ಡಿ.ಕೆ.ಶಿವಕುಮಾರ್‌ ಸಿಎಂ ಆಗಲೆಂದು ಶಾಸಕ ರಂಗನಾಥ್‌ ನವರಾತ್ರಿ ಉಪವಾಸ!

| N/A | Published : Oct 03 2025, 07:32 AM IST

MLA Ranganath
ಡಿ.ಕೆ.ಶಿವಕುಮಾರ್‌ ಸಿಎಂ ಆಗಲೆಂದು ಶಾಸಕ ರಂಗನಾಥ್‌ ನವರಾತ್ರಿ ಉಪವಾಸ!
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲಿ ಸಿಎಂ ಬದಲಾವಣೆ ಕುರಿತು ಚರ್ಚೆ ನಡೆಯುತ್ತಿರುವ ಹೊತ್ತಿನಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರ ಆಪ್ತ ಶಾಸಕ ಡಾ. ರಂಗನಾಥ್ ಅವರು ಡಿಕೆಶಿ ಮುಖ್ಯಮಂತ್ರಿ ಆಗಲೆಂದು ನವರಾತ್ರಿಯ 9 ದಿನಗಳ ಕಾಲ ಉಪವಾಸ ವ್ರತ ಮಾಡಿದ್ದಾರೆ.

  ಕುಣಿಗಲ್ :  ರಾಜ್ಯದಲ್ಲಿ ಸಿಎಂ ಬದಲಾವಣೆ ಕುರಿತು ಚರ್ಚೆ ನಡೆಯುತ್ತಿರುವ ಹೊತ್ತಿನಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರ ಆಪ್ತ ಶಾಸಕ ಡಾ. ರಂಗನಾಥ್ ಅವರು ಡಿಕೆಶಿ ಮುಖ್ಯಮಂತ್ರಿ ಆಗಲೆಂದು ನವರಾತ್ರಿಯ 9 ದಿನಗಳ ಕಾಲ ಉಪವಾಸ ವ್ರತ ಮಾಡಿದ್ದಾರೆ.

ತಾಲೂಕಿನ ವಗರಗೆರೆ ಗ್ರಾಮದ ದಲಿತ ಮಹಿಳೆ ಜಯಮ್ಮ ಎಂಬುವರ ಮನೆಯಲ್ಲಿ ಗುರುವಾರ ಮುದ್ದೆ ಸಾರು ಊಟ ಮಾಡಿ ಉಪವಾಸ ಅಂತ್ಯಗೊಳಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ನವರಾತ್ರಿಯಂದು ಹಲವರು ಸಂಕಲ್ಪ ಮಾಡಿ ಉಪವಾಸ ಮಾಡುವ ಮೂಲಕ ಶಕ್ತಿ ದೇವತೆಗಳಿಂದ ವರ ಪಡೆಯುತ್ತಾರೆ. ಅದೇ ರೀತಿ ನಾನು 3 ಸಂಕಲ್ಪ ಮಾಡಿ 9 ದಿನಗಳ ಕಾಲ ಉಪವಾಸ ಮಾಡಿದ್ದೆ. ಅದರಲ್ಲಿ ನಮ್ಮ ಮನೆಯ ಮುಖ್ಯಸ್ಥರಿಗೆ ಈ ರಾಜ್ಯದ ಉನ್ನತ ಹುದ್ದೆ ಸಿಗಬೇಕು ಎಂಬ ಸಂಕಲ್ಪವೂ ಒಂದಾಗಿದೆ ಎಂದು ಪರೋಕ್ಷವಾಗಿ ಡಿಕೆಶಿ ಸಿಎಂ ಆಗಲು ವ್ರತ ಮಾಡಿದ್ದಾಗಿ ತಿಳಿಸಿದರು. ಕುಣಿಗಲ್ ತಾಲೂಕಿನಲ್ಲಿ ಹೆಚ್ಚಾಗಿ ಕಾಡುತ್ತಿರುವ ನಿರುದ್ಯೋಗ ಸಮಸ್ಯೆ ನಿವಾರಣೆಯಾಗಲಿ, ಕುಣಿಗಲ್‌ಗೆ ಲಿಂಕ್ ಕೆನಾಲ್ ಕಾಮಗಾರಿಯನ್ನು ಪೂರ್ಣಗೊಳಿಸಬೇಕೆಂಬ ಸಂಕಲ್ಪವನ್ನೂ ಮಾಡಿದ್ದಾಗಿ ಶಾಸಕರು ಹೇಳಿದರು.

ವಿಜಯದಶಮಿಯ ಸಂಕಲ್ಪಗಳು ಈಡೇರುತ್ತವೆ ಎಂಬ ನಂಬಿಕೆ ನಮ್ಮ ಹಲವಾರು ತಾಯಂದಿರಲ್ಲಿ ಇದೆ. ನಾನು ಕೂಡ ಮೊದಲು ದೇವರು, ಮಠ, ದೇಗುಲಗಳನ್ನು ನಂಬದವನಾಗಿದ್ದೆ. ಆದರೆ, ಇತ್ತೀಚಿನ ದಿನಗಳಲ್ಲಿ ಧಾರ್ಮಿಕ ಶ್ರದ್ಧೆ ಹೆಚ್ಚಾಗುತ್ತಿದ್ದು, ಹಿಂದೂ ಧರ್ಮದ ಸಂಪ್ರದಾಯದಂತೆ ಹಲವಾರು ದೈವಿಕ ಆಚಾರಗಳಲ್ಲಿ ತೊಡಗಿದ್ದೇನೆ ಎಂದರು.

ದಲಿತರ ಮನೆಯಲ್ಲಿ ಉಪವಾಸ ಅಂತ್ಯಗೊಳಿಸಿ, ಇವರ ಮನೆ ಮುದ್ದೆ ಸಾರು ನನಗೆ ತೃಪ್ತಿ ತಂದಿದೆ, ಈ ತಾಯಿಯ ಸಮಸ್ಯೆಯನ್ನು ನೇರವಾಗಿ ಅರಿತು ಸರ್ಕಾರದಿಂದ ಹಾಗೂ ವೈಯಕ್ತಿಕವಾಗಿ ಎಲ್ಲಾ ರೀತಿಯ ಸಹಕಾರ ಮಾಡುತ್ತೇನೆ ಎಂದು ಹೇಳಿದರು.

 ಡಿಕೆಶಿ ಒಂದು ದಿನ ಸಿಎಂ ಆಗೇ ಆಗ್ತಾರೆ 

 ಬೆಂಗಳೂರು: ‘ರಾಜ್ಯದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ 140 ಸ್ಥಾನಗಳನ್ನು ಗೆಲ್ಲುವ ಹಿಂದೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಬಹಳಷ್ಟು ಶ್ರಮವಿದೆ. ಹಾಗಾಗಿ ಹೈಕಮಾಂಡ್‌ ಅವರಿಗೆ ಸೂಕ್ತ ಸ್ಥಾನ ನೀಡುವ ಕುರಿತು ನಿರ್ಧಾರ ಮಾಡಬೇಕು. ಒಂದಲ್ಲ ಒಂದು ದಿನ ಡಿ.ಕೆ.ಶಿವಕುಮಾರ್‌ ಮುಖ್ಯಮಂತ್ರಿ ಆಗಿಯೇ ಆಗುತ್ತಾರೆ’

- ಹೀಗೆಂದು ಹೇಳುವ ಮೂಲಕ ಕುಣಿಗಲ್ ಶಾಸಕ ಎಚ್.ಡಿ.ರಂಗನಾಥ್ ಅವರು ರಾಜ್ಯದಲ್ಲಿ ಅಧಿಕಾರ ಹಸ್ತಾಂತರ ವಿಚಾರ ಮತ್ತೆ ಮುನ್ನೆಲೆ ತರುವ ಪ್ರಯತ್ನ ಮಾಡಿದ್ದಾರೆ.

‘ಅಧಿಕಾರ ಹಸ್ತಾಂತರ ಕುರಿತು ಬಹಿರಂಗ ಹೇಳಿಕೆ ನೀಡಬಾರದು’ ಎಂಬ ಹೈಕಮಾಂಡ್‌ ಕಟ್ಟಾಜ್ಞೆ ಹೊರತಾಗಿಯೂ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡುವಾಗ ಈ ವಿಚಾರ ಪ್ರಸ್ತಾಪಿಸಿದ ರಂಗನಾಥ್ ತಮ್ಮ ರಾಜಕೀಯ ಗುರುಗಳೂ, ಸಂಬಂಧಿಕರೂ ಆದ ಡಿ.ಕೆ.ಶಿವಕುಮಾರ್‌ ಅವರಿಗೆ ಮುಖ್ಯಮಂತ್ರಿ ಸ್ಥಾನ ಸಿಗಬೇಕೆಂದು ಹೇಳಿದರು.

‘ಡಿ.ಕೆ.ಶಿವಕುಮಾರ್‌ ಅವರು ನಮ್ಮ ರಾಜಕೀಯ ಗುರುಗಳು. ಅವರ ಸಮಾಜಸೇವೆ, ಆಡಳಿತ ವೈಖರಿ, ಅಭಿವೃದ್ಧಿ ಮಾದರಿಗಳನ್ನು ನಡೆ-ನುಡಿಗಳಲ್ಲಿ ನೋಡುತ್ತಾ ಬಂದಿದ್ದೇವೆ. ಪಕ್ಷ 140 ಸ್ಥಾನಗಳನ್ನು ಗಳಿಸುವ ಹಿಂದೆ ಡಿಕೆಶಿ ಅವರ ಬಹಳಷ್ಟು ಶ್ರಮವಿದೆ ಎಂದು ಪಕ್ಷದ ಪ್ರತಿಯೊಬ್ಬ ನಾಯಕರೂ ಹೇಳುತ್ತಾರೆ. ಹಾಗಾಗಿ ಅವರಿಗೆ ಸೂಕ್ತ ಸ್ಥಾನ ನೀಡುವ ಬಗ್ಗೆ ಹೈಕಮಾಂಡ್‌ ನಿರ್ಧಾರ ಮಾಡಬೇಕು. ಅವರು ಮುಖ್ಯಮಂತ್ರಿ ಆಗಬೇಕು ಎನ್ನುವುದು ಪಕ್ಷದ ಕಾರ್ಯಕರ್ತರು, ಮುಖಂಡರು, ನಾಯಕರು ಸೇರಿ ನಮ್ಮೆಲ್ಲರ ಅಪೇಕ್ಷೆಯೂ ಆಗಿದೆ. ಅವರು ಒಂದಲ್ಲ ಒಂದು ದಿನ ಮುಖ್ಯಮಂತ್ರಿ ಆಗಿಯೇ ಆಗುತ್ತಾರೆ’ ಎಂದರು.

Read more Articles on