು ನೋಡಿಕೊಂಡು ಸುಮ್ಮನಿದ್ದು ಕಳ್ಳರನ್ನು ರಕ್ಷಿಸಿದ ಎಂದು ಚುನಾವಣಾ ಆಯೋಗದ ವಿರುದ್ಧ ಕಿಡಿಕಾರಿದ್ದಾರೆ.

ಈ ಕುರಿತು ಶುಕ್ರವಾರ ಟ್ವೀಟ್‌ ಮಾಡಿರುವ ರಾಹುಲ್‌ ಗಾಂಧಿ, ‘ಬೆಳಗ್ಗೆ 4 ಗಂಟೆಗೆ ಎದ್ದು 36 ಸೆಕೆಂಡ್‌ಗಳಲ್ಲಿ ಇಬ್ಬರು ಮತದಾರರ ಹೆಸರು ಅಳಿಸಿಹಾಕಿ ಮತ್ತೆ ಹೋಗಿ ಮಲಗಿಕೊಳ್ಳಿ. ಇದು ಮತಗಳವು ನಡೆಯುವ ರೀತಿ. ಚುನಾವಣೆಯ ಕಾವಲುಗಾರ ಎಚ್ಚರವಿದ್ದ, ಕಳ್ಳತನವನ್ನು ನೋಡುತ್ತಿದ್ದ, ಕಳ್ಳರನ್ನು ರಕ್ಷಿಸುತ್ತಾ ಇದ್ದ’ ಎಂದು ಆಯೋಗದ ವಿರುದ್ಧ ವ್ಯಂಗ್ಯವಾಡಿದ್ದಾರೆ.

ಕರ್ನಾಟಕದ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ 2023ರ ಚುನಾವಣೆಗೂ ಮುನ್ನ ಕೇಂದ್ರೀಕೃತ (ಸೆಂಟ್ರಲೈಸ್ಡ್) ಸಾಫ್ಟ್‌ವೇರ್‌ ಬಳಸಿ, ವ್ಯವಸ್ಥಿತವಾಗಿ, ಗೆದು ಹಾಕುವ ಪ್ರಯತ್ನ ನಡೆಸಲಾಗಿತ್ತು. ಈ ಕುರಿತು ತನಿಖೆ ನಡೆಸುತ್ತಿರುವ ಕರ್ನಾಟಕದ ಸಿಐಡಿ ಪೊಲೀಸರಿಗೆ ಚುನಾವಣಾ ಆಯೋಗ ಮಾಹಿತಿಯನ್ನೇ ನೀಡುತ್ತಿಲ್ಲ. ಈ ಅಕ್ರಮ ಎಸಗಿದ ರೂವಾರಿಗಳ ಹೆಸರು ಬಯಲಿಗೆಳೆಯಲು ಇದರಿಂದ ಅಡ್ಡಿ ಆಗಿದೆ’ ಎಂದು ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಗುರುವಾರ ಆರೋಪ ಮಾಡಿದ್ದರು.

ಆದರೆ ಆರೋಪವನ್ನು ಕೇಂದ್ರ ಚುನಾವಣಾ ಆಯೋಗ, ಆಧಾರ ರಹಿತ ಎಂದು ಕರೆದಿತ್ತು, ಜೊತೆಗೆ ಸಾರ್ವಜನಿಕರು ಆನ್‌ಲೈನ್‌ ಮೂಲಕ ಇನ್ನೊಬ್ಬರ ಹೆಸರನ್ನು ಮತದಾರರ ಪಟ್ಟಿಯಿಂದ ಡಿಲೀಟ್‌ ಮಾಡಲು ಸಾಧ್ಯವಿಲ್ಲ ಎಂದೂ ಸ್ಪಷ್ಟನೆ ನೀಡಿತ್ತು.

==

ದೇಶದಲ್ಲಿ ಅರಾಜಕತೆ ಸೃಷ್ಟಿಗೆ ರಾಹುಲ್‌ ಯತ್ನ: ಬಿಜೆಪಿ ಕಿಡಿ

-ಕರ್ನಾಟಕದ ಆಳಂದದಲ್ಲಿ ಮತಚೋರಿ ಆರೋಪ ಮಾಡಿದ್ದ ರಾಗಾ

-ಚು. ಆಯೋಗದ ವಿರುದ್ಧ ರಾಗಾ ಹೇಳಿಕೆಗೆ ಬಿಜೆಪಿಗರ ಆಕ್ರೋಶ

-ಚುನಾವಣೆ ಸೋಲನ್ನು ಮರೆಮಾಚಲು ರಾಹುಲ್‌ ಆರೋಪ: ರಿಜಿಜು

-ತಮ್ಮದೇ ಪಕ್ಷದ ಅಭ್ಯರ್ಥಿ ಗೆಲುವಿನ ಬಗ್ಗೆ ರಾಹುಲ್‌ ಪ್ರಶ್ನೆ: ವ್ಯಂಗ್ಯ

ಪಟನಾ: ಕರ್ನಾಟಕದ ಆಳಂದ, ಮಹದೇವಪುರ ಸೇರಿದಂತೆ ಹಲವೆಡೆ ಬಿಜೆಪಿ ಜೊತೆ ಸೇರಿಕೊಂಡು ಚುನಾವಣಾ ಆಯೋಗ ಮತಗಳ್ಳತನ ನಡೆಸಿದೆ ಎಂಬ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಆರೋಪಕ್ಕೆ ಬಿಜೆಪಿ ಹಿರಿಯ ನಾಯಕ ರವಿಶಂಕರ್‌ ಪ್ರಸಾದ್‌ ಮತ್ತು ಕೇಂದ್ರ ಸಚಿವ ಕಿರಣ್‌ ರಿಜಿಜು ಆಕ್ರೋಶ ಹೊರಹಾಕಿದ್ದಾರೆ.ಈ ಬಗ್ಗೆ ಸುದ್ದಿಗಾರರ ಜೊತೆ ಮಾತನಾಡಿದ ರವಿಶಂಕರ್‌ ಪ್ರಸಾದ್‌, ‘ರಾಹುಲ್ ಗಾಂಧಿ ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಯತ್ನಿಸುತ್ತಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ. ಅವರ ಸರ್ಕಾರ ಏನು ಮಾಡುತ್ತಿತ್ತು? ಆಳಂದದಿಂದ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ. ರಾಹುಲ್ ತಮ್ಮದೇ ಪಕ್ಷದ ಶಾಸಕರ ಗೆಲುವಿನ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆಯೇ?’ ಎಂದು ಪ್ರಶ್ನಿಸಿದ್ದಾರೆ.

ರಾಹುಲ್‌ ಆರೋಪಕ್ಕೆ ಕಿಡಿ ಕಾರಿರುವ ಸಂಸದೀಯ ವ್ಯವಹಾರಗಳ ಸಚಿವ ಕಿರಣ್‌ ರಿಜಿಜು, ‘ಪಾಕಿಸ್ತಾನ ಯಾವ ಕಥನಗಳನ್ನು ಸೃಷ್ಟಿಸುತ್ತದೆಯೋ, ಅದೇ ಕಥನಗಳನ್ನು ರಾಹುಲ್ ಮತ್ತು ಅವರ ಕಂಪನಿ ಭಾರತದಲ್ಲಿ ಪ್ರಚಾರ ಮಾಡುತ್ತಿದೆ. ಚುನಾವಣೆಗಳಲ್ಲಿ ತಮ್ಮ ಸೋಲನ್ನು ಮರೆಮಾಚಲು ರಾಹುಲ್‌ ಯಾವುದೇ ಸಂಸ್ಥೆಯನ್ನು ಗುರಿಯಾಗಿಸಲು ಅಥವಾ ಗಮನವನ್ನು ಬೇರೆಡೆ ಸೆಳೆಯಲು ಸಾಧ್ಯವಿಲ್ಲ’ ಎಂದಿದ್ದಾರೆ.

==

ರಾಗಾ ಮೊಬೈಲ್‌ ನಂಬರ್‌ ಬಿಡುಗಡೆ ಬಳಿಕ ಯುಪಿ ವ್ಯಕ್ತಿಗೆ 300 ಕರೆ!

-ಮತಚೋರಿ ದಾಖಲೆ ಬಿಡುಗಡೆ ವೇಳೆ ರಾಗಾ ಎಡವಟ್ಟು

- ರಾಹುಲ್‌ ವಿರುದ್ಧ ಅಂಜನಿ ಮಿಶ್ರಾ ಆರೋಪ, ದೂರು

ಪ್ರಯಾಗ್‌ರಾಜ್‌: ಆಳಂದ ಮತಗಳವು ಆರೋಪದ ಕುರಿತು ಗುರುವಾರ ರಾಹುಲ್‌ ಗಾಂಧಿ ನಡೆಸಿದ ಪತ್ರಿಕಾಗೋಷ್ಠಿ ವೇಳೆ ಬಹಿರಂಗಪಡಿಸಿದ ಮೊಬೈಲ್‌ ಸಂಖ್ಯೆಒಂದು ಉತ್ತರ ಪ್ರದೇಶದ ಅಂಜನಿ ಮಿಶ್ರಾಗೆ ಸೇರಿದ್ದು ಎಂದು ಬೆಳಕಿಗೆ ಬಂದಿದೆ. ರಾಹುಲ್‌ ಆರೋಪದ ಬೆನ್ನಲ್ಲೇ ತನಗೆ 300ಕ್ಕೂ ಹೆಚ್ಚು ಕರೆಗಳು ಬಂದಿದ್ದು, ನನ್ನ ಮೊಬೈಲೇ ನನಗೆ ಸಮಸ್ಯೆಯಾಗಿ ಮಾರ್ಪಟ್ಟಿದೆ. ರಾಹುಲ್‌ ಗಾಂಧಿ ವಿರುದ್ಧ ಶೀಘ್ರದಲ್ಲೇ ಪೊಲೀಸರಿಗೆ ದೂರು ದಾಖಲಿಸುತ್ತೇನೆ’ ಎಂದು ಪ್ರಯಾಗ್‌ರಾಜ್‌ ನಿವಾಸಿ ಮಿಶ್ರಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಈ ಬಗ್ಗೆ ಸುದ್ದಿಗಾರರ ಬಳಿ ಅಳಲು ತೋಡಿಕೊಂಡ ಮಿಶ್ರಾ, ‘ನಾನು ಕಳೆದ 15 ವರ್ಷಗಳಿಂದ ಈ ಮೊಬೈಲ್ ಸಂಖ್ಯೆ ಬಳಸುತ್ತಿದ್ದೇನೆ. ರಾಹುಲ್ ಗಾಂಧಿ ತಮ್ಮ ಪತ್ರಿಕಾಗೋಷ್ಠಿಯಲ್ಲಿ ನನ್ನ ಸಂಖ್ಯೆಯನ್ನು ಹೇಗೆ ಹಂಚಿಕೊಂಡರೋ ನನಗೆ ತಿಳಿದಿಲ್ಲ. ಈಗ ನನ್ನ ಮೊಬೈಲ್ ಫೋನೇ ನನಗೆ ಸಮಸ್ಯೆಯಾಗಿದೆ. ನಿನ್ನೆ ಸಂಜೆಯಿಂದ ಮತಗಳ್ಳತನದ ಬಗ್ಗೆ ಪ್ರಶ್ನಿಸಿ ನನಗೆ 300ಕ್ಕೂ ಹೆಚ್ಚು ಕರೆಗಳು ಬಂದಿವೆ. ಇದರಿಂದ ನನಗೆ ಬೇಸರವಾಗಿದೆ. ಶೀಘ್ರದಲ್ಲೇ ರಾಹುಲ್ ವಿರುದ್ಧ ದೂರು ದಾಖಲಿಸುತ್ತೇನೆ’ ಎಂದಿದ್ದಾರೆ.ಈ ಹಿಂದೆ ಇದೇ ರೀತಿಯ ಪತ್ರಿಕಾಗೋಷ್ಠಿ ವೇಳೆ ರಾಹುಲ್‌ ಬಹಿರಂಗಪಡಿಸಿದ ಮಾಹಿತಿಯಿಂದ ತನ್ನ ಖಾಸಗಿತನಕ್ಕೆ ಧಕ್ಕೆ ಬಂದಿದೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದರು.