ಹೆಬ್ಬಾಳದ ಜಿಕೆವಿಕೆಯಲ್ಲಿ ಆಯೋಜಿಸಿರುವ ಕೃಷಿ ಮೇಳಕ್ಕೆ 3ನೇ ದಿನ ಲಕ್ಷಾಂತರ ಜನರು ಭೇಟಿ

| Published : Nov 17 2024, 01:16 AM IST / Updated: Nov 17 2024, 05:39 AM IST

ಸಾರಾಂಶ

ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯವು ಹೆಬ್ಬಾಳದ ಜಿಕೆವಿಕೆಯಲ್ಲಿ ಆಯೋಜಿಸಿರುವ ‘ಕೃಷಿ ಮೇಳ’ಕ್ಕೆ ಮೂರನೇ ದಿನವಾದ ಶನಿವಾರ ಲಕ್ಷಾಂತರ ಸಾರ್ವಜನಿಕರು ಭೇಟಿ ನೀಡಿದ್ದು ಭರ್ಜರಿ ವಹಿವಾಟು ನಡೆಯಿತು.

ಸಿದ್ದು ಚಿಕ್ಕಬಳ್ಳೇಕೆರೆ

 ಬೆಂಗಳೂರು : ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯವು ಹೆಬ್ಬಾಳದ ಜಿಕೆವಿಕೆಯಲ್ಲಿ ಆಯೋಜಿಸಿರುವ ‘ಕೃಷಿ ಮೇಳ’ಕ್ಕೆ ಮೂರನೇ ದಿನವಾದ ಶನಿವಾರ ಲಕ್ಷಾಂತರ ಸಾರ್ವಜನಿಕರು ಭೇಟಿ ನೀಡಿದ್ದು ಭರ್ಜರಿ ವಹಿವಾಟು ನಡೆಯಿತು.

ಗುರುವಾರ ಮತ್ತು ಶುಕ್ರವಾರ ಮೇಳಕ್ಕೆ ಸಾರ್ವಜನಿಕರು ಆಗಮಿಸಲು ‘ವರುಣ’ ಒಂದಷ್ಟು ಅಡ್ಡಿ ಉಂಟು ಮಾಡಿದ್ದ. ಆದರೆ ಶನಿವಾರ ಮಳೆ ಬಿಡುವು ನೀಡಿದ್ದು, ಜೊತೆಗೆ ವಾರಾಂತ್ಯದ ಹಿನ್ನೆಲೆಯಲ್ಲಿ ಜನರು ಭಾರೀ ಸಂಖ್ಯೆಯಲ್ಲಿ ಆಗಮಿಸಿ ಕೃಷಿ ಯಂತ್ರೋಪಕರಣಗಳು, ಹೊಸ ತಳಿಗಳು, ನೂತನ ತಾಂತ್ರಿಕತೆಗಳನ್ನು ಕಣ್ತುಂಬಿಕೊಂಡರು.

ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರಿಂದ ಜಿಕೆವಿಕೆ ಸುತ್ತಮುತ್ತಲಿನ ರಸ್ತೆಗಳಲ್ಲಿ ವಾಹನ ಸಂಚಾರ ದಟ್ಟಣೆ ಉಂಟಾಗಿ ವಾಹನಗಳು ಮಂದಗತಿಯಲ್ಲಿ ಸಾಗುವಂತಾಯಿತು. ಕೃಷಿ ವಿವಿಯು ನೀಡುವ ರಿಯಾಯಿತಿ ದರದ ಮುದ್ದೆ ಊಟವನ್ನು 15,500ಕ್ಕೂ ಅಧಿಕ ಮಂದಿ ಸವಿದಿದ್ದು, ಮಳಿಗೆಗಳಲ್ಲಿ ಸುಮಾರು ₹1.75 ಕೋಟಿ ವಹಿವಾಟು ನಡೆದಿದೆ.

ಸಸಿ, ಬೀಜ ಭರ್ಜರಿ ಮಾರಾಟ:

ಕೃಷಿ ಮೇಳದಲ್ಲಿ ಹಣ್ಣಿನ ಸಸಿಗಳು, ತರಕಾರಿ, ಸೊಪ್ಪಿನ ಬೀಜ ಖರೀದಿಸಲು ಜನರು ಮುಗಿಬಿದ್ದದ್ದು ಕಂಡುಬಂತು. ಕೃಷಿ ಮೇಳಕ್ಕೆ ಆಗಮಿಸಿದ ನೆನಪಿಗಾಗಿ ಸಸಿ ಖರೀದಿ ಮಾಡುತ್ತೇವೆ. ನಮಗಿಷ್ಟವಾದ ಉತ್ತಮ ತಳಿಯ ಸಸಿಗಳ ಆಯ್ಕೆಗೆ ಅವಕಾಶ ಇರುವುದರಿಂದ ಖರೀದಿಗೆ ಹಿಂದೆ ಮುಂದೆ ನೋಡುವುದಿಲ್ಲ ಎಂದು ಬಹಳಷ್ಟು ಸಾರ್ವಜನಿಕರು ಅಭಿಪ್ರಾಯಪಟ್ಟರು.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮಡಿಕೇರಿಯ ‘ಪ್ರಥಮ್‌’ ತಳಿಯ ಮಾರಾಟಗಾರ ಕಲೀಲ್‌, ‘ಹಣ್ಣು, ಹೂವು, ತರಕಾರಿ, ಸೊಪ್ಪಿನ ಬೀಜಗಳ 10, 20 ಗ್ರಾಂ ಪ್ಯಾಕೇಟ್‌ಗಳನ್ನು ಮಾರಾಟ ಮಾಡುತ್ತಿದ್ದೇವೆ. ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ವ್ಯಾಪಾರವೂ ಚೆನ್ನಾಗಿದೆ’ ಎಂದು ತಿಳಿಸಿದರು.

ಕೃಷಿ ಬೆಳೆಗಳು, ಹೊಸ ಉತ್ಪನ್ನಗಳನ್ನು ವೀಕ್ಷಿಸಲು ಇದೊಂದು ಉತ್ತಮ ಅವಕಾಶವಾಗಿದೆ. ಮಕ್ಕಳಿಗೆ ಕೃಷಿ ಬಗ್ಗೆ ಆಸಕ್ತಿ ಮೂಡಿಸಲು ಸಹ ಕೃಷಿ ಮೇಳಗಳು ಸಹಕಾರಿಯಾಗಿವೆ. ಭೇಟಿ ನೀಡಿದ್ದಕ್ಕೆ ಬಹಳ ಖುಷಿಯಾಗಿದೆ.

-ಲಾವಣ್ಯ, ಗೃಹಿಣಿ.

ಬೇಸಾಯದಲ್ಲಿ ಅಳವಡಿಸಿಕೊಳ್ಳಬಹುದಾದ ನೂತನ ತಂತ್ರಜ್ಞಾನಗಳು, ಕೃಷಿಕರಿಗೆ ನೀರಾವರಿಗೆ ಅಗತ್ಯವಾದ ಯಂತ್ರೋಪಕರಣಗಳು ಸೇರಿದಂತೆ ಒಕ್ಕಲುತನ್ನಕೆ ಬೇಕಾದ ಎಲ್ಲವೂ ಒಂದೇ ಸೂರಿನಡಿ ಲಭ್ಯವಾಗುವುದಿಂದ ಇದೊಂದು ಉತ್ತಮ ಮೇಳವಾಗಿದೆ.

-ಯೋಗೇಶ್‌, ಕೃಷಿಕ

ವ್ಯಾಪಾರಕ್ಕೆ ನೆಟ್ವರ್ಕ್‌ ಅಡ್ಡಿ

ಚಿಕ್ಕಮಗಳೂರು, ಕೊಡಗು, ಹಾಸನ ಜಿಲ್ಲೆಯ ಕಾಫಿ ಪ್ಲಾಂಟೇಷನ್‌ಗಳ ಮಾಲೀಕರ ಪತ್ನಿಯರು ‘ವುಮೆನ್‌ ಕಾಫಿ ಪ್ರಮೋಷನ್‌ ಕೌನ್ಸಿಲ್‌ ಸ್ಥಾಪಿಸಿಕೊಂಡಿದ್ದು ಇದರಲ್ಲಿ 200ಕ್ಕೂ ಅಧಿಕ ಸದಸ್ಯೆಯರಿದ್ದಾರೆ. ಕೃಷಿ ಮೇಳದಲ್ಲಿ ಸದಸ್ಯೆಯರ ಕಾಫಿ ಬ್ರಾಂಡ್‌ಗಳನ್ನು ಮಾರಾಟ ಮಾಡಲಾಗುತ್ತಿದೆ. ಈ ಬಗ್ಗೆ ಮಾತನಾಡಿದ ಸುಷ್ಮಾ, ‘ವ್ಯಾಪಾರವೇನೋ ಚೆನ್ನಾಗಿದೆ. ಆದರೆ ನೆಟ್ವರ್ಕ್‌ ಸಮಸ್ಯೆಯಿಂದಾಗಿ ಗ್ರಾಹಕರು ಗೂಗಲ್‌ ಪೇ, ಫೋನ್‌ ಪೇ ಮೂಲಕ ಹಣ ಪಾವತಿಸಲು ಸಾಧ್ಯವಾಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಉಚಿತ ತರಬೇತಿಗೆ ನೋಂದಣಿ

ಕಾರ್ಪೊರೇಟ್‌ ಸಾಮಾಜಿಕ ಜವಾಬ್ದಾರಿ(ಸಿಎಸ್‌ಆರ್‌) ಯೋಜನೆಯಡಿ ಎಸ್ಕಾರ್ಟ್‌ ಕಂಪನಿಯು ರೈತರು, ಮಹಿಳೆಯರು ಮತ್ತು ಆಸಕ್ತರಿಗೆ ಚಂದಾಪುರದ ರಾಮಕೃಷ್ಣಪುರದಲ್ಲಿ ಊಟ-ವಸತಿ ಸಹಿತ ಮೂರು ದಿನಗಳ ಉಚಿತ ತರಬೇತಿ ನೀಡಲಿದೆ. ಕೃಷಿ ಮೇಳದ ಕಂಪನಿಯ ಮಳಿಗೆಗೆ ಬಹಳಷ್ಟು ಜನರು ಭೇಟಿ ನೀಡಿ ತರಬೇತಿಗೆ ಹೆಸರು ನೋಂದಣಿ ಮಾಡಿಸಿದ್ದಾರೆ.

ಕೃಷಿ ಯಾಂತ್ರೀಕರಣ, ಆಧುನಿಕ ಉಪಕರಣಗಳ ಬಳಕೆ, ಟ್ರ್ಯಾಕ್ಟರ್‌ ನಿರ್ವಹಣೆ, ನೀರಾವರಿ ಪದ್ಧತಿ, ಒಣ ಬೇಸಾಯ, ತೋಟಗಾರಿಕೆ, ಸಾವಯವ ಕೃಷಿ, ಹೈನುಗಾರಿಕೆ, ರೇಷ್ಮೆ, ಜೇನು ಕೃಷಿ, ತಾರಸಿ ತೋಟ ಮತ್ತಿತರ ಮಾಹಿತಿಯನ್ನು ತರಬೇತಿ ಸಂದರ್ಭದಲ್ಲಿ ನೀಡಲಾಗುತ್ತದೆ. ಆಸಕ್ತರು ಮಾಹಿತಿಗಾಗಿ ಮೊ: 98442 62622 ಸಂಪರ್ಕಿಸಬಹುದು.

3 ದಿನದಲ್ಲಿ ನೂರು ಜನರೂ ಭೇಟಿ ನೀಡಲಿಲ್ಲ!

ಬಳ್ಳಾರಿ ರಸ್ತೆಯಲ್ಲಿ ಹೆಬ್ಬಾಳ ಕಡೆಯಿಂದ ಆಗಮಿಸಿ ಜಿಕೆವಿಕೆ ಪ್ರವೇಶಿಸುವಾಗ ಪ್ರವೇಶ ದ್ವಾರದ ಎಡ ಭಾಗದಲ್ಲೇ ಕೋಟ್ಯಂತರ ರು. ವೆಚ್ಚದಲ್ಲಿ ಸುಸಜ್ಜಿತವಾದ ‘ಕೃಷಿ ವಿಜ್ಞಾನಗಳ ವಸ್ತುಸಂಗ್ರಹಾಲಯ’ ಸ್ಥಾಪಿಸಲಾಗಿದೆ. ಕೃಷಿ ಮೇಳಕ್ಕೆ ಲಕ್ಷಾಂತರ ಜನ ಭೇಟಿ ನೀಡಿದರೂ ಸಹ ಈ ವಸ್ತುಸಂಗ್ರಹಾಲಯಕ್ಕೆ ಮೂರು ದಿನದಲ್ಲಿ ನೂರು ಜನರೂ ಭೇಟಿ ನೀಡಿಲ್ಲ. ಕೃಷಿ ಮೇಳಕ್ಕೆ ಆಗಮಿಸುವವರಿಗೆ ಇಲ್ಲಿ ಇಂತಹ ಒಂದು ಕೃಷಿ ವಸ್ತುಸಂಗ್ರಹಾಲಯವಿದೆ ಎಂದು ಗೊತ್ತೇ ಆಗುವುದಿಲ್ಲ.