ಸಾರಾಂಶ
ಶಿಡ್ಲಘಟ್ಟ : ಕೇಂದ್ರ ಸರ್ಕಾರದ ಜನೋಪಯೋಗಿ ಯೋಜನೆಗಳನ್ನು ಕಟ್ಟಕಡೆಯ ವ್ಯಕ್ತಿಗೂ ತಿಳಿಸಿ, ತಲುಪಿಸುವ ಕಾರ್ಯವನ್ನು ಕಾರ್ಯಕರ್ತರು ವ್ರತದಂತೆ ಮಾಡಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ರಾಮಲಿಂಗಪ್ಪ ಹೇಳಿದರು. ನಗರದ ಮಯೂರ ವೃತ್ತದಲ್ಲಿರುವ ಬಿಜೆಪಿ ಸೇವಾಸೌಧದಲ್ಲಿ ಶನಿವಾರ ಬಿಜೆಪಿ ತಾಲ್ಲೂಕು ಮಂಡಲ ವಿಶೇಷ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಗರಣಗಳ ಬಲೆಯಲ್ಲಿ ಸಿಲುಕಿರುವ ಸಿಎಂ ಮತ್ತು ಡಿಸಿಎಂ ದೊಡ್ಡ ಬಂಡೆಯನ್ನು ತಮ್ಮ ಮೇಲೆ ಹಾಕಿಕೊಂಡಿದ್ದಾರೆಂದು ಟೀಕಿಸಿದರು.
ಜನರ ತೆರಿಗೆ ಹಣ ಲೂಟಿ
ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ರಾಜ್ಯದ ಜನರ ತೆರಿಗೆ ಹಣವನ್ನು ಲೂಟಿ ಮಾಡುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಕಾಂಗ್ರೆಸ್ ಭ್ರಷ್ಟಾಚಾರದ ಬಗ್ಗೆ ಜನ ಸಾಮಾನ್ಯರಿಗೆ ತಿಳಿಸಬೇಕು ಎಂದ ಅವರು, ಜಿಲ್ಲೆಯಲ್ಲಿ ಪಕ್ಷವನ್ನು ಸಂಘಟಿಸಿ ಮುಂಬರುವ ಜಿಪಂ ತಾಪಂ ಚುನಾವಣೆಗಳನ್ನು ಎದುರಿಸಬೇಕೆಂದರು. ಬಿಜೆಪಿ ಮುಖಂಡರಾದ ಸೀಕಲ್ ರಾಮಚಂದ್ರಗೌಡ ಮಾತನಾಡಿ, ದೇಶದಲ್ಲಿ 10 ವರ್ಷ ಮೋದಿ ಆಡಳಿತ ನೀಡಿದ್ದಕ್ಕೆ ಜಗತ್ತಿನಲ್ಲಿ 5ನೇ ಸ್ಥಾನಕ್ಕೆ ತಂದರು. ರಾಜ್ಯದಲ್ಲಿ ಜನರನ್ನು ಯಾಮಾರಿಸಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ಎಂದರು.
ಗ್ಯಾರಂಟಿಗಳಿಂದ ಆರ್ಥಿಕ ಹೊರೆ ಹೆಚ್ಚಾಗಿ ಜನರ ಮೇಲೆ ಬೆಲೆ ಏರಿಕೆ ಬರೆ ಬಿದ್ದಿದೆ ಎಂದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಎಂ.ರಾಜಣ್ಣ , ಬಿಜೆಪಿ ನಿಕಟ ಪೂರ್ವ ಅಧ್ಯಕ್ಷ ಸುರೇಂದ್ರ ಗೌಡ , ಬಿಜೆಪಿ ತಾಲ್ಲೂಕು ಮಂಡಲ ಅಧ್ಯಕ್ಷ ಆನಂದ್ ಗೌಡ , ನಗರ ಮಂಡಲ ಅಧ್ಯಕ್ಷ ನರೇಶ್, ನಗರ ಮಂಡಲ ಪ್ರಧಾನ ಕಾರ್ಯದರ್ಶಿ ನಾಗೇಶ್ ಹಾಜರಿದ್ದರು.