ರಸ್ತೆ ಗುಂಡಿ ಮುಚ್ಚದ ಅಧಿಕಾರಿಗಳ ವಿರುದ್ಧ ಪ್ರತಿಭಟನೆ

| Published : Sep 21 2025, 02:00 AM IST

ಸಾರಾಂಶ

ರಸ್ತೆ ಗುಂಡಿ ಮುಚ್ಚದೇ ಸಂಚಾರಕ್ಕೆ ಸಂಚಕಾರ ತಂದ ಪುರಸಭಾ ಅಧಿಕಾರಿಗಳ ಬೇಜವಾಬ್ದಾರಿತಕ್ಕೆ ಬೇಸತ್ತು ಆಕ್ರೋಶಗೊಂಡ ಪಟ್ಟಣದ ಚಾಮರಾಜಪೇಟೆ ನಿವಾಸಿಗಳು ನಿಮ್ಮ ಜೀವಕ್ಕೆ ನೀವೇ ಹೊಣೆ, ಪುರಸಭೆ ಅಲ್ಲ ಎಂದು ರಸ್ತೆಯ ಮೇಲೆ ಬರೆಯುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು.

ಸೊರಬ: ರಸ್ತೆ ಗುಂಡಿ ಮುಚ್ಚದೇ ಸಂಚಾರಕ್ಕೆ ಸಂಚಕಾರ ತಂದ ಪುರಸಭಾ ಅಧಿಕಾರಿಗಳ ಬೇಜವಾಬ್ದಾರಿತಕ್ಕೆ ಬೇಸತ್ತು ಆಕ್ರೋಶಗೊಂಡ ಪಟ್ಟಣದ ಚಾಮರಾಜಪೇಟೆ ನಿವಾಸಿಗಳು ನಿಮ್ಮ ಜೀವಕ್ಕೆ ನೀವೇ ಹೊಣೆ, ಪುರಸಭೆ ಅಲ್ಲ ಎಂದು ರಸ್ತೆಯ ಮೇಲೆ ಬರೆಯುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಚಾಮರಾಜಪೇಟೆ ನಿವಾಸಿಗಳ ಹಿತರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಸಂಜೀವ ಆಚಾರ್ ಮಾತನಾಡಿ, ಕಳೆದ ನಾಲ್ಕೈದು ತಿಂಗಳ ಹಿಂದೆ ಚಾಮರಾಜಪೇಟೆಯಲ್ಲಿ ಹರ್ ಘರ್ ಗಂಗಾ ಯೋಜನೆಯಡಿ ಪೈಪ್ ಲೈನ್ ಅಳವಡಿಸಲು ರಸ್ತೆಯಲ್ಲಿ ಗುಂಡಿ ಅಗೆಯಲಾಗಿತ್ತು. ಅಗೆದ ಗುಂಡಿಗಳನ್ನು ಸಮರ್ಪಕವಾಗಿ ಮುಚ್ಚದೇ ಅಲ್ಲಲ್ಲಿ ಗುಂಡಿಗಳನ್ನು ಹಾಗೆಯೇ ಬಿಡಲಾಗಿದೆ. ಇದರಿಂದ ನಿತ್ಯ ವಾಹನ ಸವಾರರು ಗುಂಡಿ ಗೊಟರುಗಳ ಮೇಲೆಯೇ ಹತ್ತಿಸಿಕೊಂಡು ಸಂಚರಿಸಬೇಕಿದೆ. ಇದರಿಂದ ದ್ವಿಚಕ್ರ ವಾಹನ ಸವಾರರು ಆಯತಪ್ಪಿ ಕೈ, ಕಾಲಿಗೆ ಪೆಟ್ಟು ಮಾಡಿಕೊಂಡ ನಿದರ್ಶನಗಳಿಗೆವೆ. ಈ ಬಗ್ಗೆ ಹಲವು ಬಾರಿ ಪುರಸಭೆ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ರಸ್ತೆಯಲ್ಲಿ ಬರಹದ ಮೂಲಕ ಪ್ರತಿಭಟನೆ ನಡೆಸಲಾಗುತ್ತಿದೆ ಎಂದರು.

ಪಪಂ ಮಾಜಿ ಸದಸ್ಯ ಸಮೀವುಲ್ಲಾ ಮಾತನಾಡಿ, ಮುಖ್ಯರಸ್ತೆಯಿಂದ ಕಾನುಕೇರಿ, ಕೋರ್ಟ್, ಸಾರ್ವಜನಿಕ ಆಸ್ಪತ್ರೆ, ಆಶ್ರಯ ಬಡಾವಣೆ, ಕ್ರೀಡಾಂಗಣಕ್ಕೆ ತೆರಳುವ ಬಹುತೇಕರು ಇದೇ ಮಾರ್ಗ ಬಳಸುತ್ತಾರೆ. ರಸ್ತೆಯಲ್ಲಿ ಕುಡಿಯುವ ನೀರಿನ ಸರಬರಾಜಿನ ಪೈಪ್ ಲೈನ್ ಅಳವಡಿಕೆ ತರುವಾಯ ಗುಂಡಿಗಳನ್ನು ಮುಚ್ಚದೇ ಅಧಿಕಾರಿಗಳು ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ, ಕೂಡಲೇ ರಸ್ತೆಯನ್ನು ದುರಸ್ತಿಗೊಳಿಸುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.

ಪಪಂ ಮಾಜಿ ಸದಸ್ಯ ಸಮೀವುಲ್ಲಾ, ಸ್ಥಳೀಯರಾದ ವೆಂಕಟಗಿರಿ ಭಟ್, ಅಣ್ಣಪ್ಪ, ಉಮೇಶ್ ದೇವಾಡಿಗ, ವಸಂತ ಶೇಟ್, ಸುಬ್ರಹ್ಮಣ್ಯ ಆಚಾರ್, ಶ್ರೀನಾಥ್, ಕುಬೇರಪ್ಪ ಶೇಟ್ ಸೇರಿದಂತೆ ಇತರರಿದ್ದರು.