ಸಿದ್ದರಾಮಯ್ಯ, ಡಿಕೆಶಿ ತರಾಟೆ ಬೆನ್ನಲ್ಲೇ ಗುಂಡಿ ಮುಚ್ಚುವ ಕಾರ್ಯ ಚುರುಕು

| Published : Sep 22 2025, 01:01 AM IST

ಸಾರಾಂಶ

ರಸ್ತೆ ಗುಂಡಿ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಸಭೆ ನಡೆಸಿ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಹಾಗೂ ನಗರ ಪಾಲಿಕೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಬೆನ್ನಲ್ಲೇ ಎಚ್ಚೆತ್ತುಕೊಂಡ ನಗರ ಪಾಲಿಕೆ ಅಧಿಕಾರಿಗಳು ಒಂದೇ ದಿನ 15 ಕಿ.ಮೀ.ಗೂ ಉದ್ದದ ವಿವಿಧ ರಸ್ತೆಗಳನ್ನು ಗುಂಡಿ ಮುಕ್ತಗೊಳಿಸಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರುರಸ್ತೆ ಗುಂಡಿ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಸಭೆ ನಡೆಸಿ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಹಾಗೂ ನಗರ ಪಾಲಿಕೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಬೆನ್ನಲ್ಲೇ ಎಚ್ಚೆತ್ತುಕೊಂಡ ನಗರ ಪಾಲಿಕೆ ಅಧಿಕಾರಿಗಳು ಒಂದೇ ದಿನ 15 ಕಿ.ಮೀ.ಗೂ ಉದ್ದದ ವಿವಿಧ ರಸ್ತೆಗಳನ್ನು ಗುಂಡಿ ಮುಕ್ತಗೊಳಿಸಲಾಗಿದೆ.

ಮಳೆ ಬಿಡುವು ನೀಡುತ್ತಿದ್ದಂತೆ ರಾಜಧಾನಿ ಬೆಂಗಳೂರಿನಲ್ಲಿ ರಸ್ತೆ ಗುಂಡಿ ಮುಚ್ಚುವ ಕಾರ್ಯ ಭರದಿಂದ ಸಾಗಿದ್ದು, ಪಾಲಿಕೆ ಅಧಿಕಾರಿಗಳು ಹಾಗೂ ಸಿಬ್ಬಂದಿ ರಸ್ತೆ ಗುಂಡಿ ಮುಚ್ಚುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ ಹೊಸೂರು ರಸ್ತೆ, ಬೈರಸಂದ್ರ 8ನೇ ಮುಖ್ಯ ರಸ್ತೆ, ಆರ್ಮುಗಮ್‌ ವೃತ್ತ, ಸಜ್ಜನ್‌ ರಾವ್‌ ವೃತ್ತ, ವಿಲ್ಸನ್‌ ಗಾರ್ಡನ್‌ 12ನೇ ಕ್ರಾಸ್‌, ಆದರ್ಶ ರಸ್ತೆಯಿಂದ ಎಂ.ಜಿ. ಪಾರ್ಕ್‌, ಜಿ.ಎಂ.ಪಾಳ್ಯ, ಎಂ.ಎಂ.ರಸ್ತೆ, ವಿಲರ್ಸ್‌ ರಸ್ತೆ, ಮಿಲ್ಲರ್ಸ್‌ ರಸ್ತೆಯಲ್ಲಿದ್ದ 178 ರಸ್ತೆ ಗುಂಡಿಗಳನ್ನು ಮುಚ್ಚಲಾಗಿದೆ.

ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯ ಸಂಪಿಗೆಹಳ್ಳಿಯಿಂದ ಕೋಗಿಲು ಸಂಪರ್ಕಿಸುವ 2.5 ಕಿಮೀ ಉದ್ದ ರಸ್ತೆಯಲ್ಲಿನ 22 ರಸ್ತೆ ಗುಂಡಿ ಮುಚ್ಚಲಾಗಿದೆ.

ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಬಿ.ಕೆ.ವೃತ್ತದಿಂದ ಬೆನ್ನೇರುಘಟ್ಟ ಸಂಪರ್ಕಿಸುವ 2.5 ಕಿ.ಮೀ ಉದ್ದದ ರಸ್ತೆಯಲ್ಲಿ 20 ಹಾಗೂ ಬನ್ನೇರುಘಟ್ಟ ಮುಖ್ಯ ರಸ್ತೆಯಿಂದ ಮಂಜಪ್ಪ ಸರ್ಕಲ್‌ವರೆಗಿನ 1.5 ಕಿ.ಮೀ ಉದ್ದ ರಸ್ತೆಯಲ್ಲಿ 18 ಗುಂಡಿ ಮುಚ್ಚಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.