ಆಳಂದ ಚುನಾವಣಾ ಅಕ್ರಮ ತನಿಖೆ ಕಾಂಗ್ರೆಸ್‌ನಿಂದ ಮತ್ತೆ ಟಾರ್ಗೆಟ್‌ ಆಯೋಗ

| Published : Sep 08 2025, 01:00 AM IST

ಸಾರಾಂಶ

ಕಳೆದ ಲೋಕಸಭಾ ಚುನಾವಣೆಯಲ್ಲಿ ಭಾರೀ ಮತಗಳವು ಪ್ರಕರಣ ನಡೆದಿದೆ. ಇದಕ್ಕೆ ಚುನಾವಣಾ ಆಯೋಗವೂ ಸಹಕಾರ ನೀಡಿದೆ ಎಂದು ಇತ್ತೀಚೆಗೆ ಸರಣಿ ಆರೋಪ ಮಾಡಿದ್ದ ಕಾಂಗ್ರೆಸ್‌, ಮತ್ತೆ ಚುನಾವಣಾ ಆಯೋಗವನ್ನು ಟಾರ್ಗೆಟ್ ಮಾಡಿದೆ. ಈ ಬಾರಿ ಅದು 2023ರಲ್ಲಿ ಕರ್ನಾಟಕದ ಆಳಂದ ವಿಧಾನಸಭಾ ಚುನಾವಣೆಯನ್ನು ಉಲ್ಲೇಖಿಸಿ ಕೇಂದ್ರ ಚುನಾವಣಾ ಆಯೋಗದ ವಿರುದ್ಧ, ಆರೋಪಿಗಳ ರಕ್ಷಣೆಗೆ ನಿಂತ ಗಂಭೀರ ಆರೋಪ ಮಾಡಿದೆ.

- ಮಾಹಿತಿ ಹಂಚಿಕೆಗೆ ಆಯೋಗ ನಕಾರ: ಖರ್ಗೆ- ವಂಚಕರಿಗೆ ಆಯೋಗದ ರಕ್ಷಣೆ ಏಕೆ?: ಸಿದ್ದು

===

2019ರ ನನ್ನ ಸೋಲಿಗೆ

ಇವಿಎಂ ಕಾರಣ: ಖರ್ಗೆ

- ಮೋದಿ ಮಾತಿಂದ ಅನುಮಾನ ಬಲ

ಕನ್ನಡಪ್ರಭ ವಾರ್ತೆ ಕಲಬುರಗಿ

2019ರ ಲೋಕಸಭಾ ಚುನಾವಣೆಯಲ್ಲಿ ಕಲಬುರಗಿಯಲ್ಲಿ ನನ್ನ ಸೋಲಿಗೆ ಇವಿಎಂ ಕಾರಣ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪುನರುಚ್ಚರಿಸಿದ್ದಾರೆ. ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನನ್ನ ಅಭಿವೃದ್ಧಿ ಕಾರ್ಯಗಳಿಗೆ ಜನಮನ್ನಣೆ ಇತ್ತು. ಹೀಗಾಗಿ, ಗೆಲ್ಲುತ್ತೇನೆಂಬ ವಿಶ್ವಾಸವಿತ್ತು. ಆದರೆ, ನನ್ನ ನಿರೀಕ್ಷೆ ಹುಸಿಯಾಯಿತು. ಲೋಕಸಭಾ ಕ್ಷೇತ್ರವ್ಯಾಪ್ತಿಯ 5-6 ವಿಧಾನಸಭಾ ಕ್ಷೇತ್ರಗಳಲ್ಲಿ ಬೋಗಸ್ ಮತದಾನ ನಡೆದಿತ್ತು. ನಮ್ಮ ಕಣ್ಣೆದುರೆ ಮೋಸ ಆಗಿದೆ. ಸಂಸತ್‌ನಲ್ಲಿ ಪ್ರಧಾನಿ ಮೋದಿ ಅವರು, ‘ಖರ್ಗೆ ಬಹುತ್ ಬಾರ್ ಜೀತೆ’ ಅಂತಾ ಹೇಳಿದ್ರು. ಪಾರ್ಲಿಮೆಂಟ್‌ನಲ್ಲೇ ಮೋದಿ ಈ ರೀತಿ ಹೇಳಿದ ಮೇಲೆ ನನಗೆ ಬಲವಾದ ಅನುಮಾನ ಬಂದಿದೆ. ಕಳೆದ ಲೋಖಸಭಾ ಚುನಾವಣೆಯಲ್ಲೂ ದೇಶದ ವಿವಿಧೆಡೆ, ರಾಜ್ಯದ ವಿವಿಧೆಡೆ ಈ ರೀತಿಯ ಓಟ್ ಚೋರಿ ಆಗಿದೆ’ ಎಂದು ಖರ್ಗೆ ಆರೋಪಿಸಿದರು.

----

ಪಿಟಿಐ ನವದೆಹಲಿ/ ಬೆಂಗಳೂರು

ಕಳೆದ ಲೋಕಸಭಾ ಚುನಾವಣೆಯಲ್ಲಿ ಭಾರೀ ಮತಗಳವು ಪ್ರಕರಣ ನಡೆದಿದೆ. ಇದಕ್ಕೆ ಚುನಾವಣಾ ಆಯೋಗವೂ ಸಹಕಾರ ನೀಡಿದೆ ಎಂದು ಇತ್ತೀಚೆಗೆ ಸರಣಿ ಆರೋಪ ಮಾಡಿದ್ದ ಕಾಂಗ್ರೆಸ್‌, ಮತ್ತೆ ಚುನಾವಣಾ ಆಯೋಗವನ್ನು ಟಾರ್ಗೆಟ್ ಮಾಡಿದೆ. ಈ ಬಾರಿ ಅದು 2023ರಲ್ಲಿ ಕರ್ನಾಟಕದ ಆಳಂದ ವಿಧಾನಸಭಾ ಚುನಾವಣೆಯನ್ನು ಉಲ್ಲೇಖಿಸಿ ಕೇಂದ್ರ ಚುನಾವಣಾ ಆಯೋಗದ ವಿರುದ್ಧ, ಆರೋಪಿಗಳ ರಕ್ಷಣೆಗೆ ನಿಂತ ಗಂಭೀರ ಆರೋಪ ಮಾಡಿದೆ.

ಆಳಂದ ಅಕ್ರಮದ ಕುರಿತು ಸಿಐಡಿ ತನಿಖೆ ನಡೆಸುತ್ತಿದ್ದ ಕೇಂದ್ರ ಚುನಾವಣಾ ಆಯೋಗ ಸೂಕ್ತ ಸಾಕ್ಷ್ಯಗಳನ್ನು ನೀಡದೇ ತನಿಖೆಗೆ ಅಡ್ಡಿಯಾಗಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದರೆ, ಇನ್ನೊಂದೆಡೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಕೂಡಾ ‘ಚುನಾವಣಾ ಆಯೋಗ ಸ್ವತಂತ್ರ್ಯ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆಯೋ ಅಥವಾ ಬಿಜೆಪಿಯ ಮತಗಳವು ಸಕ್ರಮಗೊಳಿಸುವ ತೆರೆಮರೆಯ ಕಚೇರಿ ರೀತಿ ಕಾರ್ಯನಿರ್ವಹಿಸುತ್ತಿದೆಯೋ ಎಂದು ಪ್ರಶ್ನಿಸಿದ್ದಾರೆ.

ಖರ್ಗೆ ಆರೋಪ:

‘ಕಳೆದ ವಿಧಾನಸಭಾ ಚುನಾವಣೆಗೂ ಮುನ್ನ 2023ರಲ್ಲಿ ಕರ್ನಾಟಕ ಕಲಬುರಗಿ ಜಿಲ್ಲೆ ಆಳಂದದಲ್ಲಿ ನಡೆದಿದ್ದ ಮತದಾರ ಹೆಸರು ರದ್ದತಿ ಪ್ರಕರಣದ ಸಿಐಡಿ ತನಿಖೆಗೆ ಚುನಾವಣಾ ಆಯೋಗವೇ ಅಡ್ಡಗೋಡೆಯಾಗಿ ನಿಂತಿದೆ. ಈ ಮೂಲಕ ಪ್ರಕರಣದ ಹಿಂದಿರುವವರ ರಕ್ಷಣೆಗೆ ಚುನಾವಣಾ ಆಯೋಗ ಮುಂದಾಗಿದೆ. ತನಿಖಾ ತಂಡಕ್ಕೆ ಪೂರ್ಣ ಸಾಕ್ಷ್ಯಾಧಾರ ನೀಡುತ್ತಿಲ್ಲ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗಂಭೀರ ಆರೋಪ ಮಾಡಿದ್ದಾರೆ.‘2023ರ ವಿಧಾನಸಭಾ ಚುನಾವಣೆಗೂ ಮೊದಲು ಆಳಂದದಲ್ಲಿ ಫಾರ್ಮ್‌ 7 ಬಳಸಿಕೊಂಡು ಮತದಾರರ ಪಟ್ಟಿಯಿಂದ ತಮ್ಮ ಹೆಸರು ತೆಗೆಯಿರಿ ಎಂದು 6,018 ಅರ್ಜಿಗಳು ಸಲ್ಲಿಕೆಯಾಗಿದ್ದವು. ಅದರಲ್ಲಿ 24 ಮಾತ್ರ ನೈಜವಾಗಿದ್ದವು. ಉಳಿದ 5,994 ಅರ್ಜಿಗಳನ್ನು ನೈಜ ಮತದಾರರ ಹೆಸರಲ್ಲಿ ಅಕ್ರಮವಾಗಿ ಸಲ್ಲಿಸಲಾಗಿತ್ತು ಎಂದು ಚುನಾವಣಾಧಿಕಾರಿಗಳ ಪರಿಶೀಲನೆ ವೇಳೆ ಗೊತ್ತಾಗಿತ್ತು. ಬಳಿಕ ಪ್ರಕರಣದ ಬಗ್ಗೆ ಆಳಂದ ಕಾಂಗ್ರೆಸ್‌ ಅಭ್ಯರ್ಥಿ ಬಿ.ಆರ್‌. ಪಾಟೀಲ್‌ ದೂರು ನೀಡಿದ್ದರು. ನಂತರದ ಕಾಂಗ್ರೆಸ್‌ ಸರ್ಕಾರ ಈ ಬಗ್ಗೆ ಸಿಐಡಿ ತನಿಖೆಗೆ ಆದೇಶಿಸಿತ್ತು. ಆದರೆ, ಪ್ರಕರಣದ ಮಹತ್ವದ ಸಾಕ್ಷ್ಯಗಳನ್ನು ಕೇಂದ್ರ ಚುನಾವಣಾ ಆಯೋಗವು ಈವರೆಗೆ ತನಿಖಾ ಸಂಸ್ಥೆ ಜತೆ ಹಂಚಿಕೊಂಡಿಲ್ಲ. ಹೀಗಾಗಿ ಸಿಐಡಿ ತನಿಖೆಗೆ ಗ್ರಹಣ ಹಿಡಿದಿದೆ’ ಎಂದು ಭಾನುವಾರ ಆಂಗ್ಲಪತ್ರಿಕೆಯೊಂದು ವರದಿ ಮಾಡಿತ್ತು. ಈ ವರದಿಯನ್ನು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಂಡು ಖರ್ಗೆ ಆರೋಪ ಮಾಡಿರುವ ಖರ್ಗೆ, ‘ಈ ಅಕ್ರಮದ ಕುರಿತು ಕೇಂದ್ರ ಚುನಾವಣಾ ಆಯೋಗವು ಸಿಐಡಿ ಜತೆಗೆ ಭಾಗಶಃ ಸಾಕ್ಷ್ಯಗಳನ್ನು ಮಾತ್ರ ಹಂಚಿಕೊಂಡಿದೆ. ಈ ಮೂಲಕ ಮತಕಳ್ಳತನದ ಹಿಂದಿರುವವರನ್ನು ಪರಿಣಾಮಕಾರಿಯಾಗಿ ರಕ್ಷಿಸುವ ಕೆಲಸ ಮಾಡಿದೆ. ಕೇಂದ್ರ ಚುನಾವಣೆ ಆಯೋಗವು ದಿಢೀರ್‌ ಆಗಿ ಏಕೆ ಸಾಕ್ಷ್ಯಾಧಾರಗಳನ್ನು ತಡೆಹಿಡಿದಿದೆ? ಬಿಜೆಪಿಯ ‘ಮತಕಳವು ಇಲಾಖೆ’ಯನ್ನು ಯಾರು ರಕ್ಷಿಸುತ್ತಿದ್ದಾರೆ? ಕೇಂದ್ರ ಚುನಾವಣಾ ಆಯೋಗವು ಸಿಐಡಿ ತನಿಖೆ ವಿಚಾರದಲ್ಲಿ ಬಿಜೆಪಿ ಒತ್ತಡಕ್ಕೆ ಮಣಿದಿದೆಯೇ? ಎಂದು ಪ್ರಶ್ನಿಸಿದ್ದಾರೆ.

ಇದಲ್ಲದೆ, ‘ಭಾರತೀಯ ಚುನಾವಣಾ ಆಯೋಗವು ಬಿಜೆಪಿಯ ಮತಗಳವನ್ನು ಬೆಂಬಲಿಸುವ ಆಯೋಗವಾಗಿ ಪರಿಣಮಿಸಿದೆಯೇ?’ ಎಂದೂ ಪ್ರಶ್ನಿಸಿರುವ ಅವರು, ‘ಪ್ರತಿಯೊಬ್ಬರ ಮತದಾನದ ಹಕ್ಕು ರಕ್ಷಣೆಯಾಗಬೇಕು, ಭಾರತದ ಸಂವಿಧಾನ ರಕ್ಷಣೆಯಾಗಬೇಕು’ ಎಂದಿದ್ದಾರೆ.