ಸಾರಾಂಶ
ಬೆಂಗಳೂರು : ರಾಜ್ಯದ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಉತ್ತೇಜನ ನೀಡುವ 27ನೇ ಆವೃತ್ತಿಯ ಬೆಂಗಳೂರು ಟೆಕ್ ಶೃಂಗಸಭೆ ನ.19ರಿಂದ 21ರವರೆಗೆ ಬೆಂಗಳೂರು ಅರಮನೆ ಮೈದಾನದಲ್ಲಿ ನಡೆಯಲಿದ್ದು, ಅದಕ್ಕಾಗಿ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
ಬೆಂಗಳೂರು ಟೆಕ್ ಶೃಂಗದ ಕುರಿತಂತೆ ಬೆಂಗಳೂರು ಅರಮನೆ ಮೈದಾನದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಿಯಾಂಕ್ ಖರ್ಗೆ, ಈ ಬಾರಿಯ ಟೆಕ್‌ಸಮ್ಮಿಟ್ ಅನ್‌ಬೌಂಡ್ (ಅನಿಯಮಿತ) ಪರಿಕಲ್ಪನೆಯಲ್ಲಿ ಆಯೋಜಿಸಲಾಗುತ್ತಿದೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರ, ಸ್ಟಾರ್ಟ್‌ಅಪ್‌ಗಳ ಸರ್ವತೋಮುಖ ಅಭಿವೃದ್ಧಿಯನ್ನು ಮುಖ್ಯ ಉದ್ದೇಶವಾಗಿಸಿಕೊಂಡು ಟೆಕ್ ಶೃಂಗದಲ್ಲಿ ಜಾಗತಿಕ ಪಾಲುದಾರಿಕೆಗೆ ಆದ್ಯತೆ ನೀಡಲಾಗುತ್ತಿದೆ.
ತಾಂತ್ರಿಕ ಉತ್ಕೃಷ್ಟತೆ, ನಾವೀನ್ಯತೆ ಮತ್ತು ಬೆಳವಣಿಗೆಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದ್ದು, ಅದನ್ನು ಮತ್ತಷ್ಟು ಉತ್ತಮಗೊಳಿಸಲು ಟೆಕ್ ಶೃಂಗ ನೆರವಾಗಲಿದೆ. 3 ದಿನಗಳ ಟೆಕ್ ಶೃಂಗಕ್ಕೆ ನ.19ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಚಾಲನೆ ನೀಡಲಿದ್ದಾರೆ.
ಈ ಸಂದರ್ಭದಲ್ಲಿ ಜರ್ಮನಿಯ ಆರ್ಥಿಕ ವ್ಯವಹಾರ ಮತ್ತು ಫೆಡರಲ್ ಸಚಿವಾಲಯದ ಸ್ಟಾರ್ಟ್‌ಅಪ್‌ಗಳ ಆಯುಕ್ತ ಡಾ। ಅನ್ನಾ ಕ್ರಿಸ್ಟ್‌ಮನ್, ಫ್ರಾನ್ಸ್ ಆರ್ಥಿಕ ಅಭಿವೃದ್ಧಿಯ ರಿಕವರಿ ವಿಭಾಗದ ಉಪಾಧ್ಯಕ್ಷೆ ಅಲೆಕ್ಸಾಂಡ್ರಾ ಡಬ್ಲಾಂಚೆ, ಇನ್ನಿತರರು ಉಪಸ್ಥಿತರಿರಲಿದ್ದಾರೆ ಎಂದರು.
ಟೆಕ್ ಶೃಂಗದಲ್ಲಿ ಭಾಗಿ ಆಗುವ ದೇಶಗಳಿವು : ಟೆಕ್ ಶೃಂಗಕ್ಕೆ ಆಸ್ಟ್ರೇಲಿಯಾ ಪಾಲುದಾರಿಕೆಯನ್ನು ಹೊಂದಿದೆ. ಅದರ ಜತೆಗೆ ಯುನೈಟೆಡ್ ಕಿಂಗ್‌ಡಂ, ಪ್ರಾನ್ಸ್, ಅಮೆರಿಕ, ಆಸ್ಟ್ರಿಯಾ, ಡೆನ್ಮಾರ್ಕ್, ಫಿನ್‌ಲ್ಯಾಂಡ್, ಪೋಲೆಂಡ್, ಜಪಾನ್, ಜರ್ಮನಿ, ಸ್ವಿಟ್ಜರ್‌ಲ್ಯಾಂಡ್, ಇಸ್ರೇಲ್ ಸೇರಿದಂತೆ 15ಕ್ಕೂ ಹೆಚ್ಚಿನ ದೇಶಗಳ ಉನ್ನತ ಮಟ್ಟದ ನಿಯೋಗ, ಅಧಿಕಾರಿಗಳು, ಖಾಸಗಿ ಸಂಸ್ಥೆಗಳು ಪಾಲ್ಗೊಳ್ಳಲಿವೆ.
ಶೃಂಗದಲ್ಲಿ ಏನೆಲ್ಲ ಇರಲಿದೆ?: ಟೆಕ್ ಶೃಂಗದಲ್ಲಿ ಐಟಿ, ಡೀಪ್‌ಟೆಕ್ ಮತ್ತು ಟ್ರೆಂಡ್ಸ್, ಬಯೋಟೆಕ್, ಹೆಲ್ತ್‌ಟೆಕ್, ಸ್ಮಾರ್ಟ್‌ಆ್ಯಪ್ ಎಕೋಸಿಸ್ಟಂ, ಗ್ಲೋಬಲ್ ಇನೋವೇಶನ್ ಅಲಯನ್ಸ್, ಭಾರತ ಮತ್ತು ಯುಎಸ್‌ಎ ಟೆಕ್ ಕಾನ್‌ಕ್ಲೇವ್, ಎಲೆಕ್ಟ್ರೋ-ಸೆಮಿಕಾನ್ ಟ್ರ್ಯಾಕ್ ಕುರಿತಂತೆ ಸಮ್ಮೇಳನದಲ್ಲಿ ಚರ್ಚೆ, ಸಂವಾದಗಳು ನಡೆಯಲಿವೆ. ಉದ್ಯಮದ ಪ್ರಮುಖರು, ನೀತಿ ನಿರೂಪಕರು, ರಾಜತಾಂತ್ರಿಕ ಪ್ರತಿನಿಧಿಗಳು, ಸ್ಟಾರ್ಟ್‌ಆ್ಯಪ್ ಸಂಸ್ಥೆಯ ಮುಖ್ಯಸ್ಥರು ಸೇರಿದಂತೆ ಮತ್ತಿತರರು ಟೆಕ್ ಶೃಂಗದಲ್ಲಿ ಪಾಲ್ಗೊಂಡು ತಮ್ಮ ವಿಚಾರ ಮಂಡಿಸಲಿದ್ದಾರೆ.
ಜತೆಗೆ ಇನ್ನೋವೇಶನ್ ಡೋಮ್ ಕಾರ್ಯಕ್ರಮ, ಕಾರ್ಯಾಗಾರ, ನೂತನ ಆವಿಷ್ಕಾರ, ಉತ್ಪನ್ನಗಳ ಬಿಡುಗಡೆ ಸೇರಿದಂತೆ ಮತ್ತಿತರ ಕಾರ್ಯಕಗಳು ಇರಲಿವೆ. ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಸ್ಟಾರ್ಟ್‌ಅಪ್ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ ಸಂಸ್ಥೆ ಮತ್ತು ವ್ಯಕ್ತಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.
ಮೊದಲ ಬಾರಿಗೆ ರಿಪೋರ್ಟ್ ಕಾರ್ಡ್ ಬಿಡುಗಡೆ ಮಾಡ್ತೀವಿ
ರಾಜ್ಯದ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಸ್ಟಾರ್ಟ್‌ಅಪ್ ಸೇರಿದಂತೆ ಮತ್ತಿತರ ಕ್ಷೇತ್ರಗಳ ಅಭಿವೃದ್ಧಿಗಾಗಿ ಟೆಕ್ ಶೃಂಗ ಆಯೋಜಿಸಲಾಗುತ್ತಿದೆ. 27ನೇ ಆವೃತ್ತಿಯ ಟೆಕ್ ಶೃಂಗವು ರಾಜ್ಯದ ತಂತ್ರಜ್ಞಾನ ಪ್ರದರ್ಶಿಸಲಾಗುತ್ತದೆ. ಇಲ್ಲಿ ಹೂಡಿಕೆಗಿಂತ ಬೇರೆ ದೇಶಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗುತ್ತದೆ. ಇದೇ ಮೊದಲ ಬಾರಿಗೆ ಕಳೆ ಬಾರಿಯ ಶೃಂಗದ ರಿಪೋರ್ಟ್ ಕಾರ್ಡ್ ಬಿಡುಗಡೆ ಮಾಡಲಾಗುವುದು.
-ಪ್ರಿಯಾಂಕ್ ಖರ್ಗೆ, ಐಟಿ-ಬಿಟಿ ಸಚಿವ.