ಸಾರಾಂಶ
ಬೆಂಗಳೂರು : ಒಂದೇ ಸೂರಿನಡಿ ಲೇಖಕರು, ಪ್ರಕಾಶಕರು ಹಾಗೂ ಸಾಹಿತ್ಯಾಸಕ್ತರ ಸಮಾಗಮಕ್ಕೆ ವೇದಿಕೆಯಾಗಿದ್ದ ಮೂರು ದಿನಗಳ ಕನ್ನಡ ಪುಸ್ತಕ ಪ್ರದರ್ಶನ ಮತ್ತು ಮಾರಾಟದ ‘ವೀರಲೋಕ ಪುಸ್ತಕ ಸಂತೆ-2’ಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.
ವೀರಲೋಕ ಪ್ರಕಾಶನ ಸಂಸ್ಥೆ ಜನಗರದ ಶಾಲಿನಿ ವೈದಾನದಲ್ಲಿ ಆಯೋಜಿಸಿರುವ ಪುಸ್ತಕ ಸಂತೆಯನ್ನು ಪುಸ್ತಕ ಪರಿಚಾರಕ ಅಂಕೇಗೌಡ ಉದ್ಘಾಟಿಸಿದರು. ಶುಕ್ರವಾರದಿಂದ ಭಾನುವಾರದವರೆಗೆ ನಡೆಯಲಿರುವ ಪುಸ್ತಕ ಸಂತೆ ಬೆಳಗ್ಗೆ 10ರಿಂದ ರಾತ್ರಿ 9ರವರೆಗೆ ಸಾಹಿತ್ಯಾಸಕ್ತರನ್ನು ಸೆಳೆಯಲಿದೆ.
ವೀರಲೋಕ ಪ್ರಕಾಶನ ಸಂಸ್ಥೆ ಕನ್ನಡ ಪುಸ್ತಕಗಳು ಪ್ರತಿಯೊಬ್ಬರಿಗೂ ಸಿಗುವಂತಾಗಬೇಕು ಎಂಬ ಸದುದ್ದೇಶದಿಂದ ಆಯೋಜಿಸಿರುವ ಈ ವೀರಲೋಕ ಪುಸ್ತಕ ಸಂತೆ 2ರಲ್ಲಿ ಸುಮಾರು 95 ಪುಸ್ತಕ ಮಳಿಗೆಗಳಲ್ಲಿ ಕನ್ನಡ ಪುಸ್ತಕಗಳನ್ನೇ ಮಾರಾಟ ಮಾಡುತ್ತಿರುವುದು ವಿಶೇಷ. ಮುಖ್ಯವಾಗಿ ಶಾಲಿನಿ ಮೈದಾನದೆಲ್ಲೆಡೆ ಕೆಂಪು, ಹಳದಿ ಬಣ್ಣದ ಕನ್ನಡ ಧ್ವಜಗಳಿಂದ ಅಲಂಕೃತಗೊಂಡಿದ್ದು ಇಡೀ ವಾತಾವರಣ ಕನ್ನಡಮಯವಾಗಿರುವುದು ಮುದ ನೀಡುತ್ತಿದೆ.
ಮೈದಾನದ ಪ್ರವೇಶ ದ್ವಾರದಲ್ಲಿ ನಿರ್ಮಿಸಿರುವ ಬೃಹದಾಕಾರದ ಕಟೌಟ್‌ಗಳಲ್ಲಿ ಸಾಹಿತ್ಯ ಕ್ಷೇತ್ರದ ದಿಗ್ಗಜರು ರಾರಾಜಿಸುತ್ತಿದ್ದಾರೆ. ಪ್ರತಿ ಪುಸ್ತಕ ಮಳಿಗೆಯಲ್ಲಿ ಖರೀದಿಸುವ ಪುಸ್ತಕಗಳಿಗೆ ಶೇ.5ರಿಂದ 20ರವರೆಗೆ ರಿಯಾಯಿತಿ ನೀಡಲಾಗುತ್ತಿದೆ. ಜೊತೆಗೆ 20 ಮಳಿಗೆಗಳಲ್ಲಿ ಖುದ್ದಾಗಿ ಲೇಖಕರೇ ಉಪಸ್ಥಿತರಿದ್ದು, ಆಸಕ್ತರು ಅವರ ಹಸ್ತಾಕ್ಷರ(ಆಟೋಗ್ರಾಫ್) ಪಡೆಯಲು ಅನುಕೂಲ ಕಲ್ಪಿಸಲಾಗಿದೆ. ಪ್ರಮುಖ 20 ಕೃತಿಗಳ ಮೂಲ ಬೆಲೆ 4,385 ರು.ಇದ್ದು ಅದನ್ನು ಕಾಂಬೋ ಆಫರ್‌ನಲ್ಲಿ 3,299 ರು.ನಿಗದಿ ಖರೀದಿಸಬಹುದಾಗಿದೆ.
ಈ ವೇಳೆ ಪಾಲ್ಗೊಂಡಿದ್ದ ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಮಾತನಾಡಿ, ಎಲ್ಲ ರಂಗದಲ್ಲೂ ಹೊಡಿ-ಬಡಿ-ಲೂಟಿ ಸಂಸ್ಕೃತಿ ಶುರುವಾಗಿದೆ. ಇದು ತೊಲಗಬೇಕು, ಸರ್ವರಿಗೂ ಸಮಪಾಲು, ಸಮಬಾಳು ಸಿಗುವಂತಹ ನಾಡು-ದೇಶವನ್ನು ಕಟ್ಟಲು ಜ್ಞಾನವಂತರು ಕಂಕಣಬದ್ಧರಾಗಬೇಕು. ರಾಮಾಯಣದ ಸೀತೆ ಜನಕರಾಯನ ಸಾಕು ಮಗಳು. ಅವಳ ನಿಜವಾದ ಜನ್ಮದಾತರು, ಜಾತಿ, ಧರ್ಮ ಯಾವುದು ಗೊತ್ತಿಲ್ಲ. ಆದರೂ, ಆಕೆಯ ಸದ್ಗುಣಗಳಿಂದ ನಾವೆಲ್ಲ ಆಕೆಯನ್ನು ಆರಾಧಿಸುತ್ತೇವೆ. ಹೀಗೆ ನಮ್ಮ ಪರಂಪರೆ, ಸಂಸ್ಕೃತಿ, ಮೌಲ್ಯಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ ಹೃದಯಗಳನ್ನು ಒಡೆಯುವ ಕೆಲಸಗಳು ಆಗುತ್ತಿವೆ. ಅದಕ್ಕೆ ಬದಲು ಹೃದಯಗಳನ್ನು ಬೆಸೆಯುವ ಕೆಲಸಗಳಾಗಬೇಕಾದರೆ ಎಲ್ಲರೂ ಅಧ್ಯಯನಶೀಲರಾಗಬೇಕು ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಪುಸ್ತಕ ಪರಿಚಾರಕ ಅಂಕೇಗೌಡ, ನಿತ್ಯ ಬೆಳಗ್ಗೆ ಪತ್ರಿಕೆ ಮತ್ತು ತಿಂಗಳಿಗೊಂದು ಪುಸ್ತಕ ಓದದಿದ್ದರೆ ಅಂತಹವರ ಜೀವನ ಸಾರ್ಥಕತೆ ಕಾಣದು. ಪುಸ್ತಕಗಳನ್ನು ಪ್ರೀತಿಸದ, ಗೌರವಿಸದ ಮತ್ತು ಶಿಸ್ತಿನಿಂದ ಇರದ ವ್ಯಕ್ತಿ ಸಭ್ಯ ನಾಗರಿಕನಾಗಲಾರ ಎಂದರು.
ಕಾರ್ಯಕ್ರಮದಲ್ಲಿ ಜಯನಗರ ಶಾಸಕ ಸಿ.ಕೆ.ರಾಮಮೂರ್ತಿ, ಕನ್ನಡ ಪುಸ್ತಕ ಪ್ರಾಧಿಕಾರ ಅಧ್ಯಕ್ಷೆ ಮಾನಸ, ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ, ಸಂತೆಯ ರೂವಾರಿ ವೀರಕಪುತ್ರ ಶ್ರೀನಿವಾಸ ಇತರರಿದ್ದರು.
ಕಳೆದ 70 ವರ್ಷದಲ್ಲಿ ಹಿಂದಿಯ ಭಾಷಾ ಬೆಳವಣಿಗೆ ಶೇ.66 ರಷ್ಟಿದ್ದರೆ, ಕನ್ನಡದ ಬೆಳವಣಿಗೆ ಕೇವಲ ಶೇ.3.73ರಷ್ಟು ಇದೆ. ಆದರೆ, ಹಿಂದಿ ಓದುಗರ ಸಂಖ್ಯೆ ಶೇ.3.23 ಇದೆ. ಕನ್ನಡ ಓದುಗರ ಸಂಖ್ಯೆ ಶೇ.3.69 ಇದೆ. ಇದು ಕನ್ನಡಿಗರಿಗೆ ಪುಸ್ತಕ ಖರೀದಿಸಿ ಓದುವ ಆಸಕ್ತಿ ಇದೆ ಎಂಬುದನ್ನು ಬಿಂಬಿಸುತ್ತದೆ. ಆದರೆ, ಈ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಅಗತ್ಯವಿದೆ.
- ಡಾ.ಪುರುಷೋತ್ತಮ ಬಿಳಿಮಲೆ. ಅಧ್ಯಕ್ಷ, ಕನ್ನಡ ಪುಸ್ತಕ ಪ್ರಾಧಿಕಾರ.
ಕನ್ನಡ ನಾಡು, ನುಡಿ, ಭಾಷೆಯ ಅಭಿವೃದ್ಧಿಗೆ ಸಾಹಿತ್ಯದ ಕೊಡುಗೆ ಅಪಾರ. ಕನ್ನಡದ ಸಾಹಿತಿಗಳು, ಪ್ರಕಾಶಕರು, ಬರಹಕಾರರ ಅಭಿವೃದ್ಧಿಗೆ ಪುಸ್ತಕ ಸಂತೆ ಸಹಕಾರಿಯಾಗಿದೆ. ಪ್ರತಿಯೊಬ್ಬರು ಪುಸ್ತಕಗಳನ್ನು ಖರೀದಿಸಿ ಓದಬೇಕು.
-ಟಿ.ಎ.ನಾರಾಯಣಗೌಡ, ರಾಜ್ಯಾಧ್ಯಕ್ಷ, ಕರವೇ
ಆರು ಕೃತಿ ಲೋಕಾರ್ಪಣೆ
ಪುಸ್ತಕ ಸಂತೆ-2ರ ಶುಕ್ರವಾರದ ಕಾರ್ಯಕ್ರಮದಲ್ಲಿ ‘ಬೇಸೂರ್’-ವಿದ್ಯಾ ಭರತನಹಳ್ಳಿ, ‘ಲೈಫ್ ಸಕತಾಗಿತ್ತು ಕಣ್ರೀ’- ರವೀಂದ್ರ ವೆಂಶಿ, ‘ಚಾಲಿರೈಡ್’- ವಿ.ಶ್ರೀನಿವಾಸ ವಾಣಿಗರಹಳ್ಳಿ, ‘ಹವಳ ದ್ವೀಪ’- ಧನಪಾಲ ನಾಗರಾಜಪ್ಪ, ‘ಪರೂಕಾಳಿ’- ಬಂಡುಕೋಳಿ, ‘ಬೂಸ್ಟರ್‌ಡೋಸ್ ಮುನಿಯಮ್ಮ’- ಸಂತೆಕಸಲಗೆರೆ ಪ್ರಕಾಶ್ ಅವರ ಕೃತಿಗಳನ್ನು ಲೋಕಾರ್ಪಣೆ ಮಾಡಲಾಯಿತು.