ಸಾರಾಂಶ
ಕಳೆದ ಬಾರಿಯ 15 ಲಕ್ಷ ದೀಪಗಳ ದಾಖಲೆ ಮುರಿದು ಗಿನ್ನೆಸ್ ರೆಕಾರ್ಡ್
51 ಘಾಟ್‌ಗಳಲ್ಲಿ ದೀಪ ಬೆಳಗಿಸಿದ 25 ಸಾವಿರ ಸ್ವಯಂಸೇವಕರುದೀಪ ಬೆಳಗಿ ಉತ್ಸವಕ್ಕೆ ಸಿಎಂ ಯೋಗಿ ಆದಿತ್ಯನಾಥ್ ಚಾಲನೆದೀಪೋಕ್ಸವಕ್ಕೆ 50ಕ್ಕೂ ಹೆಚ್ಚು ದೇಶಗಳ ರಾಯಭಾರಿಗಳು ಸಾಕ್ಷಿಗಮನ ಸೆಳೆದ ಟ್ಯಾಬ್ಲೋ ಮೆರವಣಿಗೆ, ನೃತ್ಯ, ಲೇಸರ್ ಶೋ
ಅಯೋಧ್ಯೆ: ಉತ್ತರ ಪ್ರದೇಶದ ರಾಮಜನ್ಮಭೂಮಿ ಅಯೋಧ್ಯಾ ನಗರದ ಸರಯೂ ನದಿ ದಡದಲ್ಲಿ ಶನಿವಾರ 25,000 ಸ್ವಯಂ ಸೇವಕರ ಮೂಲಕ ಬರೋಬ್ಬರಿ 22.23 ಲಕ್ಷ ದೀಪಗಳನ್ನು ಬೆಳಗಿಸುವ ಮೂಲಕ ನೂತನ ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಲಾಗಿದೆ. ಈ ಮೂಲಕ ಕಳೆದ ವರ್ಷ ಸರಯೂ ದಡದಲ್ಲಿ 15 ಲಕ್ಷ ದೀಪ ಬೆಳಗಿಸಿ ನಿರ್ಮಿಸಿದ್ದ ‘ದೀಪಾವಳಿ ದಾಖಲೆ’ಯನ್ನು ಮುರಿಯಲಾಗಿದೆ. ಬೆಳಕಿನ ಹಬ್ಬ ದೀಪಾವಳಿ ಅಂಗವಾಗಿ ನಡೆದ ದೀಪೋತ್ಸವ ಸಮಾರಂಭಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸಂಜೆ 6.30ಕ್ಕೆ ಸರಯೂ ಆರತಿ ನೆರವೇರಿಸಿದರು. ಬಳಿಕ ದೀಪ ಬೆಳಗಿಸುವ ಮೂಲಕ ಸಂಜೆ 7.30ಕ್ಕೆ ದೀಪೋತ್ಸವಕ್ಕೆ ಚಾಲನೆ ನೀಡಿದರು. ನಂತರ 51 ಘಾಟ್‌ಗಳಲ್ಲಿ 22.23 ಲಕ್ಷ ಮಣ್ಣಿನ ಹಣತೆಗಳನ್ನು ಬೆಳಗಿಸಲಾಯಿತು. ದೀಪೋತ್ಸವದಲ್ಲಿ ಉಪಸ್ಥಿತರಿದ್ದ ಗಿನ್ನೆಸ್ ವಿಶ್ವ ದಾಖಲೆಯ ತಂಡವು ಡ್ರೋನ್ ಕ್ಯಾಮರಾ ಮೂಲಕ ದೀಪಗಳನ್ನು ಎಣಿಕೆ ಮಾಡಿ ಬಳಿಕ ದಾಖಲೆ ನೀಡಿದೆ. ಈ ದೀಪೋತ್ಸವ ಕಾರ್ಯಕ್ರಮದಲ್ಲಿ ಉತ್ತರ ಪ್ರದೇಶದ ಬಹುತೇಕ ಎಲ್ಲ ಸಚಿವರು ಭಾಗಿಯಾಗಿದ್ದರು. ಅಲ್ಲದೇ ಸ್ಥಳದಲ್ಲಿ ಜನಸಂದಣಿಯನ್ನು ನಿಯಂತ್ರಿಸಲು ಪೊಲೀಸರನ್ನು ನಿಯೋಜಿಸಲಾಗಿತ್ತು.ಉತ್ಸವದ ವಿಶೇಷತೆಗಳುದೀಪೋತ್ಸವದಲ್ಲಿ 50ಕ್ಕೂ ಹೆಚ್ಚು ದೇಶಗಳ ರಾಯಭಾರಿಗಳು ಭಾಗಿಯಾಗಿದ್ದರು. ಅಲ್ಲದೇ ದೀಪೋತ್ಸವದ ಬಳಿಕ ಆಕರ್ಷಕ ಲೇಸರ್ ಶೋ ನಡೆಯಿತು. ಶನಿವಾರ ಮಧ್ಯಾಹ್ನ ಅಯೋಧ್ಯೆಯ ಸಾಕೇತ್ ಪದವಿ ಕಾಲೇಜಿನಿಂದ ರಾಮ್ ಕಥಾ ಪಾರ್ಕ್‌ವರೆಗೆ ಉತ್ತರ ಪ್ರದೇಶ ಸರ್ಕಾರದ ವಿವಿಧ ಇಲಾಖೆಗಳಿಂದ ಟ್ಯಾಬ್ಲೋ ಮೆರವಣಿಗೆ ನಡೆಯಿತು. ಈ ವೇಳೆ ರಾಮಾಯಣದ ಕಥೆಯನ್ನು ಚಿತ್ರಿಸುವ ಟ್ಯಾಬ್ಲೋಗಳಿದ್ದವು. ಈ ಮೆರವಣಿಗೆಯಲ್ಲಿ ದೇಶದ ಹಲವು ವಿವಿಧ ಪ್ರಕಾರದ ನರ್ತಕರು ಮನಮೋಹಕ ನೃತ್ಯ ಮಾಡಿ ಕಣ್ಮನ ಸೆಳೆದರು. ಈ ಪೈಕಿ ಅಜಂಗಢದ ಧೋಬಿಯಾ ಶೈಲಿ, ಹಿಮಾಚಲ ಪ್ರದೇಶದ ಕುಲು ನಾಟಿ, ಪಂಜಾಬ್‌ನ ಗಟ್ಕಾ ಮತ್ತು ಭಾಂಗ್ಡಾ ನೃತ್ಯ, ಗುಜರಾತ್‌ನ ಗರ್ಬಾ, ನಾಗ್ಪುರದ ಧೋಲ್ ತಾಶಾ ನೃತ್ಯ ಮಾಡಲಾಯಿತು. ಇದೇ ವೇಳೆ ವ್ಯಕ್ತಿಯೊಬ್ಬರು ಶ್ರೀರಾಮನ ವೇಷ ಧರಿಸಿ ನೋಡುಗರ ಗಮನ ಸೆಳೆದರು.