ವೈಫಲ್ಯ ಭೀತಿಯೇ ಯಶಸ್ಸಿಗೆ ಕಾರಣ: ಇಸ್ರೋ ಅಧ್ಯಕ್ಷ ಸೋಮನಾಥ್‌

| Published : Feb 06 2024, 01:34 AM IST / Updated: Feb 06 2024, 04:43 PM IST

ISRO Somanath in KP

ಸಾರಾಂಶ

ಕನ್ನಡಪ್ರಭ ಹಾಗೂ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಕಚೇರಿಗೆ ಭೇಟಿ ನೀಡಿದ್ದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಅಧ್ಯಕ್ಷರಾದ ಸೋಮನಾಥ್‌ ಅವರು ಯಶಸ್ಸಿಗೆ ವೈಫಲ್ಯವೇ ಯಶಸ್ಸಿಗೆ ಕಾರಣ ಎಂದು ಅಭಿಮತ ವ್ಯಕ್ತಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

‘ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯಲ್ಲಿ ತಾಂತ್ರಿಕ ಚೌಕಟ್ಟು ಮೀರಿದ ವಿಚಾರಗಳಿರುತ್ತವೆ. ಚಂದ್ರಯಾನದಂತಹ ಹೈ ಪ್ರೊಫೈಲ್‌ ಯೋಜನೆ ಯಶಸ್ಸಿಗಾಗಿ ತಂಡದೊಟ್ಟಿಗೆ ತಂತ್ರಜ್ಞಾನ ವಿಚಾರ ದಾಟಿ ಮ್ಯಾನೇಜ್‌ಮೆಂಟ್ ತಂತ್ರಗಾರಿಕೆಯ ಆಟವಾಡಬೇಕಾಗುತ್ತದೆ. 

ಸಂಶಯಾಸ್ಪದ ದೃಷ್ಟಿಕೋನ, ಮುಕ್ತ ವಿಚಾರ ಮಂಡನೆ, ಅಹಂಕಾರದ ಆಚೆ ಬಂದು ಕೆಲಸದಲ್ಲಿ ತೊಡಗುವಂತೆ ಮಾಡುವುದು ತೀರಾ ಅಗತ್ಯ.’

ಇದು ಚಂದ್ರಯಾನ-3, ಆದಿತ್ಯಯಾನ ಮಿಷನ್‌ಗಳ ಯಶಸ್ಸಿನ ರೂವಾರಿ ಇಸ್ರೋ ಅಧ್ಯಕ್ಷ ಎಸ್‌.ಸೋಮನಾಥ್‌ ಅವರ ಮುಕ್ತ ಮಾತು. ಸೋಮವಾರ ‘ಕನ್ನಡಪ್ರಭ-ಏಷ್ಯಾನೆಟ್‌ ಸುವರ್ಣ ನ್ಯೂಸ್‌’ ಸಂಸ್ಥೆಗೆ ಆಗಮಿಸಿ ಏಷ್ಯಾನೆಟ್‌ ನ್ಯೂಸ್‌ ಚೇರ್‌ಮನ್‌ ರಾಜೇಶ್‌ ಕಾಲ್ರಾ, ಕನ್ನಡಪ್ರಭ-ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಪ್ರಧಾನ ಸಂಪಾದಕ ರವಿ ಹೆಗಡೆ ಹಾಗೂ ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್‌ ಚಾನಲ್‌ಗಳ ವರದಿಗಾರಿಕೆ ಹಾಗೂ ಸಂಪಾದಕೀಯ ವಿಭಾಗದ ಮುಖ್ಯಸ್ಥರೊಂದಿಗೆ ನಡೆಸಿದ ಸಂವಾದದಲ್ಲಿ ಬಾಹ್ಯಾಕಾಶ ಯಾನಗಳ ಯಶಸ್ಸಿನ ಹಿಂದಿನ ಭಿನ್ನಮುಖಗಳನ್ನು ಅವರು ತಿಳಿಸಿದರು.

ನಿರ್ಧಾರಕ್ಕೆ ಮುನ್ನ ಚರ್ಚೆ: ಇಸ್ರೋ ಸೇರಿ ಯಾವುದೇ ಸಂಸ್ಥೆಯಲ್ಲಿ ವಿಫಲತೆ ಎನ್ನುವುದು ಸಂಸ್ಥೆಯ ಮ್ಯಾನೇಜ್‌ಮೆಂಟ್‌ಗೆ ಸಂಬಂಧಿಸಿದ್ದೇ ಹೊರತು ತಾಂತ್ರಿಕತೆಗಲ್ಲ. ಪ್ರತಿ ತಾಂತ್ರಿಕ ವೈಫಲ್ಯವೂ ವ್ಯವಸ್ಥೆಯ ಸೋಲಾಗಿರುತ್ತದೆ. 

ಇಸ್ರೋ ಚೇರ್‌ಮನ್ ಆದ ಬಳಿಕ ಚರ್ಚೆ, ವಾದ ಮಂಡನೆಗೆ ಅವಕಾಶ, ಮ್ಯಾನೇಜ್‌ಮೆಂಟ್‌ನ ಟ್ರಿಕ್ಸ್‌ಗಳ ಜೊತೆ ಹೆಜ್ಜೆಯಿಟ್ಟಿದ್ದು ಯಶಸ್ಸಿಗೆ ಕಾರಣವಾಯಿತು. 

ನಿರ್ಧಾರ ಕೈಗೊಳ್ಳುವುದಕ್ಕೂ ಮುನ್ನ ಆಂತರಿಕ ಚರ್ಚೆ, ಪ್ರಶ್ನಿಸುವ ಸಂಸ್ಕೃತಿ ಇರುವುದು ಮುಖ್ಯ. ಈ ಸಂಸ್ಕೃತಿ ಇಲ್ಲದಿದ್ದರೆ ಯೋಜನೆ ವಿಫಲವಾಗುವ ಸಾಧ್ಯತೆ ಹೆಚ್ಚಿರುತ್ತದೆ ಎಂದರು.

ಇಸ್ರೋದಲ್ಲಿ ಪ್ರತಿ ಹಂತದಲ್ಲೂ ವಿಶ್ಲೇಷಣೆ, ಅನುಮಾನದ ದೃಷ್ಟಿ ಅಳವಡಿಸಿಕೊಂಡಿದ್ದೇ ಚಂದ್ರಯಾನ-3, ಆದಿತ್ಯ ಎಲ್-1, ಗಗನಯಾನದ ಯಶಸ್ಸಿಗೆ ಕಾರಣ. ವೈಫಲ್ಯದ ಸಂಭಾವ್ಯತೆ ಬಗ್ಗೆ ಸದಾ ಎಚ್ಚರವಾಗಿದ್ದು, ಮುಂಜಾಗೃತೆ ವಹಿಸುತ್ತಿದ್ದೆವು. 

ಹೀಗಾಗಿ ತಾಂತ್ರಿಕ ವೈಫಲ್ಯ ಸಾಧ್ಯತೆ ತೀರಾ ಕಡಿಮೆಯಿತ್ತು. ಬಾಹ್ಯಾಕಾಶ ಮಿಷನ್‌ಗಳಲ್ಲಿ ‘ಅಲ್ಗೊರಿದಂ’ ಪ್ರಮುಖ ಪಾತ್ರ ವಹಿಸುತ್ತದೆ. ಸರಿ ತಪ್ಪಿನ ಸಾಧ್ಯಾಸಾಧ್ಯತೆಗಳನ್ನು ಕಂಪ್ಯೂಟರ್ ಪ್ರೋಗ್ರಾಂ ತಿಳಿಸುತ್ತದೆ. 

ಒಂದು ಕ್ಷಣ ಮೈಮರೆತರೂ ತಪ್ಪಾಗಬಹುದು ಎಂಬುದನ್ನು ಮರೆಯಲು ಸಾಧ್ಯವಿರಲಿಲ್ಲ ಎಂದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಇಸ್ರೋ ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗೀ ಕಂಪನಿಗಳ ಸಹಭಾಗಿತ್ವವನ್ನು ಪ್ರೋತ್ಸಾಹಿಸುತ್ತಿದೆ.

ನಮ್ಮಲ್ಲಿ ಈವರೆಗೆ ಬಿಡಿಭಾಗ, ಉಪಕರಣಗಳನ್ನು ಪೂರೈಕೆ ಮಾಡುವ ಕಂಪನಿಗಳು ಮಾತ್ರ ಇವೆ. ಖಾಸಗಿ ಸ್ಯಾಟಲೈಟ್, ರಾಕೆಟ್‌ಗಳನ್ನು ಪರಿಪೂರ್ಣವಾಗಿ ರೂಪಿಸಲಾಗುತ್ತಿಲ್ಲ. 

ಅಪ್ಲಿಕೇಶನ್, ಇಮೇಜ್ ಪ್ರೊಸೆಸಿಂಗ್, ಕಮ್ಯೂನಿಕೇಶನ್‌ನಲ್ಲಿ ಕಂಪನಿಗಳು ಉತ್ತಮ ಬೆಳವಣಿಗೆ ಕಂಡಿವೆ ಎಂದರು.

ಖಾಸಗಿ ಸಂಸ್ಥೆಗೆ ಎಲ್ಲ ನೆರವು: ಬಾಹ್ಯಾಕಾಶ ಚಟುವಟಿಕೆಯಲ್ಲಿ ಖಾಸಗೀ ಸಂಸ್ಥೆಗಳು ಪಾಲ್ಗೊಳ್ಳಲು ಅವಕಾಶ ಕಲ್ಪಿಸಿದ ಬಳಿಕ ಖಾಸಗೀ ಸ್ಯಾಟಲೈಟ್‌ ರೂಪಿಸುವ ಐದು ಕಂಪನಿಗಳು ಬೆಂಗಳೂರು ಸೇರಿ ದೇಶದಲ್ಲಿ ತಲೆ ಎತ್ತಿವೆ. 

ಇವೆಲ್ಲ ಸದ್ಯ ಬಾಲ್ಯಾವಸ್ಥೆಯಲ್ಲಿವೆ. ಇಸ್ರೋ ಈ ರೀತಿಯ ಕಂಪನಿಗಳಿಗೆ ತಂತ್ರಜ್ಞಾನ, ಮಾನವ ಸಂಪನ್ಮೂಲ, ತಾಂತ್ರಿಕ ಪರೀಕ್ಷೆ ವೇಳೆ ಸಹಕಾರ ನೀಡಲಿದೆ. 

ವಿಸ್ತರಿಸುತ್ತಿರುವ ಸಣ್ಣ ಪ್ರಮಾಣದ ಸ್ಯಾಟಲೈಟ್‌ ಮಾರುಕಟ್ಟೆಗೆ ಪೂರಕವಾಗಿ ಹಾಗೂ ಬಾಹ್ಯಾಕಾಶ ಕ್ಷೇತ್ರದಲ್ಲಿ ದೇಶದ ಉದ್ಯಮ ರೂಪುಗೊಳ್ಳಲು ಇಸ್ರೋ ಎಲ್ಲ ರೀತಿಯಲ್ಲೂ ನೆರವಾಗಲಿದೆ ಎಂದು ಭರವಸೆ ನೀಡಿದರು.

ಗೆಲವು ಹೇಗೆ ನಮ್ಮಲ್ಲಿ ಹುರುಪು ತುಂಬಿದೆಯೋ ಹಾಗೆ ಹಿಂದಿನ ಸೋಲುಗಳು ಕೂಡ ಕಾಡಿವೆ. ಎಎಸ್‌ಎಲ್‌ವಿ ಸೋತಾಗ ಆಲ್ವೇಸ್ ಸೀ ಲಾಂಚ್ ವೆಹಿಕಲ್ ಎಂಬ ವ್ಯಂಗ್ಯದ ಟೀಕೆಗಳನ್ನೂ ಕೇಳಿದ್ದೇವೆ. 

ಬಳಿಕ ಪಿಎಸ್‌ಎಲ್‌ವಿ ಯಶಸ್ಸು ನಮಗೆ ಆತ್ಮವಿಶ್ವಾಸ ತುಂಬಿತು. ಆದರೆ, ವೈಫಲ್ಯಗಳು ನಮ್ಮನ್ನು ಕಂಗೆಡಿಸಿಲ್ಲ. ನಮ್ಮ ಸ್ಯಾಟಲೈಟ್‌ಗಳು ಸದುಪಯೋಗ ಆಗಿವೆಯೇ? ಜನತೆಗೆ ಉತ್ತಮ ಸೇವೆ ಒದಗಿಸಿದ್ದೇವಾ ಎಂಬ ಪ್ರಶ್ನೆಗಳು ಕಾಡಿವೆ ಎಂದರು.

ಜಾಗತಿಕವಾಗಿ ನಮ್ಮನ್ನು ಸಾಫ್ಟ್‌ವೇರ್ ಕೂಲಿ ಅಥವಾ ತೀರಾ ಅಗ್ಗದ ದರದಲ್ಲಿ ಸಾಫ್ಟವೇರ್ ಒದಗಿಸುವ ದೇಶ ಎಂದು ನೋಡಲಾಗುತ್ತಿದೆ.

ಇದರ ಬದಲಾಗಿ ಹೆಚ್ಚಿನ ಗುಣಮಟ್ಟದ ಸಾಫ್ಟ್‌ವೇರ್ ಒದಗಿಸುವ ದೇಶವಾಗಿ ನಮ್ಮನ್ನು ನೋಡಬೇಕು ಎಂಬುದಕ್ಕೆ ಸಹಮತ ವ್ಯಕ್ತಪಡಿಸಿದ ಸೋಮನಾಥ್, ನಮ್ಮ ಮಹತ್ವದ ಎಂಜಿನಿಯರಿಂಗ್ ಚಟುವಟಿಕೆಗೆ ನಮ್ಮದೇ ಸಾಫ್ಟವೇರ್ ಬಳಸುವಂತಾಗಬೇಕು. 

ಇಸ್ರೋದಲ್ಲಿ ಮಹತ್ವದ ಕಾರ್ಯಕ್ಕೆ ನಮ್ಮದೇ ಸಾಫ್ಟ್‌ವೇರ್ ಬಳಸುವುದನ್ನು ಆರಂಭಿಸಿದ್ದೇವೆ ಎಂದು ಹೇಳಿದರು.

ಚಂದ್ರಯಾನ-3 ಯಶಸ್ಸಿಗೆ ಕಾರಣವೇನು?
ಹಿಂದಿನ ಚಂದ್ರಯಾನದ ಸೋಲಿಗೆ ಗೈಡೆನ್ಸ್ ಪ್ರೋಗ್ರಾಂ ವೈಫಲ್ಯ ಕಾರಣವಾಗಿತ್ತು. ಇದರಿಂದಾಗಿ ಸಾಫ್ಟ್‌ಲ್ಯಾಂಡ್ ಆಗಲು ಸಾಧ್ಯವಾಗಿರಲಿಲ್ಲ.

 ನನ್ನ ಸಹಪಾಠಿಯಾಗಿದ್ದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನ ಪ್ರೊಫೆಸರ್‌ ಅವರನ್ನು ನಮ್ಮ ತಂಡ ರೂಪಿಸುವ ಪ್ರೋಗ್ರಾಂನ ವಿಶ್ಲೇಷಣೆ ಮಾಡುವಂತೆ ಕೋರಿದ್ದೆ. 

ಇದರಿಂದ ಪ್ರೋಗ್ರಾಂ ವಿಭಾಗದಲ್ಲಿ ಸರಿ-ತಪ್ಪುಗಳ ಬಗ್ಗೆ ಒಂದು ರೀತಿಯ ಆತಂಕವಿತ್ತು. ಇನ್ನೊಬ್ಬರ ಭಯ ಇದ್ದಾಗಲೇ ಕೆಲಸ ಸರಿಯಾಗಿ ಆಗುತ್ತದೆ. ಇದರಿಂದಾಗಿ ನಮ್ಮ ಸಾಫ್ಟ್‌ವೇರ್ ಹೆಚ್ಚು ಅಭಿವೃದ್ಧಿಪಡಿಸಿಕೊಳ್ಳಲು ಸಾಧ್ಯವಾಯಿತು. 

ಈ ರೀತಿಯ ಹಲವು ಮ್ಯಾನೇಜ್‌ಮೆಂಟ್ ಟ್ರಿಕ್ಸ್‌ಗಳನ್ನು ಪ್ರಯೋಗಿಸಿ ಚಂದ್ರಯಾನ-3ರಲ್ಲಿ ಗೆದ್ದೆವು ಎಂದು ಸೋಮನಾಥ್‌ ಹೇಳಿದರು. 

ಐಟಿ ಕ್ಷೇತ್ರದಂತಹ ಕ್ರಾಂತಿಯಾಗಬೇಕು: 2047ರ ಹೊತ್ತಿಗೆ ನಮ್ಮಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಸ್ಪೇಸ್ ಇಂಡಸ್ಟ್ರಿಗಳನ್ನು ನಿರ್ಮಿಸುವ ಗುರಿ ಇಟ್ಟುಕೊಳ್ಳಬೇಕಿದೆ. 

ಜೊತೆಗೆ ಐಟಿ ಕ್ಷೇತ್ರದಲ್ಲಾದಂತಹ ಕ್ರಾಂತಿಕಾರಕ ಬೆಳವಣಿಗೆಗಳು ಬಾಹ್ಯಾಕಾಶ ಕ್ಷೇತ್ರದಲ್ಲೂ ಆಗಬೇಕು. ಐರೋಪ್ಯ ದೇಶದಲ್ಲಿ ಸ್ಪೇಸ್‌ ಎಕ್ಸ್‌ ರೀತಿಯ ಹಲವು ಸ್ಪೇಸ್‌ ಇಂಡಸ್ಟ್ರಿಗಳಿವೆ ಆದರೆ, ನಮ್ಮಲ್ಲಿ ಇಂದಿಗೂ ಅವುಗಳಷ್ಟು ತಾಂತ್ರಿಕವಾಗಿ ಮುಂದುವರಿದ ಸಂಸ್ಥೆಗಳಿಲ್ಲ ಎಂದು ಸೋಮನಾಥ್‌ ಹೇಳಿದರು.

ಭಾರತೀಯ ಬಾಹ್ಯಾಕಾಶ ಕ್ಷೇತ್ರದ ಇತಿಹಾಸ ಯುರೋಪ್, ಅಮೆರಿಕಾ ದೇಶಗಳಿಗೆ ಹೋಲಿಸಿದರೆ ಭಿನ್ನವಾದುದು. ಅವರು ಮೊದಲಿಗೆ ಯುದ್ಧದ ದೃಷ್ಟಿಯಿಂದ ಮಿಸೈಲ್‌ಗಳನ್ನು ರೂಪಿಸಿಕೊಳ್ಳುವ ಮೂಲಕ ಹೆಜ್ಜೆಯಿಟ್ಟರು. 

ಬಳಿಕ ರಾಕೆಟ್, ಸ್ಯಾಟಲೈಟ್ ನಿರ್ಮಿಸಿದ್ದಾರೆ. ಭಾರತ ಇದಕ್ಕೆ ವಿರುದ್ಧವಾಗಿ ಮೊದಲು ಅಪ್ಲಿಕೇಶನ್‌ಗಳನ್ನು ರೂಪಿಸಿಕೊಂಡು ಸ್ಯಾಟಲೈಟ್‌ಗಳನ್ನು ರಷ್ಯಾ, ಅಮೆರಿಕಾದಿಂದ ತರಿಸಿಕೊಂಡಿತ್ತು. 

ಬಳಿಕ ಸ್ಯಾಟಲೈಟ್, ರಾಕೆಟ್‌ಗಳನ್ನು ರೂಪಿಸಿಕೊಂಡು ನಂತರ ಮಿಸೈಲ್ ನಿರ್ಮಾಣಕ್ಕೆ ಬಂದಿದ್ದೇವೆ ಎಂದರು.

ಐರೋಪ್ಯ ದೇಶಗಳಲ್ಲಿ ಸಾಕಷ್ಟು ಬಾಹ್ಯಾಕಾಶ ಇಂಡಸ್ಟ್ರಿಗಳಿವೆ. ಆದರೆ ನಮ್ಮಲ್ಲಿ ಇಂದಿಗೂ ಪೂರ್ಣಪ್ರಮಾಣದಲ್ಲಿ ರೂಪುಗೊಂಡ ಸ್ಪೇಸ್‌ ಇಂಡಸ್ಟ್ರಿಗಳಿಲ್ಲ. 

ಹೀಗಾಗಿ 2047ಕ್ಕೆ ಅತ್ಯಾಧುನಿಕ ತಂತ್ರಜ್ಞಾನಗಳನ್ನು ರೂಪಿಸಿಕೊಂಡ ಸ್ಪೇಸ್ ಇಂಡಸ್ಟ್ರಿಗಳು ನಿರ್ಮಾಣವಾಗಬೇಕು ಎಂದು ಹೇಳಿದರು.