ವಿಜಯದಶಮಿ ಧರ್ಮ, ಜ್ಞಾನ, ವಿಜಯದ ಸಂಕೇತ

| Published : Oct 03 2025, 01:07 AM IST

ಸಾರಾಂಶ

ನವರಾತ್ರಿ ಆಚರಣೆ ಅಂದರೆ ದೇವಿಯ ಆರಾಧನೆ ಮೂಲಕ ಮನಸ್ಸಿನಲ್ಲಿ ಶಕ್ತಿ, ಶಾಂತಿ, ಜ್ಞಾನ ಹಾಗೂ ಧೈರ್ಯ ಬೆಳೆಸಿಕೊಳ್ಳುವುದು

ಹನುಮಸಾಗರ: ವಿಜಯದಶಮಿ ಅಂದರೆ ಅಧರ್ಮ, ಅಜ್ಞಾನ, ಅಹಂಕಾರ, ಕ್ರೌರ್ಯ, ಅನ್ಯಾಯ ಇತ್ಯಾದಿ ಅಸುರ ಸ್ವಭಾವಗಳ ಮೇಲೆ ಸತ್ಯ, ಧರ್ಮ, ಜ್ಞಾನ, ಶಾಂತಿ, ಧೈರ್ಯಗಳ ವಿಜಯದ ಸಂಕೇತವಾಗಿದೆ ಎಂದು ಪ್ರವಚನಕಾರ ಏಕನಾಥ ಮೆದಿಕೇರಿ ಹೇಳಿದರು.

ಪಟ್ಟಣದ ಶ್ರೀ ಜಗದಂಬಾ ದೇವಸ್ಥಾನದಲ್ಲಿ ಗುರುವಾರ ದೇವಿಪುರಾಣ ಮಹಾಮಂಗಲ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರಾವಣನಂತೆ ದುಷ್ಟ ಗುಣಗಳನ್ನು ಸುಟ್ಟುಹಾಕಿ, ರಾಮನಂತೆ ಸತ್ಯ-ಧರ್ಮವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಈ ಹಬ್ಬದ ನಿಜವಾದ ಅರ್ಥ. ದಶಮಿಯ ಪವಿತ್ರ ದಿನದಲ್ಲಿ ಜಗತ್ತಿನಲ್ಲಿ ಅಸುರ ಎಂದರೆ ಹೊರಗೆ ಇರುವವನು ಅಲ್ಲ, ನಮ್ಮೊಳಗೇ ಅಡಗಿರುವ ಅಹಂಕಾರ, ಕ್ರೌರ್ಯ, ಅಜ್ಞಾನ. ಅವನ್ನು ಸಂಹರಿಸಲು ದೇವಿಯ ಶಕ್ತಿ, ಭಕ್ತಿ, ಧೈರ್ಯ ಮತ್ತು ಜ್ಞಾನವೇ ಸಹಾಯ ಮಾಡುತ್ತದೆ ಎಂದು ಹೇಳಿದರು.

ನವರಾತ್ರಿ ಆಚರಣೆ ಅಂದರೆ ದೇವಿಯ ಆರಾಧನೆ ಮೂಲಕ ಮನಸ್ಸಿನಲ್ಲಿ ಶಕ್ತಿ, ಶಾಂತಿ, ಜ್ಞಾನ ಹಾಗೂ ಧೈರ್ಯ ಬೆಳೆಸಿಕೊಳ್ಳುವುದು. ಚಂಡಿ ಹೋಮ, ಪಾರಾಯಣ, ದೇವಿ ಮಹಿಮೆಗಳನ್ನು ಕೀರ್ತಿಸುವ ಮೂಲಕ ಜನಜೀವನದಲ್ಲಿ ಸಕಾರಾತ್ಮಕತೆ ಬೆಳೆಯುತ್ತದೆ. ದೇವಿಯ ಶರಣಾಗತಿ ಪಡೆದರೆ ಜೀವನದಲ್ಲಿನ ಎಲ್ಲ ಅಡಚಣೆಗಳು ನಿವಾರಣೆಯಾಗುತ್ತವೆ ಎಂದರು.

ಕಾರ್ಯಕ್ರಮದಲ್ಲಿ ಸಮಾಜದ ಅಧ್ಯಕ್ಷ ಭಗೀರತಥಸಾ ಪಾಟೀಲ, ಮಾಜಿ ಅಧ್ಯಕ್ಷ ಮಾರುತಿಸಾ ರಂಗ್ರೇಜ, ತಬಲಾ ವಾದಕ ಶಂಕರ ಬಸೂದೆ, ಹಾರ್ಮೋನಿಯಂ ವಾದಕ ವಿನೋದ ಪಾಟೀಲ, ತರುಣ ಸಂಘದವರು ಹಾಗೂ ಮಹಿಳಾ ಮಂಡಳಿಯವರು ಇತರರು ಇದ್ದರು.