ಸಾರಾಂಶ
ಚಿಕ್ಕಬಳ್ಳಾಪುರ : ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ಕರ್ನಾಟಕವನ್ನು ಕಡೆಗಣಿಸಿ ಅನ್ಯಾಯ ಮಾಡಿದೆ. ಕೇಂದ್ರ ಬಜೆಟ್‌ನಲ್ಲಿ ಇಂಡಿಯಾ ಒಕ್ಕೂಟದ ರಾಜ್ಯಗಳಿಗೆ ಮಲತಾಯಿ ಧೋರಣೆ ಅನುಸರಿಸಲಾಗಿದೆ ಎಂದು ಆರೋಪಿಸಿ ಸಚಿವ ಡಾ .ಎಂ.ಸಿ.ಸುಧಾಕರ್ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ಶನಿವಾರ ಬೃಹತ್ ಪ್ರತಿಭಟನೆ ನಡೆಸಿದರು.
ಜಿಲ್ಲಾ ಕಾಂಗ್ರೆಸ್ ಹಾಗೂ ಜಿಲ್ಲಾ ಮಹಿಳಾ ಕಾಂಗ್ರೆಸ್ ಹಾಗೂ ಜಿಲ್ಲೆಯ ಎಲ್ಲಾ ಬ್ಲಾಕ್ ಕಾಂಗ್ರೆಸ್ ಗಳ ವತಿಯಿಂದ ಶನಿವಾರ ನಗರದ ಬಿ.ಬಿ. ರಸ್ತೆಯ ಜಿಲ್ಲಾ ಕಾಂಗ್ರೆಸ್ ಕಚೇರಿಯಿಂದ ಪಾದಯಾತ್ರೆ ಮುಖಾಂತರ ತೆರಳಿ ಅಂಬೇಡ್ಕರ್ ವೃತ್ತದಲ್ಲಿ ಖಾಲಿ ಚೊಂಬು ಪ್ರದರ್ಶಿಸಿ ಪ್ರತಿಭಟನೆಯನ್ನು ಮಾಡಿದರು.
ಕೇಂದ್ರದಿಂದ ಮಲತಾಯಿ ಧೋರಣೆ
ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ. ಸುಧಾಕರ್ ಮಾತನಾಡಿ, ಕೇಂದ್ರ ಸರ್ಕಾರ ನಿರಂತರವಾಗಿ ರಾಜ್ಯಕ್ಕೆ ಬರ ಬೇಕಾದ ಅನುದಾನಗಳನ್ನು ಮತ್ತು ಹೊಸ ಕಾರ್ಯಕ್ರಮಗಳನ್ನು ನೀಡುವ ಕೆಲಸ ಮಾಡುತ್ತಿಲ್ಲ. ನಮ್ಮ ತೆರಿಗೆ ಪಾಲನ್ನು ಕೊಡದೇ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ತಳೆದಿದೆ. ನಮ್ಮ ಜನರ ತೆರಿಗೆ ನಮಗೇ ನೀಡುತ್ತಿಲ್ಲ. ಮುಖ್ಯ ಮಂತ್ರಿ ಸಿದ್ದರಾಮಯ್ಯ ಕೇಂದ್ರಕ್ಕೆ ಪತ್ರ ಬರೆದು, ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದರು.
ಕೇಂದ್ರ ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ರವರು ಮೊನ್ನೆ ಮಂಡಿಸಿರುವ ಬಜೆಟ್‌ನಲ್ಲಿ ರಾಜ್ಯಕ್ಕೆ ಯಾವುದೇ ಯೋಜನೆ ನೀಡಿಲ್ಲ. ರಾಜ್ಯ ಸರ್ಕಾರದ ಯೋಜನೆಗಳಿಗೆ ಕೇಂದ್ರ ಸರ್ಕಾರ ಹಣ ಮೀಸಲಿಡದೆ ತಾರತಮ್ಯ ಮಾಡುತ್ತಿದೆ. ಕೇವಲ ಕುರ್ಚಿ ಉಳಿಸಿಕೊಳ್ಳಲು ಆಂಧ್ರಪ್ರದೇಶ ಮತ್ತು ಬಿಹಾರ ರಾಜ್ಯಗಳಿಗೆ ಹೆಚ್ಚಿನ ವಿಶೇಷ ಅನುದಾನ ನೀಡಿರುವುದು ಮಲತಾಯಿ ಧೋರಣೆಯಲ್ಲದೇ ಇನ್ನೇನು ಎಂದು ಪ್ರಶ್ನಿಸಿದರು. ಇಂಡಿಯಾ ಒಕ್ಕೂಟ ರಾಜ್ಯಗಳಿಗೆ ಅನ್ಯಾಯ
ಎನ್‌ಡಿಎ ಮಿತ್ರಪಕ್ಷಗಳಿಗೆ ಗಣನೀಯವಾಗಿ ಹಣವನ್ನು ನೀಡುತ್ತಿದ್ದು, ಇಂಡಿಯಾ ಒಕ್ಕೂಟದ ರಾಜ್ಯಗಳಿಗೆ ನ್ಯಾಯುತವಾಗಿ ಹಣ ನೀಡದೇ ಅನ್ಯಾಯ ಮಾಡುತ್ತಿದೆ. ಮುಖ್ಯವಾಗಿ ರೈತ ಕೂಲಿ ಕಾರ್ಮಿಕರಿಗೆ ಉಪಯೋಗವಾಗುವ ಉದ್ಯೋಗ ಖಾತರಿ ಯೋಜನೆಗೆ, ರೈತರ ರಸಗೊಬ್ಬರಗಳಿಗೆ ಸಬ್ಸಿಡಿ ನಿಲ್ಲಿಸಿರುವುದು. ಕರ್ನಾಟಕದ ಮೇಕೆದಾಟು ಸಮಾನಾಂತರ ಅಣೆಕಟ್ಟುಯೋಜನೆಗೆ ಹಣ ನೀಡಿಲ್ಲ. ಭದ್ರಾ ಮೇಲ್ದಂಡೆ ಯೋಜನೆ, ಕಳಸಾ- ಬಂಡೂರಿ ಕುಡಿಯುವ ನೀರಿನ ಯೋಜನೆ, ಬೆಂಗಳೂರಿನ 60 ಕಿ.ಮೀ. ಉದ್ದದ ಸುರಂಗ ಮಾರ್ಗ ನಿರ್ಮಾಣ, ಬಿಡದಿ ಕೈಗಾರಿಕಾ ಪ್ರದೇಶಕ್ಕೆ ಮೆಟ್ರೋ ಮಾರ್ಗ ವಿಸ್ತರಣೆ, ಬೆಂಗಳೂರಿನ ಹೆಬ್ಬಾಳ ಸರ್ಜಾಪುರ ಕಾರಿಡಾರ್ ಯೋಜನೆ, 3ನೇ ಹಂತದ ಮೆಟ್ರೋ ಯೋಜನೆಗೂ ಖಾಲಿ ಚೊಂಬು ನೀಡಲಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಕಲ್ಯಾಣ ಕರ್ನಾಟಕ ಬಾಗಕ್ಕೆ ರಾಯಚೂರಿನಲ್ಲಿ ಎಮ್ಸ್ ಸ್ಥಾಪನೆಗೆ ಆಭಾಗದ ಜನ ಕೇಂದ್ರಕ್ಕೆ ಮನವಿ ಮಾಡಿದ್ದರು,ಆದರೆ ಅದು ನೀಡಿಲ್ಲಾ. ಮೆಟ್ರೋ ಯೋಜನೆಗೆ ಕೇಂದ್ರ ಸರ್ಕಾರದ ಪಾಲು ಶೇ. 15ರಷ್ಟು ಮಾತ್ರ ನೀಡುತ್ತಾರೆ. ಆದರೆ ಉದ್ಘಾಟನೆಗೆ ಅವರೆ ಬರಬೇಕು. ಈ ಎಲ್ಲಾ ವಿಚಾರಗಳನ್ನು ರಾಜ್ಯದ ಜನರಿಗೆ ತಿಳಿಸಲು ಪ್ರತಿಭಟನೆ ಮಾಡುತ್ತಿದ್ದೇವೆ ಎಂದರು.
ರಾಷ್ಟ್ರಪತಿಗಳಿಗೆ ಮನವಿರಾಷ್ಟ್ರಪತಿಗಳು ಮಧ್ಯಪ್ರವೇಶಿಸಿ ತಾರತಮ್ಯ ನೀತಿಯನ್ನು ಸರಿಪಡಿಸಬೇಕು. ಮಲತಾಯಿ ಧೋರಣೆ ಮುಂದುವರಿದರೆ ಕಾಂಗ್ರೆಸ್‌ನಿಂದ ಪ್ರತಿಭಟನೆ ಮುಂದುವರಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಕೆ.ಎನ್. ಕೇಶವ್ ರೆಡ್ಡಿ, ಕಾರ್ಮಿಕ ವಿಭಾಗದ ರಾಜ್ಯ ಕಾರ್ಯದರ್ಶಿ ಕೋನಪಲ್ಲಿ ಕೋದಂಡ,ಮಾಜಿ ಶಾಸಕ ಬಚ್ಚೇಗೌಡ, ಶಿಡ್ಲಘಟ್ಟದ ಪುಟ್ಟು ಆಂಜಿನಪ್ಪ, ಬಿ.ವಿ.ರಾಜಿವ್ ಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಡಿವಿಆರ್ ರಾಜೇಶ್, ಜಯರಾಮ್, ಮುಖಂಡರಾದ ಕುಬೇರ್ ಅಚ್ಚು, ಪೆದ್ದಣ್ಣ, ಕುಪೇಂದ್ರ, ಶಂಕರ, ಮಮತಾಮೂರ್ತಿ, ಎಸ್ ಯಾಸ್ಮಿನ್ ತಾಜ್ ಮತ್ತಿತರರು ಇದ್ದರು.