ರಾಜೀವ್ ಗೌಡ ವಿರುದ್ದ ಎರಡು ಪೋಕ್ಸೋ ಪ್ರಕರಣಗಳಲ್ಲಿ ತನಿಖೆ ನಡೆಸಿದ್ದೇನೆ. ಅಪರಾಧಗಳು ಹಾಗೂ ಪೊಲೀಸರ ಕಾರ್ಯವೈಖರಿ ಬಗ್ಗೆ ಆರೋಪಿ ರಾಜೀವಗೌಡನಿಗೆ ಅರಿವು ಇದೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಶಿಡ್ಲಘಟ್ಟ ಪೌರಾಯುಕ್ತೆ ಅಮೃತಾಗೆ ಧಮ್ಕಿ ಹಾಕಿದ ರಾಜೀವ್ ಗೌಡ ನಟೋರಿಯಸ್ ಕ್ರಿಮಿನಲ್ ಎಂದಿದ್ದಾರೆ. ರಾಜೀವ್ ಗೌಡ ವಿರುದ್ದ ಪೋಕ್ಸೋ, ಮೋಸ, ವಂಚನೆ ಸೇರಿದಂತೆ 16 ಪ್ರಕರಣಗಳಲ್ಲಿ ಭಾಗಿಯಾಗಿದ್ದು ಒಟ್ಟು 16 ಪ್ರಕರಣಗಳಿವೆ. ಬೆಂಗಳೂರು ಸೇರಿದಂತೆ ಅಕ್ಕಪಕ್ಕ ರಾಜ್ಯಗಳಲ್ಲಿ ಹುಡುಕಾಡುತ್ತಿದ್ದೇವೆ. ರಾಜೀವ್ ಗೌಡನನ್ನು ಆದಷ್ಟು ಬೇಗ ಬಂಧಿಸುತ್ತೇವೆ ಎಂದು ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ ಕುಶಲ್ ಚೌಕ್ಸೆ ತಿಳಿಸಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಚಿಂತಾಮಣಿಯಲ್ಲಿ ಸಹಾಯಕ ಪೋಲಿಸ್ ವರಿಷ್ಠಾಧಿಕಾರಿಯಾಗಿದ್ದಾಗ ರಾಜೀವ್ ಗೌಡ ವಿರುದ್ದ ಎರಡು ಪೋಕ್ಸೋ ಪ್ರಕರಣಗಳಲ್ಲಿ ತನಿಖೆ ನಡೆಸಿದ್ದೇನೆ. ಅಪರಾಧಗಳು ಹಾಗೂ ಪೊಲೀಸರ ಕಾರ್ಯವೈಖರಿ ಬಗ್ಗೆ ಆರೋಪಿ ರಾಜೀವಗೌಡನಿಗೆ ಅರಿವು ಇದೆ. ಹಾಗಾಗಿ ಪೊಲೀಸ್ ಕಾರ್ಯಾಚರಣೆ ಕುರಿತು ಮಾಧ್ಯಮಗಳ ಮುಂದೆ ಹೆಚ್ಚು ಮಾಹಿತಿ ಬೇಡ ಎಂದರು.

ಜ. 14 ರಂದು ರಾಜೀವ್ ಗೌಡ ವಿರುದ್ದ ಶಿಡ್ಲಘಟ್ಟ ನಗರ ಪೋಲಿಸ್ ಠಾಣೆಯಲ್ಲಿ ಎರಡು ದೂರು ದಾಖಲಾಗಿ ಎಫ್ಐಆರ್ ಆಗಿದೆ. ಅಂದಿನಿಂದ ಆತನಿಗಾಗಿ ಯಾವುದೇ ರಾಜಕೀಯ ಒತ್ತವಿಲ್ಲದೇ ಹಗಲು ರಾತ್ರಿ ಬೆಂಗಳೂರು ಸೇರಿದಂತೆ ಅಕ್ಕಪಕ್ಕ ರಾಜ್ಯಗಳಲ್ಲಿ ಪೊಲೀಸರ ಕಾರ್ಯಾಚರಣೆ ನಡೆಸಿ ಹುಡುಕಾಡುತ್ತಿದ್ದೇವೆ. ಆರೋಪಿ ಎಡೆಮುರಿ ಕಟ್ಟಲು ಚಿಕ್ಕಬಳ್ಳಾಪುರ ಪೊಲೀಸರು ಸದಾ ಸನ್ನದ್ಧರಾಗಿದ್ದೇವೆ. ಮಾಧ್ಯಮಗಳ ಮೂಲಕ ಪೊಲೀಸರ ಮಾಹಿತಿ‌ ಅರಿತರೆ ಆರೋಪಿ ರಾಜೀವಗೌಡ ತಪ್ಪಿಸಿಕೊಳ್ಳುವ ಯತ್ನ ಮಾಡಬಹುದು. ಆದ್ದರಿಂದ ನಾವು ಎಷ್ಟು ತಂಡ ರಚಿಸಿದ್ದೇವೆ. ಯಾರ್ಯಾರು ತಂಡದಲ್ಲಿದ್ದಾರೆ. ಹೇಗೆ ಕಾರ್ಯಾಚರಣೆ ಮಾಡುತ್ತಿದ್ದೇವೆ ಎಂಬುದನ್ನು ಹೇಳಲು ಸಾಧ್ಯ ವಿಲ್ಲ ಎಂದರು.

ರಾಜೀವ್‌ಗೌಡ ಬೆನ್ನಿಗೆ ನಿಂತಿದ್ದಾರಾ ಪ್ರಭಾವಿ ಸಚಿವರು:

ಪೌರಾಯುಕ್ತೆ ಅಮೃತ ಗೌಡ ಹಾಗೂ ತನ್ನ ವಿರುದ್ಧ ನಿಂದನಾತ್ಮಕ ಪದ ಬಳಸಿದ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ವಿರುದ್ಧ ಕಾನೂನು ಕ್ರಮ ಜರುಗಿಸಿ, ಬಂಧಿಸಬೇಕು ಎಂದು ಶಿಡ್ಲಘಟ್ಟ ಶಾಸಕ ಬಿ.ಎನ್ ರವಿಕುಮಾರ್ ಒತ್ತಾಯಿಸಿದ್ದಾರೆ.

ಪ್ರಕರಣ ಸಂಬಂಧ ಶಾಸಕ ಬಿ.ಎನ್.ರವಿಕುಮಾರ್ ಮಾತನಾಡಿ , ರಾಜೀವ್ ಗೌಡ ಬಂಧನ ಮಾಡದಂತೆ ಡಿಸಿಎಂ ಡಿ.ಕೆ. ಶಿವಕುಮಾರ್ ಸೇರಿದಂತೆ ಸಚಿವ ಕೆ.ಎಚ್.ಮುನಿಯಪ್ಪ ಪೊಲೀಸರ ಮೇಲೆ ಒತ್ತಡ ಹಾಕಿದ್ದಾರೆ. ರಾಜೀವ್ ಗೌಡ ಬೆನ್ನಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಸಚಿವ ಕೆ.ಎಚ್.ಮುನಿಯಪ್ಪ ನಿಂತಿದ್ದಾರೆ ಎಂದು ಆರೋಪಿಸಿದ್ದಾರೆ.

ಎಫ್‌ಐಆರ್ ರದ್ದುಗೊಳಿಸುವಂತೆ ಹೈಕೋರ್ಟ್ ಗೆ ಮೊರೆ:

ಮಂಗಳವಾರ ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿರೋ ಬೆನ್ನಲ್ಲೇ ಪುಡಾರಿ ಬಂಧನಕ್ಕೆ ಒತ್ತಡ ಜಾಸ್ತಿಯಾಗಿದೆ. ಯಾವುದೇ ಕಾರಣಕ್ಕೂ ಪ್ರಭಾವಿಗಳನ್ನು ರಕ್ಷಿಸೋ ಪ್ರಶ್ನೆಯೇ ಇಲ್ಲ ಅಂತ ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ ಸುಧಾಕರ್ ಸ್ಪಷ್ಟಪಡಿಸಿದ್ದಾರೆ.

ಕೆಪಿಸಿಸಿ ನೋಟಿಸ್‌ಗೆ ಕ್ಯಾರೆ ಎನ್ನದ ರಾಜೀವ್ ಗೌಡ:

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಸೂಚನೆಯ ಮೇರೆಗೆ ಕಳೆದ ಗುರುವಾರದಂದು ರಾಜೀವ್ ಗೌಡಗೆ ವಿವರಣೆ ಕೋರಿ ನೋಟಿಸ್ ಜಾರಿ ಮಾಡಲಾಗಿತ್ತು. ನೋಟಿಸ್ ತಲುಪಿದರೂ ಸಹ ಅವರು ಇದುವರೆಗೂ ಯಾವುದೇ ಲಿಖಿತ ಉತ್ತರ ಅಥವಾ ಸ್ಪಷ್ಟನೆ ನೀಡಿಲ್ಲ. ಇದನ್ನು ಉದ್ಧಟತನ ಮತ್ತು ಪಕ್ಷದ ಶಿಸ್ತಿನ ಉಲ್ಲಂಘನೆ ಎಂದು ಕೆಪಿಸಿಸಿ ಪರಿಗಣಿಸಿದೆ.

ಸಿಕೆಬಿ-2 ಎಸ್ಪಿ ಕುಶಲ್ ಚೌಕ್ಸೆ ( ರಾಜೀವ್ ಗೌಡ ಪೋಟೋ ಬಳಸಿಕೊಳ್ಳಿ)