ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಾಗೌಡಗೆ ಧಮ್ಕಿ ಹಾಕಿದ್ದ ಕಾಂಗ್ರೆಸ್ ನಾಯಕ ರಾಜೀವ್ ಗೌಡ ಕೊನೆಗೂ ಸೆರೆ ಸಿಕ್ಕಿಬಿದ್ದಿದ್ದಾನೆ. ಕೀಳು ಪದ ಬಳಸಿ ಟೀಕೆ ಮಾಡಿದ್ದಕ್ಕೆ ಭಾರೀ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ನಾಪತ್ತೆಯಾಗಿದ್ದ ರಾಜೀವ್ 13 ದಿನಗಳಿಂದ ನಾಪತ್ತೆಯಾಗಿದ್ದ.
ಚಿಕ್ಕಬಳ್ಳಾಪುರ : ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಾಗೌಡಗೆ ಧಮ್ಕಿ ಹಾಕಿದ್ದ ಕಾಂಗ್ರೆಸ್ ನಾಯಕ ರಾಜೀವ್ ಗೌಡ ಕೊನೆಗೂ ಸೆರೆ ಸಿಕ್ಕಿಬಿದ್ದಿದ್ದಾನೆ. ಕೀಳು ಪದ ಬಳಸಿ ಟೀಕೆ ಮಾಡಿದ್ದಕ್ಕೆ ಭಾರೀ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ನಾಪತ್ತೆಯಾಗಿದ್ದ ರಾಜೀವ್ 13 ದಿನಗಳಿಂದ ನಾಪತ್ತೆಯಾಗಿದ್ದ. ಆದರೆ ಭಾನುವಾರ ಆತ ಮಂಗಳೂರಿನಿಂದ ರೈಲಿನಲ್ಲಿ ಕೇರಳಕ್ಕೆ ತೆರಳಿದ್ದ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಅಲ್ಲಿಗೆ ಧಾವಿಸಿದ್ದ ಚಿಕ್ಕಬಳ್ಳಾಪುರ ಪೊಲೀಸರು ಆರೋಪಿಯನ್ನು ಕೇರಳದ್ಲಲಿ ಬಂಧಿಸಿದ್ದಾರೆ.ರಾಜೀವ್ ಗೌಡಗೆ ಕಳೆದ ಮೂರು ದಿನಗಳಿಂದ ಮಂಗಳೂರಿನಲ್ಲಿ ಅಲ್ಲಿಯ ಪ್ರಭಾವಿ ರಾಜಕಾರಣಿಯೊಬ್ಬರು ಆಶ್ರಯ ನೀಡಿದ್ದರು ಎಂಬ ಮಾಹಿತಿ ಚಿಕ್ಕಬಳ್ಳಾಪುರ ಜಿಲ್ಲೆ ಪೊಲೀಸರಿಗೆ ಲಭ್ಯವಾಗಿತ್ತು. ಇದರ ಆಧಾರದ ಮೇಲೆ ಭಾನುವಾರ ಚಿಂತಾಮಣಿ ಡಿವೈಎಸ್‌ಪಿ ಮುರಳೀಧರ್, ಶಿಡ್ಲಘಟದ ಸರ್ಕಲ್ ಇನ್‌ಸ್ಪೆಕ್ಟರ್ ಆನಂದ್ ಕುಮಾರ್ ನೇತೃತ್ವದ ತಂಡ ಮಂಗಳೂರಿಗೆ ತೆರಳಿತ್ತು. ಅಷ್ಟರಲ್ಲಿ ಪೊಲೀಸರು ಬರುತ್ತಿರುವ ಮಾಹಿತಿ ತಿಳಿದ ರಾಜೀವ್ ಗೌಡ ಮಂಗಳೂರಿನ ರೈಲ್ವೆ ಸ್ಟೇಷನ್‌ನಲ್ಲಿ ಕಾರು ಬಿಟ್ಟು ರಾಜ್ಯ ಬಿಟ್ಟು ಪರಾರಿಯಾಗಿದ್ದ.
ಸಿಸಿಟಿವಿಗಳ ಪರಿಶೀಲನೆ
ಮಂಗಳೂರಿನ ವಿಮಾನ ನಿಲ್ದಾಣ, ಬಸ್ ನಿಲ್ದಾಣ, ರೈಲ್ವೈ ನಿಲ್ದಾಣ ಸೇರಿದಂತೆ ಹೋಟೆಲ್ ರೆಸಾರ್ಟ್, ಕಾರು ಓಡಾಟ ನಡೆಸಿರುವ ಕಡೆ ಸಿಸಿಟಿವಿಗಳ ಪರಿಶೀಲನೆಯಲ್ಲಿ ಪೊಲೀಸರು ನಿರತರಾಗಿದ್ದರು. ಈ ನಡುವೆ ರಾಜೀವ್ ಗೌಡ ತನ್ನ ಮೊಬೈಲನ್ನು ಸ್ವಿಚ್ ಆಫ್ ಮಾಡಿಕೊಂಡಿದ್ದ. ಅಲ್ಲದೆ ತನ್ನ ಸಂಬಂಧಿಕರನ್ನು ತನ್ನ ಮೊಬೈಲ್‌ನಲ್ಲಿ ಸಂಪರ್ಕ ಮಾಡುತ್ತಿರಲಿಲ್ಲ. ಇದರಿಂದಾಗಿ ಪೊಲೀಸರಿಗೆ ಆತನ ಮಾಹಿತಿಗಳು ಲಭ್ಯವಾಗುತ್ತಿರಲಿಲ್ಲ.
ಕಾರಿನಲ್ಲಿ ರಾಜೀವ್ ಗೌಡ ಜೊತೆ ಪ್ರಯಾಣಿಸಿದ್ದ ಆತನ ಆಪ್ತರಿಬ್ಬರನ್ನು ವಶಕ್ಕೆ
ಈ ನಡುವೆ ಕಾರಿನಲ್ಲಿ ರಾಜೀವ್ ಗೌಡ ಜೊತೆ ಪ್ರಯಾಣಿಸಿದ್ದ ಆತನ ಆಪ್ತರಿಬ್ಬರನ್ನು ವಶಕ್ಕೆ ಪಡೆದ ಪೋಲಿಸರು ವಿಚಾರಣೆ ನಡೆಸಿ, ಆತ ಬಳಸುತ್ತಿದ್ದ ಬೇರೆ ಮೊಬೈಲ್ ನಂಬರ್‌ಗಳನ್ನು ಪಡೆದಿದ್ದಾರೆ. ಆ ಮೊಬೈಲ್ ನಂಬರ್ ಲೊಕೇಶನ್ ಆಧರಿಸಿದ ಪೊಲೀಸ್ ತಂಡವು ಮಂಗಳೂರಿನಿಂದ ರೈಲಿನಲ್ಲಿ ಕೇರಳಕ್ಕೆ ಪರಾರಿಯಾಗಿದ್ದ ರಾಜೀವ್ ಗೌಡನನ್ನು ಕೇರಳ ಗಡಿಯಲ್ಲಿ ಬಂಧಿಸಿದ್ದಾರೆ.
ರಾಜೀವ್ ಗೌಡ ಕೇರಳಕ್ಕೆ ತೆರಳಿ ಅಲ್ಲಿಂದ ಗೋವಾಕ್ಕೆ ತೆರಳುವ ಯೋಜನೆ ರೂಪಿಸಿದ್ದನೆಂದು ತಿಳಿದು ಬಂದಿದೆ. ರಾಜೀವ್ ಗೌಡನನ್ನು ಬಂಧಿಸಿರುವ ಪೊಲೀಸರು ಆತನನ್ನು ಶಿಡ್ಲಘಟ್ಟಕ್ಕೆ ಕರೆ ತರುತ್ತಿದ್ದು, ಶಿಡ್ಲಘಟ್ಟ ನಗರ ಪೋಲಿಸ್ ಠಾಣೆಯಲ್ಲಿ ಆತನ ವಿರುದ್ಧ ದಾಖಲಾಗಿರುವ ಎರಡು ಪ್ರಕರಣಗಳ ಎಫ್ಐಆರ್‌ಗಳಂತೆ ವಿಚಾರಣೆ ನಡೆಸಿ (ಹಳೆಯ ಎಲ್ಲಾ ಪ್ರಕರಣಗಳ ಬಗ್ಗೆ ಸಹಾ ವಿಚಾರಣೆ ನಡೆಸಿ) ಮಂಗಳವಾರ ಬೆಳಗ್ಗೆ ವೈದ್ಯಕೀಯ ತಪಾಸಣೆ ನಡೆಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಿದ್ದಾರೆ. ಮತ್ತೆ ನ್ಯಾಯಾಲಯದಿಂದ ಪೊಲೀಸ್ ಕಸ್ಟಡಿಗೆ ಪಡೆಯುವ ಸಾಧ್ಯತೆಗಳಿವೆ.
ಬರೋಬ್ಬರಿ 13 ದಿನಗಳಿಂದ ರಾಜೀವ್ ಗೌಡನೇ ಬಂಧನದ ಭೀತಿಯಿಂದ ಊರೂರು ಅಲೆಯುತಿದ್ದ. ಜಾಮೀನು ಪಡೆಯಲು ಯತ್ನಿಸಿದ್ದ ರಾಜೀವ್ ಗೌಡನಿಗೆ ನ್ಯಾಯಾಲಯ ಆತನ ಜಾಮೀನು ಅರ್ಜಿ ವಜಾ ಮಾಡಿ ಮುಖಕ್ಕೆ ಮಂಗಳಾರತಿ ಮಾಡಿತ್ತು.
ಹತ್ತಾರು ತಂಡಗಳನ್ನು ಮಾಡಿಕೊಂಡು ಚಿಕ್ಕಬಳ್ಳಾಪುರ ಪೊಲೀಸರು ಆತನಿಗಾಗಿ ಹುಡುಕಾಟ ನಡೆಸಿದ್ದರು. ಆದರೆ ರಾಜೀವ್ ಗೌಡ ಮಾತ್ರ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಪರಾರಿ ಆಗುತ್ತಲೇ ಇದ್ದ.
ರಾಜೀವ್ ಗೌಡನನ್ನು ಕರ್ನಾಟಕ ಕೇರಳ ಗಡಿಯಲ್ಲಿ ಬಂಧಿಸಿರುವುದಾಗಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕುಶಲ್ ಚೌಕ್ಸೆ ಅವರು ಖಚಿತಪಡಿಸಿದ್ದಾರೆ.
