ಉತ್ತರ ನೀಡುವುದು ಚುನಾವಣಾ ಆಯೋಗದ ಜವಾಬ್ದಾರಿ: ವಿನಯ್ ಕುಮಾರ್ ಸೊರಕೆ

| Published : Sep 04 2025, 01:01 AM IST

ಸಾರಾಂಶ

ಶ್ಯಾಡೋ ಪ್ರೈಮ್‌ ಮಿನಿಸ್ಟರ್‌ ರಾಹುಲ್‌ ಗಾಂಧಿ ಅವರು ಮಾಡಿರುವ ಆರೋಪಗಳಿಗೆ ಉತ್ತರ ನೀಡುವುದು ಚುನಾವಣಾ ಆಯೋಗದ ಜವಾಬ್ದಾರಿ ಎಂದು ವಿನಯ್‌ ಕುಮಾರ್‌ ಸೊರಕೆ ಹೇಳಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಶ್ಯಾಡೋ ಪ್ರೈಮ್ ಮಿನಿಸ್ಟರ್ ರಾಹುಲ್ ಗಾಂಧಿ ಅವರು ಮಾಡಿರುವ ಆರೋಪಗಳಿಗೆ ಉತ್ತರ ನೀಡುವುದು ಚುನಾವಣಾ ಆಯೋಗದ ಜವಾಬ್ದಾರಿ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯ್ ಕುಮಾರ್ ಸೊರಕೆ ಹೇಳಿದ್ದಾರೆ.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಡಿಯಲ್ಲಿ ಪ್ರತಿಯೊಬ್ಬರು ಮತದಾನದ ಹಕ್ಕು ಕಳೆದುಹೋಗದಂತೆ ನೋಡಿಕೊಳ್ಳುವುದು ಅವಶ್ಯಕವಾಗಿದೆ. ರಾಹುಲ್ ಗಾಂಧಿ ಅವರು ಮಾಡಿರುವ ಮತಗಳ್ಳತನದ ಆರೋಪಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗ ಮತಪಟ್ಟಿಯಿಂದ ತೆಗೆದು ಹಾಕಿರುವ ಸುಮಾರು 65 ಲಕ್ಷ ಮತಗಳ ಬಗ್ಗೆ ಮಾಹಿತಿಯನ್ನು ಸರ್ವೋಚ್ಚ ನ್ಯಾಯಾಲಯಕ್ಕೆ ನೀಡಿದೆ.

ಆದರೆ ಇದರ ಬಗ್ಗೆ ನ್ಯಾಯಾಲಯ ಇನ್ನಷ್ಟೇ ತನ್ನ ಅಭಿಪ್ರಾಯವನ್ನು ತಿಳಿಸಬೇಕಿದೆ ಎಂದು ಹೇಳಿದರು.

ಮತಗಳ್ಳತನದ ಕುರಿತು ರಾಹುಲ್ ಗಾಂಧಿ ಅವರು ವಿವರವಾಗಿ ಸಂಸತ್ ನಲ್ಲಿ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಈ ಬಗ್ಗೆ ಜನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ 1800 ಕಿ.ಮೀ ಬೃಹತ್ ಪಾದಯಾತ್ರೆಗೆ ಚಾಲನೆ‌ ನೀಡಿದ್ದಾರೆ. ರಾಹುಲ್ ಗಾಂಧಿ ಅವರ ಗಂಭೀರ ಆರೋಪಕ್ಕೆ ಚುನಾವಣಾ ಆಯೋಗ ಉತ್ತರ ನೀಡಬೇಕಿದೆ ಎಂದರು.

ಧರ್ಮಸ್ಥಳದಲ್ಲಿ ಎಸ್ಐಟಿ ತನಿಖೆಯಿಂದ ಅಪಮಾನ ಆಗುತ್ತಿದೆ ಎಂದು ಬಿಜೆಪಿ ಪ್ರತಿಭಟನೆಗೆ ಪ್ರತಿಕ್ರಿಯಿಸಿದ ಸೊರಕೆ ಅವರು, ಬಿಜೆಪಿ ಪ್ರತಿಭಟನೆ ಬಿ. ಎಲ್ ಸಂತೋಷ್ ಮತ್ತು ಯಡಿಯೂರಪ್ಪ ಬಣದ ಜಗಳದಿಂದ ನಡೆಯುತ್ತಿರುವ ಹೋರಾಟ. ಧಾರ್ಮಿಕ ವಿಷಯಗಳಲ್ಲಿ ಸಣ್ಣಪುಟ್ಟ ವಿಚಾರವಾದರೂ ಕಲ್ಲಡ್ಕ ಪ್ರಭಾಕರ ಭಟ್ ಮಧ್ಯಪ್ರವೇಶಿಸುತ್ತಿದ್ದರು. ಆದರೂ ಈಗ ಯಾಕೆ ಅವರು ಎಲ್ಲೂ ಮಧ್ಯೆ ಪ್ರವೇಶಿಸಿಲ್ಲ. ಹಾಗಾದರೆ ಪ್ರಭಾಕರ್ ಭಟ್ ಯಾರ ಕಡೆ ಇದ್ದಾರೆ ಎಂದು ಪ್ರಶ್ನಿಸಿದರು.

13 ಗುಂಡಿಗಳ ಅಗೆದ ಬಳಿಕ ಸಂತೋಷ್ ಅವರು ಧರ್ಮಸ್ಥಳದ ಪಾವಿತ್ರ್ಯತೆ ಕಾಪಾಡಿ ಎನ್ನಲು ಶುರು ಮಾಡಿದರು. ಹಾಗಾದರೆ ಇದು ಪ್ರಭಾಕರ್ ಭಟ್ ಮತ್ತು ಬಿ. ಎಲ್ ಸಂತೋಷ್ ಅವರ ಹೋರಾಟನಾ? ರಾಜ್ಯದಲ್ಲಿ ಪ್ರಭಾಕರ್ ಭಟ್ ಯಡಿಯೂರಪ್ಪನವರ ಪರ. ಬಿ. ಎಲ್ ಸಂತೋಷ್ ಯಡಿಯೂರಪ್ಪನವರ ವಿರುದ್ಧ. ಈ ರೀತಿ ಪ್ರಕ್ರಿಯೆ ನಡೆಯುತ್ತಲೇ ಇದೆ ಎಂದು ಆರೋಪಿಸಿದರು.

ನಮ್ಮ ಪಕ್ಷದ ನಿಲುವು:

ಎಸ್ಐಟಿ ತನಿಖೆ ಮಾಡಿರುವುದು ನಮ್ಮ ಪಕ್ಷದ ನಿಲುವು ಎಂದ ವಿನಯ್ ಕುಮಾರ್ ಸೊರಕೆ, ಒಬ್ಬ ಅನಾಮಿಕ ಬಂದು ದೂರು ಕೊಟ್ಟ. ನ್ಯಾಯಾಲಯ ತನಿಖೆಗೆ ಸೂಚಿಸಿತು‌..ಸರ್ಕಾರ ನ್ಯಾಯಯುತ ತನಿಖೆ ಆಗಬೇಕು ಎಂದು ಎಸ್ಐಟಿ ರಚಿಸಿದೆ. ಅದು ಕೂಡ ನಿಷ್ಠಾವಂತ ಅಧಿಕಾರಿಗಳ ತಂಡವನ್ನು ತನಿಖೆಗೆ ನೇಮಿಸಿದೆ. ಈಗ ಅಂತಿಮ ವರದಿಯನ್ನು ಕೊಡಲು ಬರಲ್ಲ ಎಂದು ಗೃಹ ಸಚಿವರು ಹೇಳಿದ್ದಾರೆ.

ಎಫ್ಎಸ್ಎಲ್ ವರದಿ ಬಂದ ಬಳಿಕ ಕೊಡುವುದಾಗಿ ಹೇಳಿದ್ದಾರೆ. ಎಸ್ಐಟಿ ಈಗ ತನಿಖೆ ಮಾಡುತ್ತಿದೆ ಎಂದು ಹೇಳಿದರು.

ಅದರಲ್ಲಿ ತಪ್ಪೇನಿದೆ:

ಅಧಿವೇಶನದಲ್ಲಿ ಡಿಕೆಶಿ ಆರ್ ಎಸ್ ಎಸ್ ಗೀತೆಯನ್ನು ಹೇಳಿದ ವಿಚಾರಕ್ಕೆ ಅದರಲ್ಲಿ ತಪ್ಪೇನಿದೆ ಎಂದು ಸರ್ಮರ್ಥಿಸಿಕೊಂಡರು. ಹಿಂದೂ ಧರ್ಮದಲ್ಲಿ ವಸುದೈವ ಕುಟುಂಬಕಂ ಎಂಬ ನಂಬಿಕೆ ಇದೆ. ಅದೇ ರೀತಿ ಡಿಕೆಶಿ ಅವರು ಹೇಳಿದ್ದಾರೆ. ಅದರಲ್ಲಿ ತಪ್ಪೇನಿದೆ ಎಂದರು.

ಆದರೆ ಕಾಂಗ್ರೆಸ್ ನವರ ಕೆಲವರು ವಿರೋಧ ಮಾಡಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ಪಕ್ಷದಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳಿರುತ್ತವೆ.

ಐದು ಬೆರಳು ಒಂದೇ ಸಮ ಇರುವುದಿಲ್ಲ ಅಲ್ಲವೇ. ಐದು ಬೆರಳು ಒಂದಾಗಬೇಕಲ್ಲವೇ ಎಂದ ಅವರು ವಿರೋಧ ಪಕ್ಷದಲ್ಲಿ ಎಲ್ಲವೂ ಸರಿ ಇದೆಯೇ ಎಂದು ಪ್ರಶ್ನಿಸಿದರು.

ಈ ಸಂದರ್ಭ ಕೆಪಿಸಿಸಿ ಪ್ರಚಾರ ಸಮಿತಿ ರಾಜ್ಯ ಉಪಾಧ್ಯಕ್ಷ ಲೋಬೋ, ಸಂಯೋಜಕರಾದ ಫಾರೂಕ್, ಮುಖ್ಯ ಸಂಯೋಜಕ ಜಾನ್, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಟಿ.ಪಿ. ರಮೇಶ್ ಮತ್ತಿತರರು ಇದ್ದರು.